ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಅಂಚೆ ಲಕೋಟೆಯಲ್ಲಿ ಗಾಂಧಿ ನಿಲಯ

ಗಾಂಧೀಜಿ ಚಿತ್ರ, ಸಹಿ, ವಿಶೇಷ ಅಂಚೆ ಮುದ್ರೆ
Last Updated 3 ಅಕ್ಟೋಬರ್ 2020, 15:06 IST
ಅಕ್ಷರ ಗಾತ್ರ
ADVERTISEMENT
""
""
""

ಶಿಡ್ಲಘಟ್ಟ: ಅಂಚೆ ಇಲಾಖೆಯು ಪ್ರಮುಖ ಐತಿಹಾಸಿಕ ಸ್ಥಳ, ಸಾಧಕರು, ಘಟನೆಗಳನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ‘ವಿಶೇಷ ಅಂಚೆ ಲಕೋಟೆ’ ಹೊರ ತರುತ್ತದೆ. ಆಯಾ ಸಂದರ್ಭದಲ್ಲಿ ವಿಶೇಷ ಅಂಚೆ ಮುದ್ರೆಯನ್ನೂ ರೂಪಿಸಲಾಗಿರುತ್ತದೆ. ಲಕೋಟೆಯ ಮೇಲೆ ಅದರ ವಿಶೇಷತೆಯ ಕುರಿತಂತೆ ಮೂರು ಭಾಷೆಗಳಲ್ಲಿ ಬರೆಯಲಾಗಿರುತ್ತದೆ. ಅವುಗಳನ್ನು ದೇಶ ವಿದೇಶಗಳ ಸಂಗ್ರಹಕಾರರು ತಪ್ಪದೆ ಕೊಳ್ಳುತ್ತಾರೆ.

ಕಳೆದ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ನಂದಿಬೆಟ್ಟದ ಮೇಲಿರುವ ಗಾಂಧಿ ನಿಲಯದ ಕುರಿತಂತೆ ₹20 ಬೆಲೆಯ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಈ ವಿಶೇಷ ಅಂಚೆ ಲಕೋಟೆಯ ಮೇಲೆ ಗಾಂಧಿ ನಿಲಯದ ಚಿತ್ರ, ಮಹಾತ್ಮ ಗಾಂಧಿಯವರ ಆಪ್ತ ಕಾರ್ಯದರ್ಶಿ ಮಹದೇವ್ ದೇಸಾಯಿಯವರು ನಂದಿ ಗಿರಿಧಾಮದಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಕೃತಜ್ಞತಾ ನುಡಿಗಳು, ಮಹಾತ್ಮ ಗಾಂಧಿಯವರ ಮಗ, ಸೊಸೆ, ಮೊಮ್ಮಕ್ಕಳು ಸಂದರ್ಶಕರ ಪುಸ್ತಕದಲ್ಲಿರುವ ಅವರ ಹಸ್ತಾಕ್ಷರಗಳು ಇದ್ದು, ಚಾರಿತ್ರಿಕ ದಾಖಲೆಯನ್ನು ಶಾಶ್ವತಗೊಳಿಸಲಾಗಿದೆ. ಗಾಂಧೀಜಿಯವರ ಚಿತ್ರ, ಸಹಿ, ಮೂರು ಭಾಷೆಗಳಲ್ಲಿ ಗಾಂಧಿ ನಿಲಯ ಎಂದಿರುವ ವಿಶೇಷ ಅಂಚೆ ಮುದ್ರೆ ಸಹ ಮೂಡಿಸಲಾಗಿದೆ.

ನಂದಿಬೆಟ್ಟದಲ್ಲಿರುವ ಗಾಂಧಿ ನಿಲಯ

ಗಾಂಧಿ ನಿಲಯ:ಗಾಂಧೀಜಿಯವರು ತಮ್ಮ ಆರೋಗ್ಯ ಸುಧಾರಣೆಗಾಗಿ 1927 ರಲ್ಲಿ ಮತ್ತು 1936 ರಲ್ಲಿ ನಂದಿಬೆಟ್ಟಕ್ಕೆ ಆಗಮಿಸಿ ಒಟ್ಟು 65 ದಿನಗಳ ಕಾಲ ತಂಗಿದ್ದರು. ಮೈಸೂರಿನ ಕಮಿಷನರ್ ಮಾರ್ಕ್ ಕಬ್ಬನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಫ್ರಾನ್ಸಿಸ್ ಕನಿಂಗ್ ಹ್ಯಾಮ್, ತಮಗಾಗಿ ನಂದಿಬೆಟ್ಟದಲ್ಲಿ ಒಂದು ಬಂಗಲೆಯನ್ನು ಕಟ್ಟಿಸಿದ್ದರು. ಅದರ ಬಳಿ ಓಕ್ ಮರಗಳು ಇದ್ದುದರಿಂದ ಅದನ್ನು ‘ಓಕ್‌ಲ್ಯಾಂಡ್ಸ್’ ಹೌಸ್ ಎಂದು ಕರೆಯಲಾಯಿತು. ಗಾಂಧೀಜಿ ನಂದಿಬೆಟ್ಟದಲ್ಲಿದ್ದಾಗ ನಂದಿ ಬೆಟ್ಟದ ಮೇಲೆ ರಮಣೀಯ ದೃಶ್ಯಗಳು ಕಾಣಸಿಗುವ ಅದೇ ಬಂಗಲೆಯಲ್ಲಿ ತಂಗಿದ್ದರು. ಗಾಂಧೀಜಿಯವರು ವಿಶ್ರಾಂತಿ ಪಡೆದುದರ ಸವಿನೆನಪಿಗಾಗಿ ಅದನ್ನೀಗ ‘ಗಾಂಧಿನಿಲಯ’ ಎಂದು ಮರುನಾಮಕರಣ ಮಾಡಲಾಗಿದೆ. ಗಾಂಧೀಜಿಯವರ ಪ್ರತಿಮೆಯೂ ಅಲ್ಲಿದೆ.

ಗಾಂಧಿ ಸಂಬಂಧಿಕರ ಹಸ್ತಾಕ್ಷರಗಳು

ಹಸ್ತಾಕ್ಷರ: ಮಹಾತ್ಮ ಗಾಂಧಿಯವರು ತಮ್ಮ ಆರೋಗ್ಯ ಸುಧಾರಣೆಗಾಗಿ ನಂದಿಬೆಟ್ಟದಲ್ಲಿ ತಂಗಿದ್ದು, ಇಲ್ಲಿಂದ ಹೊರಡುವಾಗ ಅವರ ಮಾನಸ ಪುತ್ರರಂತಿದ್ದ ಮಹಾದೇವ ದೇಸಾಯಿ ಅವರು ಕೃತಜ್ಞತಾ ನುಡಿಗಳನ್ನು 1936 ರ ಮೇ 31 ರಂದು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.

ಗಣ್ಯರ ಬರಹ:ನಮ್ಮ ನಂದಿಬೆಟ್ಟದಲ್ಲಿರುವ ಸಂದರ್ಶಕರ ಪುಸ್ತಕ ಅಮೂಲ್ಯವಾದುದು. ಇದರಲ್ಲಿ ಅನೇಕ ಗಣ್ಯರ ಬರವಣಿಗೆಗಳಿವೆ. ಗಾಂಧೀಜಿಯವರ ಕಾರ್ಯದರ್ಶಿ, ಮಗ, ಸೊಸೆ, ಮೊಮ್ಮಕ್ಕಳ ಹಸ್ತಾಕ್ಷರವನ್ನು ಜತನದಿಂದ ಕಾಪಾಡಿದ್ದೇವೆ. ನಂದಿಬೆಟ್ಟಕ್ಕೆ ಸಂಬಂಧಿಸಿದಂತೆ ಗಾಂಧೀಜಿ ನೆನಪು ಅನನ್ಯವಾದದ್ದು ಎಂದುತೋಟಗಾರಿಕೆ ಇಲಾಖೆಯ ನಂದಿಗಿರಿಧಾಮದ ವಿಶೇಷ ಅಧಿಕಾರಿಗೋಪಾಲ್ ಪ್ರತಿಕ್ರಿಯಿಸಿದರು.

ಗಾಂಧಿ ಹಸ್ತಾಕ್ಷರ

ಅರಳಿದ ಪ್ರೇಮ

ನಂದಿಬೆಟ್ಟದಲ್ಲಿ ಗಾಂಧೀಜಿಯವರ ಸೇವೆಯಲ್ಲಿ ನಿರತರಾಗಿದ್ದ ಸಮಯದಲ್ಲಿ ಅವರ ಕಿರಿಯ ಮಗ ದೇವದಾಸ್ ಗಾಂಧಿ ಮತ್ತು ರಾಜಗೋಪಾಲಾಚಾರಿ ಅವರ ಎರಡನೇ ಮಗಳು ಲಕ್ಷ್ಮೀದೇವಿ, ಇಬ್ಬರ ನಡುವಿನ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹವಾಗಲು ನಿಶ್ಚಯಿಸಿದರು. ಈ ಅಂತರ್ಜಾತಿ ವಿವಾಹಕ್ಕೆ ಗಾಂಧೀಜಿಯವರು ಒಪ್ಪಿದರಾದರೂ, ಐದು ವರ್ಷ ಒಬ್ಬರನ್ನೊಬ್ಬರು ಭೇಟಿ ಆಗಬಾರದು ಮತ್ತು ಪತ್ರ ವ್ಯವಹಾರ ಮಾಡಬಾರದು ಎಂಬ ಕರಾರು ವಿಧಿಸಿದರು. ಐದು ವರ್ಷದ ನಂತರ ಇಬ್ಬರು ಪ್ರೇಮಿಗಳು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾದರು. 1950 ರಲ್ಲಿ ಕರ್ನಾಟಕದ ಸಚಿವೆ ಯಶೋಧರ ದಾಸಪ್ಪ ಅವರೊಂದಿಗೆ ಈ ದಂಪತಿ ತಮ್ಮ ನಾಲ್ವರು ಮಕ್ಕಳೊಂದಿಗೆ ತಮ್ಮ ಪ್ರೇಮ ಅರಳಿದ್ದ ನಂದಿಬೆಟ್ಟಕ್ಕೆ ಭೇಟಿನೀಡಿದ್ದರು. ಅವರೆಲ್ಲರ ಹಸ್ತಾಕ್ಷರ ಕೂಡ ಸಂದರ್ಶಕರ ಪುಸ್ತಕದಲ್ಲಿದೆ (1950 ರ ಜೂನ್ 20).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT