ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟದಲ್ಲಿದೆ ‘ಬಸವ ಪುರಾಣ’ದ ತಾಳೆಗರಿ

ಡಿ.ಜಿ.ಮಲ್ಲಿಕಾರ್ಜುನ
Published 12 ಮೇ 2024, 5:42 IST
Last Updated 12 ಮೇ 2024, 5:42 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಹನ್ನೆರಡನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣ ಅವರ ಜಯಂತಿಯನ್ನು ಎಲ್ಲೆಡೆ ಶುಕ್ರವಾರ ಆಚರಿಸಲಾಯಿತು.

ಬಸವಣ್ಣರ ಜೀವನ ಚರಿತ್ರೆಯೆಂದೇ ಪರಿಗಣಿಸುವ ಭೀಮ ಕವಿಯ ‘ಬಸವ ಪುರಾಣ’ದ ತಾಳೆಗರಿಗಳನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೆಲವಾರು ಮನೆಗಳಲ್ಲಿ ಈಗಲೂ ಜೋಪಾನವಾಗಿಟ್ಟುಕೊಂಡಿದ್ದಾರೆ.

ಹಳಗನ್ನಡದ ಭೀಮ ಕವಿಯ ‘ಬಸವ ಪುರಾಣ’ವನ್ನು ಹದಿಮೂರನೇ ಶತಮಾನದಲ್ಲಿ ಕೆಲವು ಲಿಪಿಕಾರರು ಹಲವಾರು ತಾಳೆಗರಿಗಳ ಪ್ರತಿಗಳನ್ನು ಮಾಡಿದ್ದು, ಅವುಗಳಲ್ಲಿ ಈಗಲೂ ಕೆಲವನ್ನು ಕಾಣಬಹುದಾಗಿದೆ. ನಗರದ ಡಿ.ಎಂ.ಜಗದೀಶ್ವರ್ ಅವರ ಮನೆಯಲ್ಲಿ ‘ಬಸವ ಪುರಾಣ’ದ ತಾಳೆಗರಿಗಳ ಕಟ್ಟನ್ನು ಸಂರಕ್ಷಿಸಲಾಗಿದೆ.

ಬಸವಣ್ಣ, ಬಸವೇಶ್ವರ, ಬಸವೇಶ, ಬಸವರಾಜ ಎಂದೆಲ್ಲಾ ಕರೆಯಲ್ಪಟ್ಟ ಬಸವಣ್ಣ (ಕ್ರಿ.ಶ.1134-1196) ಹಾಗೂ ಸಮಕಾಲೀನ ಶಿವಶರಣರ ಬಗ್ಗೆ ಮೊಟ್ಟ ಮೊದಲ ಕೃತಿಯನ್ನು ರಚಿಸಿದ್ದು ತೆಲುಗಿನಲ್ಲಿ ಎಂಬುದು ಇತಿಹಾಸದ ಮಹತ್ವದ ಸಂಗತಿ. 13ನೇ ಶತಮಾನದಲ್ಲಿ ‘ಬಸವ ಪುರಾಣಂ’ ಕೃತಿ ರಚಿಸಿದವನು ‘ಪಾಲ್ಕುರಿಕೆ ಸೋಮನಾಥ’. ಕನ್ನಡಕ್ಕೆ ಹರಿಹರನಿದ್ದಂತೆ ತೆಲುಗಿನಲ್ಲಿ ಸೋಮನಾಥ. ಬಸವೇಶ್ವರರ ಕುರಿತು ದ್ವಿಪದಿಯಲ್ಲಿ ಆತ ರಚಿಸಿರುವ ‘ಬಸವ ಪುರಾಣಂ’ ತೆಲುಗಿನ ಮಹತ್ವದ ಕೃತಿ ಎನಿಸಿದೆ. ಪ್ರತಿಭಾವಂತ ಕವಿಯಾಗಿದ್ದ ಸೋಮನಾಥ ಕನ್ನಡ ಭಾಷೆ, ಬಸವೇಶ್ವರರು ಹಾಗೂ ವಚನ ಸಾಹಿತ್ಯದ ಬಗ್ಗೆ ಆಳವಾಗಿ ತಿಳಿದಿದ್ದ. ಬಸವೇಶ್ವರ ಹಾಗೂ ಶಿವಭಕ್ತರನ್ನು ಕುರಿತ ಸೊಗಸಾದ ಕೃತಿಯಿದು.

1369ರಲ್ಲಿ ಭೀಮ ಕವಿ, ‘ಪಾಲ್ಕುರಿಕೆ ಸೋಮನಾಥ’ರ ‘ಬಸವ ಪುರಾಣಂ’ ಅನ್ನು ಕನ್ನಡಕ್ಕೆ ಅನುವಾದಿಸಿದನು. ಅವನ ‘ಬಸವ ಪುರಾಣ’ ಕೃತಿ ಹಳಗನ್ನಡದಲ್ಲಿದೆ. ಅದನ್ನು ತಾಳೆಗರಿಗಳಲ್ಲಿ ನೂರಾರು ಪ್ರತಿಗಳನ್ನು ಮಾಡಿ ಶರಣರ ಮೂಲಕ ನಾನಾ ಕಡೆ ತಲುಪಿಸಲಾಯಿತು. ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಈ ರೀತಿಯ ತಾಳೆಗರಿಗಳನ್ನು ಸಂರಕ್ಷಿಸಲಾಗಿದೆ. ಹಲವಾರು ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ.

ವೆಲ್ಚೆರು ನಾರಾಯಣರಾವ್ ಮತ್ತು ಜೀನ್.ಎಚ್.ರೋಘೇರ್ ‘ಶಿವಾಸ್ ವಾರಿಯರ್ಸ್’ ಎಂಬ ಹೆಸರಿನಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದು, ಅದನ್ನು ಅಮೆರಿಕದ ಪ್ರಿನ್ಸ್‌ಟನ್ ಲೆಗೆಸಿ ಲೈಬ್ರರಿಯವರು ಪ್ರಕಟಿಸಿದ್ದಾರೆ. ಪಿ.ವಿ.ನಾರಾಯಣ ಅವರು ಹೊಸಗನ್ನಡದಲ್ಲಿ ಸೋಮನಾಥನ ತೆಲುಗು ಬಸವ ಪುರಾಣವನ್ನು ಅದೇ ಛಂದಸ್ಸಿನಲ್ಲಿ ಅನುವಾದಿಸಿದ್ದಾರೆ. ಆರ್.ಸಿ.ಹಿರೇಮಠ್ ಅವರು ಭೀಮ ಕವಿಯ ಬಸವ ಪುರಾಣವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಭೀಮ ಕವಿಯ ‘ಬಸವ ಪುರಾಣ’ದ ತಾಳೆಗರಿ
ಭೀಮ ಕವಿಯ ‘ಬಸವ ಪುರಾಣ’ದ ತಾಳೆಗರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT