ಶನಿವಾರ, ಅಕ್ಟೋಬರ್ 23, 2021
20 °C
ಹೆಚ್ಚಿದ ರಿಯಲ್ ಎಸ್ಟೇಟ್ ವ್ಯವಹಾರ: ರೈತರ ಜಮೀನುಗಳಿಗೆ ತೆರಳಲು ಮಾರ್ಗಗಳೇ ಇಲ್ಲ!

ಬೇನಾಮಿ ಹೂಡಿಕೆಯ ತಾಣ ನಂದಿಬೆಟ್ಟ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಂದಿಬೆಟ್ಟ ಪ್ರವಾಸಿ ತಾಣಕ್ಕೆ ಪ್ರವಾಸಿಗರ ಪ್ರವೇಶ ಹೆಚ್ಚಿದಂತೆ ಆರ್ಥಿಕವಾಗಿ ಬೆಳೆಯುತ್ತಿದೆ. ಈ ಪರಿಣಾಮ ಸುತ್ತಲಿನ ಭೂಮಿ ಬೆಲೆಯೂ ಹೆಚ್ಚಿದೆ. ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ರಾಜ್ಯ ಹೊರರಾಜ್ಯಗಳ ಪ್ರಭಾವಿಗಳು, ಹಣವುಳ್ಳವರಿಗೆ ನಂದಿ ಹೂಡಿಕೆಯ ಪ್ರಶಸ್ತ ತಾಣವಾಗಿದೆ. ಪ್ರಭಾವಿ ರಾಜಕಾರಣಿಗಳು, ಅವರ ಆಪ್ತರು, ಬಂಧು ಬಳಗದ ಹೆಸರಿನಲ್ಲಿಯೂ ಇಲ್ಲಿ ಜಮೀನುಗಳಿವೆ.

ಅಷ್ಟೇಕೆ ಬೇನಾಮಿ ಹೆಸರಿನಲ್ಲಿ ಪ್ರಭಾವಿಗಳು ಇಲ್ಲಿನ ಜಮೀನುಗಳನ್ನು ಖರೀದಿಸಿದ್ದಾರೆ ಎನ್ನುವ ಮಾತು ಜನರಿಂದ ಕೇಳಿ ಬರುತ್ತದೆ. ಪಶ್ಚಿಮ ಬಂಗಾಳದ ಕೋಲ್ಕತ್ತದಿಂದಲೂ ಹೂಡಿಕೆ ಆಗಿದೆ. ಕೋಲ್ಕತ್ತದವರು ಗಾಂಧಿಪುರದ ಬಳಿ ಬೃಹತ್ ಮಟ್ಟದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ.

ಈ ಮೂರು ತಾಲ್ಲೂಕುಗಳಿಂದ ನಂದಿ ಸಂಪರ್ಕಿಸುವ ರಸ್ತೆಗಳಲ್ಲಿ ಎದ್ದಿರುವ ಬೃಹತ್ ಕಟ್ಟಡಗಳು, ಹೋಟೆಲ್‌ಗಳು, ‘ಇದು ಸಾಮಾನ್ಯ ಜನರ ಹೂಡಿಕೆಯಲ್ಲ’ ಎನ್ನುವುದನ್ನು ಸಾರಿ ಹೇಳುತ್ತವೆ.

ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ಭಾಗಗಳಲ್ಲಿ ಲೇಔಟ್‌ಗಳು, ವಿಲ್ಲಾಗಳು ಹೇರಳ ಸಂಖ್ಯೆಯಲ್ಲಿಯೇ ಇವೆ. ನಂದಿ ಗ್ರಾಮದಿಂದ ಬೆಟ್ಟಕ್ಕೆ ಸಾಗುವ ದಾರಿಯಲ್ಲಿರುವ ವಿಲ್ಲಾಗಳ ಬೆಲೆ ₹ 1.5 ಕೋಟಿಯಂದ ₹ 4.5 ಕೋಟಿಯವರೆಗೂ ಇದೆ.

ಹೆಚ್ಚಿದ ಏಜೆಂಟರು: ನಂದಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜಮೀನುಗಳನ್ನು ಮಾರಾಟ ಮಾಡಿಸುವ ರಿಯಲ್ ಎಸ್ಟೇಟ್ ಏಜೆಂಟರು ಗಣನೀಯವಾಗಿ ಇದ್ದಾರೆ. ಕೆಲವರು ಸಣ್ಣ ಮಟ್ಟದಲ್ಲಿ ರಿಯಲ್ ಎಸ್ಟೇಟ್ ನಡೆಸಿದರೆ ಪ್ರಭಾವಿಗಳು ದೊಡ್ಡ ಮಟ್ಟದಲ್ಲಿ ವ್ಯವಹಾರ ಖುದುರಿಸುತ್ತಾರೆ.

ದಾರಿ ಬಂದ್: ರೈತರು ಸ್ನೇಹ ಸಂಬಂಧ, ವಿಶ್ವಾಸದ ಆಧಾರದ ಮೇಲೆ ತಮ್ಮ ಹೊಲ, ತೋಟಗಳಿಗೆ ತೆರಳಲು ಪರಸ್ಪರ ದಾರಿಯನ್ನು ಬಿಟ್ಟುಕೊಂಡಿದ್ದರು. ನಂದಿಯಲ್ಲಿ ಪ್ರಭಾವಿಗಳ ಖರೀದಿ ಹೆಚ್ಚಿ ಅವರು ಹೊಲಗಳಿಗೆ ಬೇಲಿ ಹಾಕಲು ಮುಂದಾದರೋ ಆಗ ಬಹಳಷ್ಟು ರೈತರು ದಾರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ನಂದಿ ಸುತ್ತಮುತ್ತ ಇಂತಹ ಕಥೆಗಳು ಹೇರಳವಾಗಿಯೇ ಬಿಚ್ಚಿಕೊಳ್ಳುತ್ತವೆ. ‘ಆರ್ಥಿಕ ಬಲಾಢ್ಯರ ಮುಂದೆ ಸೆಣಸಲು ಸಾಧ್ಯವೇ’ ಎನ್ನುವುದು ಇಲ್ಲಿನ ರೈತರ ನುಡಿ.

ಜಮೀನಿಗೆ ದಾರಿ ಇಲ್ಲ
ನಮ್ಮ ಸುತ್ತಲಿನ ಜಮೀನನ್ನು ಹೊರಗಿನವರು ಖರೀದಿಸಿದರು. ನಮ್ಮ ಸ್ವಗ್ರಾಮವೇ ಸುಲ್ತಾನ್‌ಪೇಟೆ. ನಮ್ಮದು ಅವಿಭಕ್ತ ಕುಟುಂಬ. ಖರೀದಿ ಮಾಡಿದವರು ಹೊಲಗಳಿಗೆ ಬೇಲಿ ಹಾಕಿದರು. ನಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸುಲ್ತಾನ್‌ಪೇಟೆಯ ಶಿವಶಂಕರ್.

ಹೊರಗಿನಿಂದ ಬಂದವರು ಜಮೀನುಗಳನ್ನು ಖರೀದಿಸುತ್ತಿದ್ದಾರೆ. ನಮ್ಮ ಜಮೀನಿನ ಪಕ್ಕದಲ್ಲಿಯೇ ಬೆಂಗಳೂರಿನ ಪೊಲೀಸ್ ಅಧಿಕಾರಿ, ಶಾಸಕರು ಹೀಗೆ ಪ್ರಭಾವಿಗಳು ಜಮೀನು ಖರೀದಿಸಿದ್ದಾರೆ ಎಂದು ಹೇಳಿದರು.

ಕಾಲುದಾರಿಗಳು ಬಂದ್
ಆಂಧ್ರಪ್ರದೇಶದ ಬಿಲ್ಡರ್‌ಗಳು ಹೆಚ್ಚು ಖರೀದಿ ನಡೆಸಿದ್ದಾರೆ. ಖರೀದಿಸಿದ ಜಮೀನಿನ ಸುತ್ತ ಕಾಂಪೌಂಡ್ ಹಾಕಿಸಿದ್ದಾರೆ. ಕಾಲು ದಾರಿಗಳನ್ನೂ ಮುಚ್ಚಿದ್ದಾರೆ. ಮುಖ್ಯರಸ್ತೆಯಲ್ಲಿಯೇ ಓಡಾಡಬೇಕು. ಹೂ, ತರಕಾರಿ ಬೆಳೆದ ರೈತರ ಜಮೀನುಗಳಿಗೆ ವಾಹನಗಳು ಹೋಗುತ್ತಿದ್ದವು. ಆದರೆ ಈಗ ಅವುಗಳನ್ನು ಮುಖ್ಯರಸ್ತೆಗೆ ತರಬೇಕು ಎಂದರೆ ನಾಲ್ಕೈದು ಮಂದಿ ಬೇಕು ಎನ್ನುವ ಸ್ಥಿತಿ ಇದೆ ಎಂದು ಸಿಂಗಾಟ ಕದಿರೇನಹಳ್ಳಿಯ ಎಂ. ಮೈಲಾರಸ್ವಾಮಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು