ಗುರುವಾರ , ಜೂನ್ 24, 2021
23 °C
ಮುಕ್ತಾಯಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಇಂದು ನಾಮಪತ್ರ ಪರಿಶೀಲನೆ ಕಾರ್ಯ, ನಾಮಪತ್ರ ಹಿಂಪಡೆಯಲು ಜ.31 ಕೊನೆಯ ದಿನ

ನಗರಸಭೆ ಚುನಾವಣೆ: 186 ನಾಮಪತ್ರಗಳು ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ನಗರದ 31 ವಾರ್ಡ್‌ಗಳ ಪೈಕಿ 77 ನಾಮಪತ್ರಗಳು ಸಲ್ಲಿಕೆಯಾದವು. ಇದರೊಂದಿಗೆ ಒಟ್ಟು 186 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ಮಂಗಳವಾರ ಬಿಜೆಪಿಯ 14, ಕಾಂಗ್ರೆಸ್‌ನ 12, ಜೆಡಿಎಸ್‌ನ 6, ಬಿಎಸ್ಪಿಯ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜತೆಗೆ 42 ಉಮೇದುವಾರರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಹೀಗಾಗಿ ನಗರದ ತುಂಬೆಲ್ಲ ಗಲ್ಲಿಗಲ್ಲಿಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಆಕಾಂಕ್ಷಿಗಳ ಬೆಂಬಲಿಗರ ರಾಜಕೀಯ ಚಟುವಟಿಕೆಗಳು ಜೋರಾಗಿ ಕಂಡುಬಂದವು. ಆಕಾಂಕ್ಷಿಗಳು ಪೈಪೋಟಿಯಲ್ಲಿ ಬೆಂಬಲಿಗರನ್ನು ಕರೆತರುವ ಮೂಲಕ ತಮ್ಮ ಬಲ ಪ್ರದರ್ಶನಕ್ಕೆ ಮುಂದಾದ ದೃಶ್ಯಗಳು ಸಾಮಾನ್ಯವಾಗಿದ್ದವು.

1 ರಿಂದ 8 ವಾರ್ಡ್ ಉಮೇದುವಾರರು ನಗರದ ಹಳೆಯ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿ, 9 ರಿಂದ 16ನೇ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ನಗರದ ಎಂ.ಜಿ.ರಸ್ತೆಯಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು.

17 ರಿಂದ 24ರ ವಾರ್ಡ್‌ಗಳ ಉಮೇದುವಾರರು ನಗರಸಭೆ ಕಚೇರಿ, 25 ರಿಂದ 31ರ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು. ಎಲ್ಲ ಚುನಾವಣಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಜನಸಂದಣಿ ಕಂಡುಬಂತು.

ಹಳೆಯ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ ಕಾರ್ಯಾಲಯಕ್ಕೆ 2ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಜಯಮ್ಮ ಅವರು ನಾಮಪತ್ರ ಸಲ್ಲಿಸಲು ಬಂದಾಗ ಶಾಸಕ ಡಾ.ಕೆ.ಸುಧಾಕರ್, ಮಾಜಿ ಶಾಸಕ ಶಿವಾನಂದ್, ಮುಖಂಡರಾದ ಕೆ.ವಿ.ನಾಗರಾಜ್, ಕೇಶವಕುಮಾರ್ ಸಾಥ್‌ ನೀಡಿದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ್, ‘ಕಾಂಗ್ರೆಸ್ ಮುಳುಗುವ ಹಡಗು. ಅದಕ್ಕೆ ದೇಶದಲ್ಲಿ ಭವಿಷ್ಯ ಇಲ್ಲ. ಬಿಜೆಪಿ ಮಾತ್ರ ದೇಶ ಕಟ್ಟುವಂತಹ ಸಾಮರ್ಥ್ಯವಿರುವ ಪಕ್ಷ. ಬಿಜೆಪಿ ದೇಶದ ಬಗ್ಗೆ ಪ್ರೀತಿ, ಗೌರವ ಹೊಂದಿದೆ. ಆ ಕಾರಣಕ್ಕಾಗಿಯೇ ಭವಿಷ್ಯದ ದೂರದೃಷ್ಟಿಯಿಂದ ನಾವು ಚರ್ಚಿಸಿ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ತೀರ್ಮಾನ ಮಾಡಿದೆವು’ ಎಂದು ಹೇಳಿದರು.

ಕೆಲ ವಾರ್ಡ್‌ಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರು ಬಂಡಾಯ ಎದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ಪಕ್ಷದ ಬಿ.ಫಾರ್ಮ್ ಪಡೆದ ಆಕಾಂಕ್ಷಿಗಳಿಗೆ, ಮುಖಂಡರಿಗೆ ಸಂಕಟ ತಂದೊಡ್ಡಿದೆ. ಹೀಗಾಗಿ ಅತೃಪ್ತರನ್ನು ಸಮಾಧಾನಪಡಿಸುವ ಕಾರ್ಯಗಳು ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿವೆ ಎನ್ನಲಾಗಿದೆ.

ಬುಧವಾರ (ಜ.29) ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜ.31 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಹೀಗಾಗಿ ಎರಡ್ಮೂರು ದಿನಗಳಲ್ಲಿ ಬಂಡಾಯಗಾರರನ್ನು ಸಮಾಧಾನ ಪಡಿಸಿ ಉಮೇದುವಾರಿಕೆ ವಾಪಸ್‌ ಪಡೆಯುವಂತೆ ಮನ ಒಲಿಸುವ ಕಾರ್ಯಗಳು ಜೋರಾಗಿ ನಡೆಯುವ ಸಾಧ್ಯತೆ ಇದೆ.

ಫೆ.9 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದರೆ ಫೆ.10 ರಂದು ನಡೆಸಬೇಕಾಗುತ್ತದೆ. ಫೆ.11 ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು