ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ, ಡಿಸಿಎಂ ಹುದ್ದೆ | ಹೈಕಮಾಂಡ್ ತೀರ್ಮಾನವೇ ಅಂತಿಮ: ಎಸ್.ಎನ್.ಸುಬ್ಬಾರೆಡ್ಡಿ

Published 6 ಜುಲೈ 2024, 14:27 IST
Last Updated 6 ಜುಲೈ 2024, 14:27 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆಗಳನ್ನು ನೇಮಕ ಮಾಡುವುದು ಕಾಂಗ್ರೆಸ್ ಹೈಕಮಾಂಡ್‌ನಿಂದ ಸಾಧ್ಯ. ಆದರೆ ಸ್ವಾಮೀಜಿ, ಅಭಿಮಾನಿಗಳು ತಮ್ಮ ಅಭಿಪ್ರಾಯ ಹೇಳಿ ಜನರಲ್ಲಿ ಗೊಂದಲ ಮೂಡಿಸಬಾರದು. ಸದ್ಯಕ್ಕೆ ಸಿಎಂ, ಡಿಸಿಎಂ ಹುದ್ದೆ ಖಾಲಿ ಇಲ್ಲ’ ಎಂದು ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ‘ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದು, ಸ್ವತಂತ್ರವಾಗಿ ಜನಪರ ಆಡಳಿತ ನೀಡುತ್ತಿದೆ. ಕೆಂಪೇಗೌಡ ಜಯಂತಿಯಲ್ಲಿ ಸ್ವಾಮೀಜಿಯೊಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಿ ಎಂಬ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗಳು ಮಠ, ಅಧ್ಯಾತ್ಮಿಕ ಶಾಲೆ, ಕಾಲೇಜುಗಳು ನಿರ್ವಹಣೆ, ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ರಾಜಕೀಯದ ಮಾತು ಆಡುವುದು ಬೇಡ’ ಎಂದರು.

‘ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ತಕ್ಕ ಕಾಲದಲ್ಲಿ ಸಿಎಂ, ಡಿಸಿಎಂಗಳನ್ನು ಆಯ್ಕೆ ಮಾಡುತ್ತದೆ. ಕೆಲವರ ಹೇಳಿಕೆಗಳನ್ನು ಮಾಧ್ಯಮಗಳು ವೈಭವೀಕರಿಸಿ ಪ್ರಸಾರ ಮಾಡಿ, ಜನರಲ್ಲಿ ಗೊಂದಲ ಮೂಡಿಸಿದೆ’ ಎಂದು ತಿಳಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ತನಿಖಾ ಹಂತದಲ್ಲಿ ಇದೆ. ಭ್ರಷ್ಟಾಚಾರ ಆಗಿದೆಯೇ? ಇಲ್ಲವೇ? ಎಂದು ತನಿಖೆ ಆದ ಮೇಲೆ ತಿಳಿಯಲಿದೆ. ಯಾರು ತಪ್ಪಿತಸ್ಥರಿದ್ದರೆ ಅವರಿಗೆ ಶಿಕ್ಷೆ ಆಗುತ್ತದೆ. ಮೂಡಾ ಹಗರಣ ತನಿಖೆಯಲ್ಲಿ ಇದೆ. ವಿನಾಃಕಾರಣ ಬಿಜೆಪಿಯವರು ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಹಗರಣವನ್ನು ಇದೀಗ ರಾಜಕೀಯ ಮಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಅಧಿಕಾರ ಕಳೆದುಕೊಂಡು ವಿನಾಃಕಾರಣ ಗೊಂದಲ ಸೃಷ್ಟಿಸುತ್ತಿದೆ’ ಎಂದರು.

‘ನೂತನ ಪಡಿತರ ಚೀಟಿ, ತಿದ್ದುಪಡಿ ಮಾಡಲು ಸರ್ಕಾರ ನಿಗದಿಪಡಿಸಿರುವುದು ಶಾಸಕರಾಗಿಯೇ ನನಗೆ ತಿಳಿದಿಲ್ಲ. ಇನ್ನು ಗ್ರಾಮೀಣ ಜನರಿಗೆ ತಿಳಿಯುತ್ತಾ?’ ಎಂದು ಪ್ರಶ್ನಿಸಿದರು.

ಬಡಜನರು ಗಂಟೆಗಟ್ಟಲೇ ಕಾಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಮಾಹಿತಿ ಬಂದಿದೆ. ಕೆಲ ದಲ್ಲಾಳಿಗಳಿಗೆ, ಮುಖಂಡರಿಗೆ ಮಾತ್ರ ವಿಷಯ ತಿಳಿದಿದೆ ಹೊರತು ಸಾಮಾನ್ಯ ಜನರಿಗೆ ತಿಳಿದಿಲ್ಲ. ಈ ವಿಷಯದ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ನಿರಂತರವಾಗಿ 15 ದಿನ ನೂತನ ಪಡಿತರ ಚೀಟಿ, ತಿದ್ದುಪಡಿಗೆ ಅವಕಾಶ ನೀಡುವಂತೆ ಕೋರುತ್ತೇನೆ. ಮುಂದಿನ ವಾರದಲ್ಲಿ ಇಂದಿರಾ ಕ್ಯಾಂಟೀನ್‌ನ ಕಾಮಗಾರಿ ಪರಿಶೀಲನೆ ಮಾಡಿ ಅಭಿವೃದ್ಧಿ ಮಾಡಿಸಲಾಗುವುದು. ತಹಶೀಲ್ದಾರ್ ವಸತಿ ಗೃಹವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT