ಸೋಮವಾರ, ಜನವರಿ 17, 2022
20 °C

ಚಿಕ್ಕಬಳ್ಳಾಪುರ: ಎಂಇಎಸ್ ಸಂಘಟನೆ ನಿಷೇಧಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಕರ್ನಾಟಕ ನಾಡ ಧ್ವಜವನ್ನು ಸುಟ್ಟು ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಭೆಯನ್ನು ವಿರೂಪಗೊಳಿಸಿದ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಕನ್ನಡಿಗರ ಸಾರಥ್ಯದಲ್ಲಿ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪ್ರವಾಸಿ ಮಂದಿರದ ಬಳಿ ಜಮಾವಣೆಯಾದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಗರದ ಬೆಂಗಳೂರು ವೃತ್ತದಲ್ಲಿ ಎಂಇಎಸ್ ಧ್ವಜವನ್ನು ದಹನ ಮಾಡಿದರು. ನಂತರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಅಂಬರೀಶ್ ಮಾತನಾಡಿ, ಎಂಇಎಸ್ ಪದೇ ಪದೇ ಪುಂಡಾಟ ನಡೆಸುತ್ತಾ ಶಾಂತಿ ಕದಡುತ್ತಿದೆ. ಕನ್ನಡದ ಧ್ವಜವನ್ನು ಸುಡುವುದು, ಕನ್ನಡಿಗರ ಮೂರ್ತಿಗಳನ್ನು ವಿರೂಪಗೊಳಿಸುವುದು, ಬೆಳಗಾವಿಯಲ್ಲಿ ಪುಂಡಾಟ ನಡೆಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ಪುಂಡಾಟಿಕೆ ನಡೆಸಿರುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬೆಳಗಾವಿ ಜಿಲ್ಲೆಯಲ್ಲಿ ಎಂಇಎಸ್ ಮತಗಳ ಮೇಲೆ ಕಣ್ಣಿಟ್ಟು ಕಾಟಾಚಾರಕ್ಕೆ ಮೊಕದ್ದಮೆ ದಾಖಲಿಸಿ ನಂತರ ಸುಮ್ಮನಾಗುವುದು ಮಾಮೂಲಿಯಾಗಿದೆ. ಈ ದೌರ್ಬಲ್ಯದಿಂದಲೇ ಅವರು ಕನ್ನಡಿಗರ ಮೇಲೆ ದೌರ್ಜನ್ಯಕ್ಕೂ ಮುಂದಾಗಿದ್ದಾರೆ. ಇನ್ನು ಮುಂದೆ ಸರ್ಕಾರ ಅದಕ್ಕೆ ಅವಕಾಶ ನೀಡದೆ ಮಟ್ಟ ಹಾಕಬೇಕು. ಇಲ್ಲದಿದ್ದರೆ ಕನ್ನಡಿಗರೇ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರ ಸೂಕ್ತಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಮನವಿ ಸ್ವೀಕರಿಸಿದರು.

ವೇದಿಕೆಯ ರಾಜ್ಯ ಉಪಾಧ್ಯಕ್ಷ ಆರ್.ಶ್ರೀನಿವಾಸ್, ಸಹ ಕಾರ್ಯದರ್ಶಿ ಆರ್.ನಾಗರಾಜ್, ಜಿಲ್ಲಾ ಖಜಾಂಚಿ ಲಕ್ಷ್ಮಣ್, ತಾಲ್ಲೂಕು ಕಾರ್ಯದರ್ಶಿ ಎ.ಮಂಜುನಾಥ್, ವಿಶ್ವ ಮಾನವ ಸಾಂಸ್ಕೃತಿಕ ಪ್ರತಿಷ್ಟಾನದ ಜಿಲ್ಲಾಧ್ಯಕ್ಷ ಡಾ.ಕೈವಾರ ಶ್ರೀನಿವಾಸ್, ಕಸಾಪ ಮಾಜಿ ಅಧ್ಯಕ್ಷ ಮು.ಪಾಪಣ್ಣ, ಕರವೇ ಮುಖಂಡ ರಮಣ, ಕೆ.ಸುಧಾಕರ್, ಹರೀಶ್, ಮಾದೇಶ್, ಅಂಬರೀಷ್, ಸಿ.ಡಿ.ಶಂಕರ್, ಕೃಷ್ಣಪ್ಪ, ಚಂದ್ರಬಾಬು, ರವಿ, ವೆಂಕಟೇಶ್, ಮಂಜು, ವೆಂಕಟನಾರಾಯಣ, ಗೋವಿಂದ, ಗಂಗಾಧರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.