ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಬದ್ಧ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ಪುರ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಭಾಗವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರದ ವತಿಯಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ಸೌಲಭ್ಯವಿದೆ. ಈ ದಿನದ ಕಾರ್ಯಕ್ರಮದಲ್ಲಿ ಈ ಭಾಗದಲ್ಲಿನ ಸುಮಾರು 600 ಮಂದಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗುವುದು ಎಂದರು.
ಬಡವರಿಗೆ ನಿವೇಶನ ಹಾಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮುಂದಾಗಬೇಕು. ಜಿಲ್ಲೆಯಲ್ಲಿ ಈಗಾಗಲೇ 838 ಎಕರೆ ಸರ್ಕಾರಿ ಭೂಮಿಯನ್ನು ಮೀಸಲಿಟ್ಟಿದ್ದು, ಇದರಿಂದಾಗಿ ಸುಮಾರು 38 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು. ಪುರ ಗ್ರಾಮದಲ್ಲಿ ಸರ್ವೆ ನಂಬರ್ 162 ರಲ್ಲಿನ 8.5, ಬೀರಮಂಗಲ 1, ಅರಸಾಲಬಂಡೆಯಲ್ಲಿ 1 ಸೇರಿದಂತೆ ಒಟ್ಟು 18.5 ಎಕರೆಯಲ್ಲಿ ಮನೆ ನಿರ್ಮಿಸಲಾಗುವುದು. ₹2 ಕೋಟಿ ಅನುದಾನವನ್ನು ಈಗಾಗಲೇ ನೀಡಲಾಗಿದ್ದು, ಇದರಡಿಯಲ್ಲಿ ಪುರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ನೂತನ ಕೊಠಡಿಗಳ ನಿರ್ಮಾಣ ಸೇರಿದಂತೆ ಮತ್ತಷ್ಟು ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಜಿ.ಪಂ ಹಾಗೂ ತಾ.ಪಂ ಚುನಾವಣೆ ಮೀಸಲಾತಿಗೆ ಸಂಬಂಧಿಸಿದಂತೆ ಪುರ ಗ್ರಾ.ಪಂ ಯನ್ನು ಯಥಾಸ್ಥಿತಿಯಂತೆ ಕಾಯ್ದುಕೊಳ್ಳಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಆರ್ಕುಂದ ಗ್ರಾಮದ ಜನತೆಯ ಮನವಿಯ ಮೇರೆಗೆ ಪುರ ಗ್ರಾಮದಿಂದ ಆರ್ಕುಂದ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಕ್ರಿಯವಾಗಿ ಕಾರ್ಯನಿರ್ವಹಿಸಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಸರ್ಕಾರದ ಯೋಜನೆಯಾದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿನ ಒಂದು ಗ್ರಾ.ಪಂ ನ್ನು ಆಯ್ಕೆ ಮಾಡಿ ಅಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸಲು ಬದ್ಧವಾಗಿದ್ದೇವೆ. ಹಳ್ಳಿಯ ನಡೆಯ ಜತೆಗೆ ರಾತ್ರಿ ಗ್ರಾಮ ವಾಸ್ತವ್ಯ ಮಾಡಲಿದ್ದೇವೆ ಎಂದರು.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸುಮಾರು 3 ಸಾವಿರ ಫಲಾನುಭವಿಗಳಿಗೆ ಸವಲತ್ತುಗಳನ್ನು ನೀಡಲಿದ್ದೇವೆ. ಈ ಸಂದರ್ಭದಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿನ ಸುಮಾರು 600 ಕುಟುಂಬಗಳಿಗೆ 18.5 ಎಕರೆ ಭೂ ಪ್ರದೇಶದಲ್ಲಿ ನಿವೇಶನದ ಹಕ್ಕು ಪತ್ರ ನೀಡಲಾಗುವುದು. ಸಚಿವರ ಆಶಯದಂತೆ ಈ ಭಾಗದಲ್ಲಿ ಶೈಕ್ಷಣಿಕ, ವೈದ್ಯಕೀಯ ಸೇವೆಯ ಜತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.
ಜಿ.ಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಈ ಭಾಗದಲ್ಲಿನ ಸುಮಾರು 12 ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ, ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ₹2.75 ಕೋಟಿ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆಯಡಿಯಲ್ಲಿ ಮಾಡಲು ಸಿದ್ಧವಾಗಿದ್ದೇವೆ. ಸ್ಥಳೀಯ ಕೂಲಿ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದೇವೆ. ಇದಲ್ಲದೆ ಅಂತರ್ಜಲದ ಮಟ್ಟವನ್ನು ವೃದ್ಧಿಸುವ ಸಲುವಾಗಿ ಜಲಸಂರಕ್ಷಣೆ, ಮಣ್ಣು ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿಲಾಗಿದೆ ಎಂದು ಹೇಳಿದರು.
ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪುರ ಗ್ರಾಮಕ್ಕೆ ಆಗಮಿಸಿ ವೆಂಕಟರವಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಪರಿಶಿಷ್ಟ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಜನತೆಯೊಂದಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ
ಚರ್ಚಿಸಿದರು.
ಪುರವನ್ನು ಅಮೃತ ಗ್ರಾ.ಪಂ ಯನ್ನಾಗಿ ಘೋಷಣೆ: ರಾಜ್ಯ ಸರ್ಕಾರದ ವಿಶಿಷ್ಟ ಯೋಜನೆಯಾದ ಅಮೃತ ಗ್ರಾ.ಪಂ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿನ ಪುರವನ್ನು ಗುರ್ತಿಸಿದ್ದು, ಈ ಗ್ರಾಮ ಪಂಚಾಯಿತಿಯನ್ನು ಅಮೃತ ಗ್ರಾ.ಪಂ ಯೋಜನೆಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಪಿಡಿಒಗೆ ಜಿಲ್ಲಾಧಿಕಾರಿ ತರಾಟೆ: ಜಿಲ್ಲಾಧಿಕಾರಿ ಆರ್.ಲತಾ ಅವರು ಪುರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಕಾಲೋನಿಯಲ್ಲಿನ ಮಹಿಳೆಯರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿದರು. ಇಡೀ ಕಾಲೋನಿಯಲ್ಲಿ ಸಂಚರಿಸಿ ಅಲ್ಲಿನ ಚರಂಡಿಗಳ ದುಸ್ಥಿತಿ ಹಾಗೂ ಶುಚಿತ್ವದ ಸಮಸ್ಯೆಯನ್ನು ಕಂಡು ‘ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಾರೆ ಎಂದು ತಿಳಿದಿದ್ದರೂ ಗ್ರಾಮದಲ್ಲಿ ಸ್ವಚ್ಛತೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ನಿಮಗೆ ಜವಾಬ್ದಾರಿ ಇಲ್ಲವೇ? ಇದೇ ರೀತಿ ಮುಂದುವರೆದರೆ ಶೀಘ್ರದಲ್ಲೇ ನಿಮ್ಮನ್ನು ಅಮಾನತುಗೊಳಿಸಲಾಗುವುದು’ ಎಂದು ಗ್ರಾ.ಪಂ ಪಿಡಿಒ ಕೆ.ಮೀನಾಕ್ಷಿ ಅವರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ, ತಾ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿ ಇತರ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳ ಜತೆಗೆ ಹಕ್ಕು ಪತ್ರಗಳ ಮಂಜೂರಾತಿ ಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಪಿಂಚಣಿ ಕಾರ್ಡ್ ಸೇರಿದಂತೆ ಇತರ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಚಿವರ ಸಮ್ಮುಖದಲ್ಲಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿಎಫ್‌ಒ ಅರಸಾಲನ್, ಉಪವಿಭಾಗಾಧಿಕಾರಿ ರಘುನಂಧನ್, ಉಪ ಕಾರ್ಯದರ್ಶಿ ಶಿವಕುಮಾರ್, ತಹಶೀಲ್ದಾರ್ ಎಚ್.ಶ್ರೀನಿವಾಸ್, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ತಾ.ಪಂ ಇಒ ಎನ್.ಮುನಿರಾಜು, ಉಪತಹಶೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ನಾಗೇಶ್, ಗ್ರಾ.ಪಂ ಅಧ್ಯಕ್ಷ ಪಿ.ವಿ.ವಿರೂಪಾಕ್ಷಗೌಡ, ನಾರಾಯಣಸ್ವಾಮಿ, ಎ.ಬಾಲಕೃಷ್ಣ, ಹನುಮೇಗೌಡ, ಪಿ.ಎನ್.ಜಗನ್ನಾಥ್, ಸುಬ್ಬಾರೆಡ್ಡಿ, ಆನಂದ್ ರೆಡ್ಡಿ, ಯತೀಶ್, ರವಿಕುಮಾರ್, ಸುದರ್ಶನರೆಡ್ಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.