ಗುರುವಾರ , ಜನವರಿ 23, 2020
26 °C
ತಮಿಳುನಾಡಿನ ಮೇಲ್‌ಮರುವತ್ತೂರಿನ ಆದಿಪರಾಶಕ್ತಿ ದೇವಾಲಯದ ಆವರಣದಲ್ಲಿ ದಾಳಿ

ಓಂಶಕ್ತಿ ಭಕ್ತರ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ತಮಿಳುನಾಡಿನ ಮೇಲ್‌ಮರುವತ್ತೂರಿನ ಆದಿಪರಾಶಕ್ತಿ (ಓಂಶಕ್ತಿ) ದರ್ಶನಕ್ಕೆ ಹೋದ ರಾಜ್ಯದ ಭಕ್ತರ ವಾಹನಗಳ ಮೇಲೆ ಕಿಡಿಗೇಡಿಗಳ ಗುಂಪೊಂದು ಶುಕ್ರವಾರ ಸಂಜೆ ದಾಳಿ ನಡೆಸಿದ್ದು, ಘಟನೆಯಲ್ಲಿ ಚಿಕ್ಕಬಳ್ಳಾಪುರದ ಭಕ್ತರ ಮೇಲೆ ಕೂಡ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.

ನಗರದಿಂದ ಇತ್ತೀಚೆಗೆ ಒಂದು ಬಸ್‌ ಮತ್ತು ಒಂದು ಮಿನಿ ಬಸ್‌ನಲ್ಲಿ ಓಂಶಕ್ತಿ ಭಕ್ತರು ಮೇಲ್‌ಮರುವತ್ತೂರಿಗೆ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ಅವರ ಮೇಲೆ ಕೂಡ ದೇವಾಲಯದ ಆವರಣದಲ್ಲಿಯೇ ಹಲ್ಲೆ ನಡೆಸಿದ ಕಿಡಿಗೇಡಿಗಳು, ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ.

‘ನಮ್ಮ ಸ್ನೇಹಿತ ಚಿಕ್ಕಬಳ್ಳಾಪುರದ ಪ್ರಶಾಂತ್ ನಗರದ ವೆಂಕಟೇಶ್‌ ಅವರು ಇತ್ತೀಚೆಗೆ ಓಂಶಕ್ತಿ ಪ್ರವಾಸಕ್ಕೆ ಹೋಗಿದ್ದರು. ದೇವಾಲಯದ ಆವರಣದಲ್ಲಿ ಹಲ್ಲೆ ನಡೆಯುವ ಸಂದರ್ಭದಲ್ಲಿ ಅವರು ನನಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದಾಗ ಕರೆ ಕಡಿತಗೊಂಡಿತು. ಪುನಃ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಚಂದ್ರಶೇಖರ್‌ ತಿಳಿಸಿದರು.

‘ದೇವಸ್ಥಾನಕ್ಕೆ ಹೋದವರ ಮೇಲೆ ಕಾರಣವೇ ಇಲ್ಲದೆ ತಮಿಳರು ಹಲ್ಲೆ ನಡೆಸಿರುವುದು ಖಂಡನೀಯ. ಇದನ್ನು ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ಖಂಡಿಸಿ, ನಮ್ಮ ಶಕ್ತಿ ಏನೆಂದು ತೋರಿಸಬೇಕಿದೆ’ ಎಂದು ಹೇಳಿದರು. ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ವಿಚಾರಿಸಿದರೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಧರ್ಮಪುರಿಯಲ್ಲಿ ಕನ್ನಡ ಬಾವುಟ ಹಾಕಿದಕ್ಕೆ ರಾಜ್ಯದ ವಾಹನ ಚಾಲಕನ ಮೇಲೆ ಹಲ್ಲೆ ನಡೆದಿತ್ತು. ಇದರಿಂದ ರೊಚ್ಚಿಗೆದ್ದ ಕನ್ನಡಿಗರು, ರಾಜ್ಯದ ವಿವಿಧೆಡೆ ತಮಿಳು ಭಾಷಿಕರನ್ನು ತರಾಟೆಗೆ ತೆಗೆದುಕೊಂಡ ಘಟನೆಗಳು ವರದಿಯಾಗಿದ್ದವು. ಅದಕ್ಕೆ ಪ್ರತಿಕಾರವಾಗಿಯೇ ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ತಮಿಳುನಾಡಿನಲ್ಲಿ ಗುಂಪೊಂದು ಕರ್ನಾಟಕದ ನೋಂದಣಿ ಸಂಖ್ಯೆ ಉಳ್ಳ ವಾಹನಗಳ ಮೇಲೆ ದಾಳಿ ನಡೆಸಿದ ವಿಡಿಯೊ ಒಂದು ಶನಿವಾರ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು