ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಬೆಟ್ಟಕ್ಕೆ ರೋಪ್‌ವೇ; ಮಣ್ಣು ಪರೀಕ್ಷೆ, ಸರ್ವೆ ಆರಂಭ

100ಕ್ಕೂ ಹೆಚ್ಚು ಪ್ರವಾಸಿಗರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
Last Updated 16 ಜುಲೈ 2021, 9:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅಂತೂ ಜಿಲ್ಲೆಯ ಪ‍್ರವಾಸೋದ್ಯಮಕ್ಕೆ ಮತ್ತಷ್ಟು ಒಳ್ಳೆಯ ದಿನಗಳು ಬರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ನಂದಿ ಬೆಟ್ಟಕ್ಕೆ ರೋಪ್‌ವೇ (ಕೇಬಲ್ ಕಾರ್) ಅಳವಡಿಸುವ ಸಂಬಂಧ ಮೊದಲ ಹೆಜ್ಜೆ ಎನ್ನುವಂತೆ ಸರ್ವೆ ಆರಂಭವಾಗಿದೆ. ಕಳೆದ ಎರಡು ದಿನಗಳ ಹಿಂದೆ ನಂದಿ ಬೆಟ್ಟದ ಸುತ್ತಮುತ್ತ ಸರ್ವೆ ಕಾರ್ಯ ಆರಂಭವಾಗಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮುಡುಕು ಹೊಸಹಳ್ಳಿಯ ಸರ್ವೆ ನಂಬರ್ 20ರಲ್ಲಿ 3.20 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಹೆಗಡಿಹಳ್ಳಿ ಗ್ರಾಮದಲ್ಲಿ 3.20 ಎಕರೆ ಜಮೀನು ರೋಪ್‌ವೇ ಮಂಜೂರಾಗಿದೆ. ಬೆಟ್ಟದಲ್ಲಿ ಪ್ರವಾಸಿಗರನ್ನು ಇಳಿಸಲು ಮತ್ತು ಹತ್ತಿಸಿಕೊಳ್ಳಲು ಪಾರ್ಕಿಂಗ್ ಸ್ಥಳದ ಬಳಿ 50*80 ಮೀಟರ್ ವಿಸ್ತೀರ್ಣದ ಸ್ಥಳವನ್ನು ಗುರುತು ಮಾಡಲಾಗಿದೆ.

ರೋಪ್‌ವೇ ಅಧ್ಯಯನ ಮತ್ತು ಸರ್ವೆ ನಡೆಸಲು ಐಡೆಕ್‌ (ಮೂಲಸೌಕರ್ಯ ಅಭಿವೃದ್ಧಿ ನಿಗಮ)ಗೆ ಸೂಚಿಸಲಾಗಿದೆ. ಮಂಗಳವಾರದಿಂದ (ಜು.13) ಈ ಸಂಸ್ಥೆಯಿಂದ ಸರ್ವೆ ಆರಂಭವಾಗಿದೆ. ರೋಪ್‌ಯಿಂದ ಅನುಕೂಲ ಇದೆಯಾ? ನಿಮಗೆ ರೋಪ್‌ವೇನಲ್ಲಿ ತೆರಳಲು ಇಷ್ಟವಾ? ಹೀಗೆ ನಾನಾ ಪ್ರಶ್ನೆಗಳಿಗೆ ಪ್ರವಾಸಿಗರಿಂದ ಉತ್ತರ ಪಡೆದಿದ್ದಾರೆ.

100ಕ್ಕೂ ಹೆಚ್ಚು ಪ್ರವಾಸಿಗರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಬಹಳಷ್ಟು ಮಂದಿ ರೋಪ್‌ವೇ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆ ಮೂಲಗಳು. ರೋಪ್‌ವೇ ಆರಂಭದ ಸ್ಥಳ ಮತ್ತು ಅದು ಸಾಗುವ ಹಾದಿಯಲ್ಲಿ ಪಿಲ್ಲರ್‌ ನಿರ್ಮಾಣವಾಗುವ ಸ್ಥಳಗಳನ್ನು ಗುರುತಿಸಿ ಅಲ್ಲಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಆರಂಭಿಕ ಸಮೀಕ್ಷೆಗಳು ವೇಗ ಪಡೆಯುತ್ತಿವೆ.

ರೂಪ್‌ವೇನಿಂದ ಅನುಕೂಲಗಳು: ನಂದಿ ಬೆಟ್ಟ ಸಮುದ್ರ ಮಟ್ಟದಿಂದ 1,848 ಅಡಿ ಎತ್ತರದಲ್ಲಿ ಇದೆ. ರೋಪ್‌ವೇ ನಿರ್ಮಾಣದಿಂದ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ವಾಹನ ದಟ್ಟಣೆ ತಗ್ಗಿಸಬಹುದು. ಬೆಟ್ಟ ಏರುವುದು ಸುಲಭವಾಗಲಿದೆ. ರೋಪ್‌ವೇ ಪ್ರಯಾಣ ರೋಮಾಂಚಕ ಅನುಭವ ನೀಡಲಿದೆ. ‌ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರೋಪ್‌ವೇ ಮತ್ತಷ್ಟು ಬಲ ಸಹ ನೀಡಲಿದೆ.

ಆರು ವರ್ಷಗಳ ಹಿಂದೆಯೇ ಘೋಷಣೆ: ಚಿತ್ರನಟ ಶಂಕರ್‌ನಾಗ್‌ 80ರ ದಶಕದಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದರು. ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2015–16ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಿದ್ದರು.

ರೋಪ್‌ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ 2017ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಟೆಂಡರ್ ಕರೆದಾಗ ಒಂದು ಸಂಸ್ಥೆ ಮಾತ್ರ ಭಾಗವಹಿಸಿತ್ತು. ತಾಂತ್ರಿಕ ಬಿಡ್‌ನಲ್ಲಿ ತೇರ್ಗಡೆ ಆಗದ ಕಾರಣ ಟೆಂಡರ್‌ ತಿರಸ್ಕರಿಸಲಾಗಿತ್ತು. ಎರಡನೇ ಬಾರಿ ಟೆಂಡರ್‌ ಕರೆದಾಗಲೂ ಅದೇ ಸಮಸ್ಯೆ ಮರುಕಳಿಸಿತ್ತು. ಮೂರನೇ ಟೆಂಡರ್ ಸಹ ಫಲಪ್ರದವಾಗಿರಲಿಲ್ಲ.

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್ ರೋಪ್‌ವೇ ಅಳವಡಿಸುವ ಎರಡು ತಿಂಗಳ ಹಿಂದೆ ಅಧಿಕಾರಿಗಳ ಸಭೆ ಸಹ ನಡೆಸಿದ್ದರು. ಆ ಸಭೆಯಲ್ಲಿ ಐಡೇಕ್ ಸಂಸ್ಥೆಯ ಅಧಿಕಾರಿಗಳು ನಂದಿ ಬೆಟ್ಟಕ್ಕೆ ರೋಪ್‍ವೇ ನಿರ್ಮಾಣ ಯೋಜನೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಮುಂದಿನ ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್‍ವೇ ನಿರ್ಮಿಸಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು. ಸರ್ವೆ ಆರಂಭವಾಗಿರುವುದು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ರೂಪ್‌ವೇ ಆಗುತ್ತದೆ ಎನ್ನುವ ಭರವಸೆ ಬಲವಾಗಿಯೇ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT