ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ವಾಡಿಕೆಗಿಂತ ಹೆಚ್ಚು ಮಳೆ, ಶೇ 69.5ರಷ್ಟು ಬಿತ್ತನೆ

ಕೃಷಿ ಚಟುವಟಿಕೆ ಬಿರುಸು, ರೈತರ ಮುಖದಲ್ಲಿ ಮುಂದಹಾಸ
Last Updated 2 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿದೆ. 10 ವರ್ಷಗಳ ನಂತರ ವಾಡಿಕೆಗಿಂತಲೂ ಅಧಿಕ ಮಳೆ ಸುರಿದಿರುವುದು ರೈತರಲ್ಲಿ ಸಂತಸ ತಂದಿದೆ. ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆ ಬಿರುಸು ಪಡೆದಿವೆ. ಬಿತ್ತನೆ ಚುರುಕಗೊಂಡಿದೆ. ಆದರೆ ಕೆರೆ ಕುಂಟೆಗಳಿಗೆ ನೀರು ಹರಿಯದಿರುವುದರಿಂದ ನೀರಿನ ಆತಂಕ ದೂರವಾಗಿಲ್ಲ.

ಜನವರಿಯಿಂದ ಜುಲೈವರೆಗೆ ತಾಲ್ಲೂಕಿನಲ್ಲಿ 251 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಈ ಅವಧಿಯಲ್ಲಿ 377 ಮೀ.ಮೀ ಮಳೆ ಸುರಿದಿದೆ. ಜುಲೈನಲ್ಲಿ ವಾಡಿಕೆಯಂತೆ 74 ಮಿ.ಮೀ ಮಳೆಯಾಗಬೇಕಿದ್ದು, 188 ಮಿ.ಮೀ ಮಳೆಯಾಗಿದೆ.

ದಶಕದ ನಂತರ ಉತ್ತಮ ಮಳೆಯಾಗಿದೆ. ಕೊರೊನಾದಿಂದಾಗಿ ಹಳ್ಳಿಗಳಿಗೆ ಬಂದವರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಒಟ್ಟು 33,118 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಜುಲೈ ಅಂತ್ಯದವರೆಗೆ 23,020 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 69.5ರಷ್ಟು ಗುರಿ ಸಾಧಿಸಲಾಗಿದೆ.

ರಾಗಿ, ಅವರೆ, ಅಲಸಂದಿ, ಹುರುಳಿ ಬಿತ್ತನೆ ಆಗಸ್ಟ್ ತಿಂಗಳ ಕೊನೆಯವರೆಗೂ ನಡೆಯಲಿದೆ. ಕೋವಿಡ್‌ನಿಂದಾಗಿ ಕೆಲಸ ಕಳೆದುಕೊಂಡು ಅನೇಕರು ಕೃಷಿಯಲ್ಲಿ ಆಸಕ್ತರಾಗಿದ್ದು, ಗುರಿ ಮೀರಿ ಬಿತ್ತನೆಯಾಗುವ ಅಂದಾಜಿದೆ. ಅನೇಕ ವರ್ಷಗಳಿಂದ ಕೃಷಿ ಮಾಡದೆ ಖಾಲಿ ಇದ್ದ ಪ್ರದೇಶಗಳಲ್ಲೂ ಕೃಷಿ ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ ರಾಗಿ, ತೊಗರಿ, ನೆಲಗಡಲೆ, ಮುಸುಕಿನ ಜೋಳ ಪ್ರಮುಖ ಬೆಳೆಗಳಾಗಿವೆ. ರಾಗಿ 16,145 ಬಿತ್ತನೆ ಗುರಿ ಇದೆ. ಇದುವರೆಗೆ 11,500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ 2,658 ಹೆಕ್ಟೇರ್‌ಗೆ ಗುರಿ ಇದ್ದು, 1,825 ಹೆಕ್ಟೇರ್ (ಶೇ69), ನೆಲಗಡಲೆ 6,854 ಹೆಕ್ಟೇರ್(ಶೇ.88) ಬಿತ್ತನೆಯಾಗಿದೆ. ಹೈಬ್ರೀಡ್‌ ಮುಸುಕಿನ ಜೋಳ 3,898 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 2,116 ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದರು.

ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ, ಔಷಧಿ, ರಸಗೊಬ್ಬರ ಸೇರಿದಂತೆ ಯಾವುದಕ್ಕೂ ಕೊರತೆಯಿಲ್ಲ. ಸಕಾಲದಲ್ಲಿ ಬಿತ್ತನೆ ನಡೆಯುತ್ತಿದೆ. ತೊಗರಿ ಮತ್ತು ನೆಲಗಡಲೆ ಬಿತ್ತನೆ ಅವಧಿ ಮುಗಿಯುತ್ತಿದೆ. ಪ್ರಮುಖ ಬೆಳೆಯಾದ ರಾಗಿ ಆಗಸ್ಟ್ ಕೊನೆಯವರೆಗೆ ಬಿತ್ತನೆ ಮಾಡಬಹುದು. ರಸಗೊಬ್ಬರ ಸಾಕಷ್ಟು ದಾಸ್ತಾನು ಇದೆ. ರೈತರು ಕೃಷಿ ಇಲಾಖೆ ಸಲಹೆಯಂತೆ ಯೂರಿಯಾ ಬಳಸಬೇಕು ಎಂದು ಕೃಷಿ ಅಧಿಕಾರಿ ಜಿ.ಕೆ. ದ್ಯಾವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT