ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡದಿರಿ: ಸಚಿವ ಸುಧಾಕರ್

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆ
Published 8 ಜೂನ್ 2024, 13:09 IST
Last Updated 8 ಜೂನ್ 2024, 13:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷವು ಸೋಲು ಅನುಭವಿಸಿದೆ. ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಧೃತಿಗೆಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಕಾಂಗ್ರೆಸ್ ಮುಖಂಡರು ಸಲಹೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಂ.ಸಿ.ಸುಧಾಕರ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಈಡೇರಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಥಾನ ಹೆಚ್ಚಿದೆ. ಶೇಕಡಾವಾರು ಮತಗಳಿಕೆ ಸಹ ಏರಿಕೆ ಆಗಿದೆ ಎಂದರು.  

ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಕಾರಣ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ರಾಜ್ಯದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆದ ಬಹಳಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿತು ಎಂದರು. 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ 40ರಷ್ಟು ಮತಪಡೆದಿತ್ತು. ಈ ಬಾರಿ ಶೇ 43ರಷ್ಟು ಮತ ಪಡೆದಿದೆ. ಈ ಮೂಲಕ ಮತಗಳಿಕೆ ಹೆಚ್ಚಳವಾಗಿದೆ ಎಂದರು. 

ಚಿಕ್ಕಬಳ್ಳಾಪುರ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಧೃತಿಗೆಡಬೇಡಿ. ಜಿ.ಪಂ ಮತ್ತು ತಾ.ಪಂ ಚುನಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಸೋಲಿನ ಕಹಿ ಮರೆತು ಪಕ್ಷ ಸಂಘಟನೆಗೆ ಮುಂದಾಗಬೇಕು.‌ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಆಯ್ಕೆ ಆಗಿದ್ದಾರೆ. ಒಗ್ಗಟ್ಟಿನಿಂದ ಕೆಲಸ ಮಾಡಿದ್ದರ ಪರಿಣಾಮ ಗೆಲುವು ಸಾಧಿಸಿದರು ಎಂದು ಹೇಳಿದರು.

ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹಿನ್ನಡೆ ಆಗಿದೆ. ಕೆಲವು ವಿಚಾರಗಳನ್ನು  ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಜಕೀಯ ತಂತ್ರಗಾರಿಕೆ ಅರ್ಥ ಮಾಡಿಕೊಳ್ಳಲು ಮತದಾರರು ವಿಫಲರಾದರು ಎಂದರು.

ಕೆಲವು ಸಂದರ್ಭದಲ್ಲಿ ನಾವು ಕೊಡುವ ಹೇಳಿಕೆಗಳನ್ನು ಜನರು ಮೆಚ್ಚುವರು. ಕೆಲವು ಸಂದರ್ಭದಲ್ಲಿ ಮೆಚ್ಚುವುದಿಲ್ಲ. ಮುಂದಿನ ದಿನಗಳಲ್ಲಿ ಈ ಎಲ್ಲವನ್ನು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ರಕ್ಷಾ ರಾಮಯ್ಯ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬಂದಿದ್ದರೂ ನಾನಾ ಕಾರಣಗಳಿಂದಾಗಿ ಅದನ್ನು ಗೆಲುವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂದರು.

ಕರ್ನಾಟಕದಲ್ಲಿ 11 ಕ್ಷೇತ್ರದಲ್ಲಿ 40ಕ್ಕಿಂತ ಕಡಿಮೆ ವಯಸ್ಸಿನವರಿಗೆ ಸ್ಪರ್ಧಿಸಲು ಅವಕಾಶ ದೊರೆತಿತ್ತು. ನಾಲ್ವರು ಯುವಕರು ಗೆಲುವು ಸಾಧಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನರಿಗೆ ಧನ್ಯವಾದಗಳು. ಚಿಕ್ಕಬಳ್ಳಾಪುರದಲ್ಲಿ ಕಳೆದ ಐದಾರು ವರ್ಷಗಳಿಂದ ಯುವ ಕಾಂಗ್ರೆಸ್ ಜೊತೆಗೂಡಿ ಕೆಲಸ ಮಾಡುತ್ತಿದ್ದೆ. ಅತಿ ಹೆಚ್ಚು ಮತಗಳನ್ನು ಪಡೆಯಲು ಪ್ರಯತ್ನಿಸಿದ್ದೇವೆ. ಮುಂಬರುವ ದಿನಗಳಲ್ಲಿಯೂ ನಮ್ಮ ಜನರ ಪರ ಕೆಲಸ ಮುಂದುವರಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್, ರಕ್ಷಾ ರಾಮಯ್ಯ ಇನ್ನು ಮುಂದೆಯೂ ಜನರ ಜೊತೆಯಲ್ಲಿ ಇರುತ್ತಾರೆ ಎಂದರು.

ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಎಸ್‌.ಎಂ.ಮುನಿಯಪ್ಪ, ಅನಸೂಯಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ನಗರಸಭೆ ಸದಸ್ಯ ರಫೀಕ್, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಡಾ.ಕೆ.ಸುಧಾಕರ್‌ಗೆ ‘ಕೈ’ ನಾಯಕರ ಅಭಿನಂದನೆ

ನೂತನ ಸಂಸದ ಡಾ.ಕೆ.ಸುಧಾಕರ್ ಅವರನ್ನು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಅಭಿನಂದಿಸಿದರು. ಡಾ.ಎಂ.ಸಿ.ಸುಧಾಕರ್ ‘ಅಭಿವೃದ್ಧಿಯ ವಿಚಾರವಾಗಿ ಜೊತೆಯಲ್ಲಿ ಸಾಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಡಾ.ಕೆ.ಸುಧಾಕರ್ ಅವರನ್ನು ಅಭಿನಂದಿಸುವೆ’ ಎಂದರು. ರಕ್ಷಾ ರಾಮಯ್ಯ ಮಾತನಾಡಿ ಸುಧಾಕರ್ ಅವರಿಗೆ ಶುಭ ಕೋರುತ್ತೇನೆ. ಜನರ ನಿರೀಕ್ಷೆಯಂತೆ ಅವರು ಕೆಲಸ ಮಾಡುತ್ತಾರೆ. ಕ್ಷೇತ್ರದ ಜನರ ಧ್ವನಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. 

‘ರಕ್ಷಾ ಚಿಕ್ಕಬಳ್ಳಾಪುರ ನೇತೃತ್ವವಹಿಸಲಿ’

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿವೆ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ ತಿಳಿಸಿದರು ಮುಂದಿನ ದಿನಗಳಲ್ಲಿ ರಕ್ಷಾ ರಾಮಯ್ಯ ಎಂ.ಆರ್.ಸೀತಾರಾಮ್  ಚಿಕ್ಕಬಳ್ಳಾಪುರ ಕ್ಷೇತ್ರದ ನೇತೃತ್ವವಹಿಸಲಿ. ಅವರ ಜೊತೆಯಲ್ಲಿ ಇರುತ್ತೇವೆ ಎಂದರು.

‘ಮುನಿಯಪ್ಪ ದೂಷಣೆ ಸಾಧ್ಯವಿಲ್ಲ’

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನಲ್ಲಿ ನನ್ನ ಪಾತ್ರವಿಲ್ಲ ಎನ್ನುವ ಸಚಿವ ಕೆ.ಎಚ್.ಮುನಿಯಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿದ ಡಾ.ಎಂ.ಸಿ.ಸುಧಾಕರ್ ‘ಕೋಲಾರ ಕ್ಷೇತ್ರದಲ್ಲಿ ಮುನಿಯಪ್ಪ ಅವರ ಪ್ರಭಾವವಿದ್ದರೂ ಜವಾಬ್ದಾರಿ ನೀಡಿರಲಿಲ್ಲ. ಅವರಿಗೆ ಚಿಕ್ಕಬಳ್ಳಾಪುರದ ಉಸ್ತುವಾರಿ ನೀಡಲಾಗಿತ್ತು. ಆದ್ದರಿಂದ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದರು. ಅವರ ಕ್ಷೇತ್ರ ದೇವನಹಳ್ಳಿಯಲ್ಲಿಯೂ ಬಿಜೆಪಿ ಲೀಡ್ ಪಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಕಾರಣದಿಂದ ನಮ್ಮ ಊಹೆಗಳು ಫಲಿಸಲಿಲ್ಲ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT