ಸೋಮವಾರ, ಆಗಸ್ಟ್ 2, 2021
23 °C

ಕಪ್ಪು ಶಿಲೀಂಧ್ರ; ಅಗತ್ಯ ಪ್ರಮಾಣದ ಔಷಧಿ ಸಿಗುತ್ತಿಲ್ಲ: ಸಚಿವ ಡಾ.ಕೆ. ಸುಧಾಕರ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಸೋಂಕಿಗೆ ಎಲ್ಲ ಜಿಲ್ಲೆಗಳಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಗತ್ಯ ಪ್ರಮಾಣದಲ್ಲಿ ಔಷಧಿ ಸಿಗುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿ.ವಿ. ಸದಾನಂದಗೌಡ ಅವರ ಮೂಲಕ ಕೇಂದ್ರ ಸರ್ಕಾರದಿಂದ ಔಷಧಿ ತರಿಸುವ ಕೆಲಸ ಮಾಡಲಾಗುತ್ತಿದೆ. ಔಷಧಿಗೆ ಹೆಚ್ಚಿನ ಬೇಡಿಕೆ ಇದೆ. ನಿತ್ಯ ಎಂಟರಿಂದ ಹತ್ತು ಸಾವಿರ ವಯಲ್ಸ್ ಅಗತ್ಯವಿದೆ. ಒಬ್ಬ ಸೋಂಕಿತರಿಗೆ ಕನಿಷ್ಠ ಮೂರ್ನಾಲ್ಕು ದಿನ ನಿತ್ಯ ಆರು ವಯಲ್ಸ್ ಔಷಧಿ ಕೊಡಬೇಕು. ಆ ನಂತರ ಕಡಿಮೆ ಮಾಡಬಹುದು ಎಂದು ಹೇಳಿದರು.

ಕಪ್ಪು ಶಿಲೀಂಧ್ರ ಸೋಂಕಿಗೆ ಕಾರಣಗಳನ್ನು ಪತ್ತೆ ಹಚ್ಚಲು ತಜ್ಞರ ಸಮಿತಿ ರಚಿಸಲಾಗಿದೆ. ಅವರು ಪ್ರಾಥಮಿಕ ವರದಿ ಸಲ್ಲಿಸಿದ್ದು ಅಂತಿಮ ವರದಿ ಬರಬೇಕಿದೆ. ‌ಕೋವಿಡ್‌ ಸೋಂಕಿನಿಂದ ಹೆಚ್ಚಾಗಿದೆಯಾ, ಅಧಿಕ ಸ್ಟೆರಾಯ್ಡ್ ಬಳಕೆ, ಎರಡನೇ ಅಲೆಯ ವೈರಾಣುವಿನ ಸ್ವಭಾವದಿಂದ ಬಂದಿದೆಯಾ, ದೀರ್ಘಾವಧಿ ಆಮ್ಲಜನಕ ಸೇವನೆ ಕಾರಣವೇ ಈ ಎಲ್ಲವೂ ಅಧ್ಯಯನದ ಭಾಗವಾಗಿದೆ ಎಂದು ಹೇಳಿದರು.

ಮುಂದಿನ ಒಂದು ತಿಂಗಳ ಅವಧಿಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯು ವರದಿ ನೀಡಿದೆ. ವರದಿಯ ಅಂಶಗಳ ಬಗ್ಗೆ ಚರ್ಚಿಸಲು ಮಂಗಳವಾರ (ಜೂ.1) ಮುಖ್ಯಮಂತ್ರಿ ಅವರು ಸಚಿವರ ಸಭೆ ಕರೆದಿದ್ದಾರೆ. ಆ ಸಭೆಯ ನಂತರ ಅವರು ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಹೇಳಿದರು.

ಲಾಕ್‌ಡೌನ್‌ನಿಂದ ಸೋಂಕಿನ ಪ್ರಮಾಣ ತಗ್ಗಿದೆ. ಶೇ 40ರಿಂದ 50ರಷ್ಟಿದ್ದ ಸೋಂಕಿನ ಪ್ರಮಾಣ ಶೇ 15ಕ್ಕೆ ಇಳಿದಿದೆ. ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಸೋಂಕಿನ ಪ್ರಮಾಣ ಹೆಚ್ಚಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು