ಭಾನುವಾರ, ಏಪ್ರಿಲ್ 11, 2021
22 °C
ಬಾಗೇಪಲ್ಲಿ ತಾಲ್ಲೂಕಿನಲ್ಲೇ ಮುಂದುವರಿಸಲು ಒತ್ತಾಯ

ನಾರೇಮದ್ದೇಪಲ್ಲಿ ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಬಾಗೇ‍ಪಲ್ಲಿ ತಾಲ್ಲೂಕಿನಲ್ಲಿಯೇ ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ನಾರೇಮದ್ದೇಪಲ್ಲಿ ಗ್ರಾಮಸ್ಥರು ಸೋಮವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.

ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಮುಖ್ಯರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ಮಾಡಿದರು.

ದೇವರಾಜು ಅರಸು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ನಾರೇಮದ್ದೇಪಲ್ಲಿ ಪ್ರೊ.ಎನ್.ವಿ. ನರಸಿಂಹಯ್ಯ ಮಾತನಾಡಿ, 2019ರ ಫೆಬ್ರುವರಿಯಲ್ಲಿಯೇ ಪಾತಪಾಳ್ಯ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಬಾಗೇಪಲ್ಲಿ ತಾಲ್ಲೂಕಿನಲ್ಲಿಯೇ ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗ ಕೆಲವು ಪಂಚಾಯಿತಿಗಳನ್ನು ನೂತನ ಚೇಳೂರು ತಾಲ್ಲೂಕಿಗೆ ಸೇರಿಸಲಾಗಿದೆ. ಕೆಲವು ಪಂಚಾಯಿತಿಗಳನ್ನು ಬಾಗೇಪಲ್ಲಿ ತಾಲ್ಲೂಕಿನಲ್ಲಿಯೇ ಉಳಿಸಲಾಗಿದೆ. ಇದರಿಂದ ಜನರಿಗೆ ಗೊಂದಲ ಸೃಷ್ಟಿಯಾಗಿದೆ ಎಂದು ದೂರಿದರು.

1898ರಲ್ಲಿ ಬಾಗೇಪಲ್ಲಿ ತಾಲ್ಲೂಕು ಆಗಿದೆ. ನಾರೇಮದ್ದೇಪಲ್ಲಿಯಿಂದ ಬಾಗೇಪಲ್ಲಿಗೆ ಕೇವಲ 18 ಕಿ.ಮೀ ದೂರ ಇದೆ. ಜನರು ಹೋಗಿಬರಲು ಅನುಕೂಲ ಇದೆ. ನೂತನ ಚೇಳೂರು ತಾಲ್ಲೂಕು ಘೋಷಣೆ ಬಗ್ಗೆ ನಮ್ಮ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ಕೆ.ಜೆ. ಸೋಮಶೇಖರ್ ಮಾತನಾಡಿ, ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ 13 ಗ್ರಾಮಗಳು ಇವೆ. ಚೇಳೂರು ತಾಲ್ಲೂಕಿಗೆ 35 ಕಿ.ಮೀನಷ್ಟು ದೂರ ಹೋಗಿಬರಲು ಜನರಿಗೆ ತೊಂದರೆ ಆಗುತ್ತದೆ. ರಸ್ತೆ ಸಂಪರ್ಕದ ಕೊರತೆ ಇದೆ. ಕಂದಾಯ, ಪಿಂಚಣಿ, ಪಡಿತರ ಚೀಟಿ ಸೇವೆ ಪಡೆಯಲು ಆಗುವುದಿಲ್ಲ. ಕೆಲವರು ರಾಜಕೀಯ ಸ್ವಾರ್ಥಕ್ಕೆ ಚೇಳೂರು ತಾಲ್ಲೂಕಿನಲ್ಲಿ ಪಂಚಾಯಿತಿಯನ್ನು ಸೇರಿಸಬೇಕು ಎಂದು ಹೇಳುತ್ತಿದ್ದಾರೆ. ನಾರೇಮದ್ದೇಪಲ್ಲಿ ಪಂಚಾಯಿತಿಯನ್ನು ಬಾಗೇಪಲ್ಲಿ ತಾಲ್ಲೂಕಿನಲ್ಲಿಯೇ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಕಚೇರಿ ಅಧಿಕಾರಿ ನಾಗರಾಜ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ಮೋಹನ್ ರೆಡ್ಡಿ, ಶ್ರೀನಾಥ್, ಮದ್ದಿರೆಡ್ಡಿ, ವೆಂಕಟರವಣಪ್ಪ, ಉತ್ತನ್ನ, ಶ್ರೀನಿವಾಸರೆಡ್ಡಿ, ಪ್ರಶಾಂತ್, ಮೊಹಂಬಾಷಾ, ಆದಿನಾರಾಯಣಪ್ಪ, ಕೃಷ್ಣಪ್ಪ, ರಘು, ಮಹೇಶ್, ಶ್ರೀನಿವಾಸ್, ಸುರೇಶ್‌ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು