ಶನಿವಾರ, ಅಕ್ಟೋಬರ್ 31, 2020
20 °C
ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಕ್ಕೆ ಹುನ್ನಾರ: ಆರೋಪ

ನಂದಿಬೆಟ್ಟ: ಜೀವವೈವಿಧ್ಯಕ್ಕೆ ಕುತ್ತು

ವಡ್ಡನಹಳ್ಳಿ ಭೊಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ನಂದಿಬೆಟ್ಟದಲ್ಲಿರುವ ಅಪರೂಪದ ಜೀವವೈವಿಧ್ಯಕ್ಕೆ ಕುತ್ತು ತರುವ ಹುನ್ನಾರ ನಡೆದಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನಂದಿಬೆಟ್ಟವು ಬೆಂಗಳೂರಿನಿಂದ 50 ಕಿ.ಮೀ ಹಾಗೂ ದೇವನಹಳ್ಳಿಯಿಂದ 20 ಕಿ.ಮೀ ದೂರದಲ್ಲಿದೆ. ಇದು ಗ್ರಾಮಾಂತರ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ. ಜೊತೆಗೆ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಈಗಾಗಲೇ ತೋಟಗಾರಿಕೆ ಇಲಾಖೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದ್ದು ವಿಶ್ವದ ಪ್ರವಾಸಿಗರ ಗಮನ ಸೆಳೆಯುತ್ತಿದೆ.

‘ತನ್ನ ಒಡಲಿನಲ್ಲಿ ವಿವಿಧ ಸಸ್ಯಸಂಕುಲವನ್ನು ಇಟ್ಟುಕೊಂಡಿರುವ ಈ ಬೆಟ್ಟದಲ್ಲಿ ಹಲವು ಪ್ರಭೇದಕ್ಕೆ ಸೇರಿದ ಪಕ್ಷಿಗಳು, ಕೀಟಗಳು, ಸರೀಸೃಪಗಳೂ ಇವೆ. ಜೀವವೈವಿಧ್ಯದ ತಾಣವಾಗಿರುವ ಇದನ್ನು 170 ವರ್ಷಗಳ ಹಿಂದೆಯೇ ಅಂದಿನ ಸರ್ಕಾರ ತೋಟಗಾರಿಕಾ ಇಲಾಖೆಯ ಉಸ್ತುವಾರಿಗೆ ನೀಡಿತ್ತು. ಪ್ರಸ್ತುತ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂಬುದು ತೋಟಗಾರಿಕೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಅವರ ಅಭಿಮತ.

‘ಪ್ರವಾಸೋದ್ಯಮ ಇಲಾಖೆಯ ಸಹಯೋಗದಡಿ ಈಗಿರುವ ಹೋಟೆಲ್, ವಿಶ್ರಾಂತಿ ಗೃಹಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿದರೆ ಸಾಕು. ಬೆಟ್ಟದ ಆಡಳಿತ ಮತ್ತು ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಬಾರದು. ಇದು ದುಬಾರಿ ಸುಂಕ ವಸೂಲಿಗೂ ಕಾರಣವಾಗಬಹುದು. ಇದರಿಂದ ಬಡ ಮತ್ತು ಮಧ್ಯಮವರ್ಗದ ಪ್ರವಾಸಿಗರ ಮೇಲೆ ಬರೆ ಎಳೆದಂತಾಗುತ್ತದೆ. ಭವಿಷ್ಯದಲ್ಲಿ ಪ್ರತಿಯೊಂದು ವ್ಯವಸ್ಥೆಯನ್ನೂ ವಾಣಿಜ್ಯ ಉದ್ದೇಶಕ್ಕೆ ಮೀಸಲಿಡಲಾಗುತ್ತದೆ. ಇದು ಇಲ್ಲಿನ ಜೀವವೈವಿಧ್ಯಕ್ಕೆ ಕುತ್ತು ತರಲಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಪರಿಸರವಾದಿ ಶಿವನಾಪುರ ರಮೇಶ್.

ನಂದಿಬೆಟ್ಟದಲ್ಲಿ ಈಗಾಗಲೇ ಚೆಕ್ ಡ್ಯಾಂ, ಇಂಗುಗುಂಡಿ ನಿರ್ಮಾಣ ಮಾಡಿರುವ ತೋಟಗಾರಿಕೆ ಇಲಾಖೆಯು ಮಳೆನೀರು ಸಂಗ್ರಹಕ್ಕೂ ಒತ್ತು ನೀಡಿದೆ. ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ. ಟಿಪ್ಪು ಡ್ರಾಪ್‍ಗೆ ತಂತಿಬೇಲಿ ಅಳವಡಿಸಲಾಗಿದೆ. ಜವಾಹರ ಲಾಲ್‌ ನೆಹರೂ ಮೊದಲ ಬಾರಿಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ ನೆನಪಿಗಾಗಿ ನಿರ್ಮಾಣ ಮಾಡಲಾಗಿದ್ದ ನೆಹರೂ ಭವನವನ್ನು ₹ 2 ಕೋಟಿ ವೆಚ್ಚದಡಿ ನವೀಕರಿಸಲಾಗಿದೆ. ಈಗಿದ್ದರೂ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಜರೂರತ್ತು ಏನಿದೆ’ ಎಂಬುದು ಆರ್‌ಟಿಐ ಕಾರ್ಯಕರ್ತ ಚಿಕ್ಕೆಗೌಡ ಅವರ ಪ್ರಶ್ನೆ.

ಹಸ್ತಾಂತರ ಬೇಡ: ವಿವಿಧ ಪ್ರಭೇದದ ಕಾಡು ಪುಷ್ಪಗಳು ಇಲ್ಲಿವೆ. ಇಲ್ಲಿನ ತಂಪಿನ ವಾತಾವರಣ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದರೆ ಬೆಟ್ಟದಲ್ಲಿರುವ ಅಪಾರ ವನ ಸಂಪತ್ತು ದಿನಕಳೆದಂತೆ ಮಾಯವಾಗಿ ಕಾಂಕ್ರಿಟ್ ಕಟ್ಟಡಗಳ ತಾಣವಾಗುತ್ತದೆ. ಇದು ಇಲ್ಲಿನ ಅಪರೂಪದ ಜೀವಸಂಕುಲಕ್ಕೆ ಅಪಾಯ ತರಲಿದೆ. ರಾಜ್ಯ ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಪರಿಸರವಾದಿಗಳು ಆಗ್ರಹ.

‘ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ನಂದಿಬೆಟ್ಟದ ಆಡಳಿತ ನಿರ್ವಹಣಾ ವ್ಯವಸ್ಥೆಯ ಜವಾಬ್ದಾರಿ ನೀಡಿದರೆ ಪಂಚತಾರ ಸಂಸ್ಕೃತಿ ಬೇರೂರಲಿದೆ. ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳ ಸಂಖ್ಯೆ ಹೆಚ್ಚಾಗಲಿದೆ. ಶ್ರೀಮಂತರಿಗೆ ಮಾತ್ರ ನಂದಿಬೆಟ್ಟ ಸೀಮಿತವಾಗುತ್ತದೆ.

ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಡಿ ಹಣದ ಲೂಟಿಗೆ ಹೊರಟಿರುವುದು ಸರಿಯಲ್ಲ’ ಎಂಬುದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ. ಶಿವಪ್ಪ ಅವರ ಆಗ್ರಹ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು