ಬುಧವಾರ, ಸೆಪ್ಟೆಂಬರ್ 22, 2021
25 °C
ಚಿಕ್ಕಬಳ್ಳಾಪುರ: ಗಿರಿಧಾಮದ ಸುತ್ತಲಿನ ಭೂಮಿಗೆ ಬಂಗಾರದ ಬೆಲೆ

ಲೇಔಟ್, ವಿಲ್ಲಾ, ಗಣಿಗಾರಿಕೆ ನಂದಿಗೆ ತಂದಿತು ಕುತ್ತು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಲೇಔಟ್‌ಗಳು, ವಿಲ್ಲಾಗಳ ನಿರ್ಮಾಣ, ಕಲ್ಲು ಗಣಿಗಾರಿಕೆಯು ನಂದಿ ಗಿರಿಧಾಮಕ್ಕೆ ಕಂಟಕವಾಗಿವೆ. ಗಿರಿಧಾಮವು ಬಯಲುಸೀಮೆಯ ಸೂಕ್ಷ್ಮವೈವಿಧ್ಯದ ತಾಣ ಎನಿಸಿದೆ. ಇಲ್ಲಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಣ್ಣಿನ ದಿಬ್ಬ ಕುಸಿದಿದೆ.

ಈ ಅವಘಡ ‘ಸೂಕ್ಷ್ಮವಲಯ’ಕ್ಕೆ ಭವಿಷ್ಯದಲ್ಲಿ ಕುತ್ತು ಎದುರಾಗಲಿದೆಯೇ ಎನ್ನುವ ಚರ್ಚೆಗೆ ಕಾರಣವಾಗಿದೆ.

ಬೆಟ್ಟದಿಂದ ಕೆಳಭಾಗಕ್ಕೆ ನೀರು ಹರಿಯುವ ಜಾಗದಲ್ಲಿ ದಿಬ್ಬ ಕುಸಿದಿದೆ. ಮೇಲ್ನೋಟಕ್ಕೆ ಮಳೆಯ ಕಾರಣದಿಂದಲೇ ಈ ಅವಘಡ ನಡೆದಿದೆ ಎನಿಸುತ್ತದೆ. ಆದರೆ, ಬೆಟ್ಟದ ತಪ್ಪಲು ಹಾಗೂ ಸುತ್ತಮುತ್ತಲಿನ ಹಳ್ಳಿಗಳತ್ತ ಕಣ್ಣು ಹಾಯಿಸಿದರೆ ಸೂಕ್ಷ್ಮ ತಾಣ ಎನಿಸಿರುವ ನಂದಿಯ ಅವಘಡಕ್ಕೆ ಲೇಔಟ್, ವಿಲ್ಲಾಗಳ ನಿರ್ಮಾಣ, ಕಲ್ಲು ಗಣಿಗಾರಿಕೆಯೂ ಕಾರಣವಾಯಿತೇ ಎನ್ನುವ ಅನುಮಾನ ಮೂಡಿಸುತ್ತದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ, ಮುದ್ದೇನಹಳ್ಳಿ, ಕುಪ್ಪಹಳ್ಳಿ, ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಿಹಳ್ಳಿ, ಮೆಳೆಕೋಟೆ ಪಂಚಾಯಿತಿಯ ಗ್ರಾಮಗಳು ನಂದಿಬೆಟ್ಟವನ್ನು ಸುತ್ತುವರಿದಿವೆ. ನಂದಿಬೆಟ್ಟದ ಆಸುಪಾಸಿರುವ ಕಾರಣದಿಂದಲೇ ಈ ಹಳ್ಳಿಗಳಲ್ಲಿ ಭೂಮಿಯ ಬೆಲೆ ಕೋಟಿ ಕೋಟಿ ದಾಟಿದೆ. ಈ ಹಳ್ಳಿಗಳ ಸುತ್ತ ಲೇಔಟ್‌ಗಳು, ವಿಲ್ಲಾಗಳು ಹೇರಳವಾಗಿಯೇ ತಲೆ ಎತ್ತಿವೆ. ಬೆಟ್ಟದ ಬುಡ ಒತ್ತುವರಿಗೆ ನಲುಗಿದೆ.

‘ಲೇಔಟ್‌ಗಳನ್ನು ರೂಪಿಸುವಾಗ ವಾಸ್ತುಪ್ರಕಾರ ಇರಬೇಕು ಎನ್ನುವ ಕಾರಣಕ್ಕೆ ಆ ಜಮೀನುಗಳಲ್ಲಿ ಬಂಡೆಗಳು ಇದ್ದರೆ ಅವುಗಳನ್ನು ಸ್ಫೋಟಿಸಲಾಗುತ್ತಿದೆ. ಈ ಸ್ಫೋಟದಿಂದ ನಂದಿಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಪಾಲರ್‌ ನದಿಗಳಿಗೆ ಕುತ್ತು ಬಂದಿದೆ. ಹರಿವಿನ ಪಾತ್ರವೂ ಬದಲಾಗಿದೆ’ ಎಂದು ಗ್ರೀನ್ ಥಾಟ್ಸ್ ಫೌಂಡೇಶನ್‌ನ ಕಾರ್ಯದರ್ಶಿ ಚೊಕ್ಕಳ್ಳಿ ಕಲ್ಯಾಣ್ ದೂರುತ್ತಾರೆ.

‘ಹೊಸ ಲೇಔಟ್‌ಗಳನ್ನು ಸಮತಟ್ಟು ಮಾಡಲು ಬೆಟ್ಟದ ತಪ್ಪಲಿನಲ್ಲಿರುವ ಕೆಂಪು ಮಣ್ಣನ್ನು ಬಗೆಯಲಾಗುತ್ತಿದೆ. ಈ ಎಲ್ಲ ಕಾರಣದಿಂದ ನಂದಿ ಪರಿಸರಕ್ಕೆ ಪೆಟ್ಟು ಬೀಳುತ್ತಿದೆ. ನಂದಿ ಪರಿಸರದಲ್ಲಿ ಯಾವುದೇ ಯೋಜನೆಗಳು ಕಾರ್ಯಗತವಾಗುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಪರಿಸರ ಅಧ್ಯಯನ ನಡೆಯಬೇಕು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ’ ಎಂದು ಆರೋಪಿಸುತ್ತಾರೆ.

‘ನಂದಿಗಿರಿಧಾಮಕ್ಕೆ ಬ್ರಹ್ಮಗಿರಿ, ಚನ್ನಗಿರಿ, ಸ್ಕಂದಗಿರಿ, ದಿಬ್ಬಗಿರಿ ಹೊಂದಿಕೊಂಡಿವೆ. ಇಲ್ಲಿ ಪ್ರಕೃತಿಗೆ ವಿರುದ್ಧವಾದ ಚಟುವಟಿಕೆಗಳು ನಡೆದರೆ ಇಡೀ ಗಿರಿಗಳ ಸಾಲಿನ ಮೇಲೆ ಪರಿಣಾಮ ಬೀರುತ್ತದೆ. ನಂದಿ ಬೆಟ್ಟದ ಪರಿಸರದಲ್ಲಿನ ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳನ್ನು ನೋಡಿದರೆ ಗಿರಿಧಾಮವು ‘ಶ್ರೀಮಂತರ ವಿಲಾಸಿ ತಾಣ’ ಆಗುತ್ತಿರುವುದು ಖಚಿತವಾಗುತ್ತದೆ. ಬೆಟ್ಟದ ಬುಡದಲ್ಲಿ ಒತ್ತುವರಿ ನಡೆದಿದೆ. ಈ ಎಲ್ಲದರಿಂದ ನಂದಿಯ ಸೂಕ್ಷ್ಮ ಪರಿಸರ ವಲಯ ಘಾಸಿಗೊಳ್ಳುತ್ತಿದೆ’ ಎನ್ನುತ್ತಾರೆ ನಂದಿಬೆಟ್ಟದ ಅಧಿಕಾರಿಗಳು.

‘ನಂದಿ ಬೆಟ್ಟದ ಸುತ್ತಮುತ್ತ ಜಮೀನು ಕೇಳಿಕೊಂಡು ಬಹಳಷ್ಟು ಜನರು ಕರೆ ಮಾಡುವರು. ಕಾರಹಳ್ಳಿ ಕಡೆಯಿಂದ ಬೆಟ್ಟಕ್ಕೆ ಸಾಗುವ ದಾರಿ, ಬೆಟ್ಟದ ಕ್ರಾಸ್, ಸುಲ್ತಾನಪೇಟೆ, ಗಾಂಧಿಪುರ, ಹೆಗ್ಗಡಿಹಳ್ಳಿ ಹೀಗೆ ಬೆಟ್ಟದ ಸುತ್ತಲೇ ಜಮೀನು ಬೇಕು ಎಂದು ಕೇಳುವರು. ಇಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನಂದಿ ಗ್ರಾಮದ ಗಗನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.