ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

ಜಿಲ್ಲಾಡಳಿತ ಭವನದ ಎದುರು ರೈತಸಂಘದ ಪದಾಧಿಕಾರಿಗಳ ಪ್ರತಿಭಟನೆ
Last Updated 13 ಮೇ 2020, 11:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರೈತ ಸಮುದಾಯದ ಮರಣ ಶಾಸನದಂತಿರುವ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೇ ತಿದ್ದುಪಡಿ) ಮಸೂದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ’ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಇದ್ದ ನಿರ್ಬಂಧ ಸಡಿಲಿಸಿ, ಈ ಕ್ಷೇತ್ರದಲ್ಲಿ ಬೃಹತ್‌ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ಮುಂದಾಗಿದೆ‘ ಎಂದು ಹೇಳಿದರು.

’ತತ್‌ಕ್ಷಣವೇ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಈ ಸಂಬಂಧ ಕೇಂದ್ರಕ್ಕೆ ಮಾಹಿತಿ ಸಲ್ಲಿಸಬೇಕು ಎಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯಕ್ಕೆ ಪತ್ರ ಬರೆದಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ‘ ಎಂದು ತಿಳಿಸಿದರು.

’ಈ ಮಸೂದೆ ಕುರಿತಂತೆ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ನಡೆಸದೇ ರಾತ್ರೋರಾತ್ರಿ ಸುಗ್ರೀವಾಜ್ಞೆ ಸಿದ್ಧಪಡಿಸಿ ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಿದೆ. ರಾಜ್ಯಪಾಲರು ಮಸೂದೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಮಂಡಿಸಿ ಎಂದು ವಾಪಾಸ್‌ ಕಳುಹಿಸಿದ್ದಾರೆ‘ ಎಂದರು.

’ಈಗಿರುವ 1966ರ ಎಪಿಎಂಸಿ ಕಾಯ್ದೆಯು ರೈತರ ಹಿತವನ್ನೇ ಪ್ರಧಾನವಾಗಿ ಹೊಂದಿದೆ. 1986ರಲ್ಲಿ ಇದಕ್ಕೆ ತಿದ್ದುಪಡಿ ತಂದು ಕಾಯ್ದೆಯನ್ನು ಮತ್ತ‌ಷ್ಟು ಬಲಿಷ್ಠಗೊಳಿಸಲಾಗಿತ್ತು. ಒಂದೊಮ್ಮೆ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ರೈತರ ಶೋಷಣೆ ಹೆಚ್ಚಲಿದೆ‘ ಎಂದು ಹೇಳಿದರು.

’ಗ್ರಾಹಕರಿಗೆ ಸಂಸ್ಕರಿತ, ಪ್ಯಾಕೇಟ್‌ ಆಹಾರ, ಆಹಾರ ಪದಾರ್ಥಗಳನ್ನು ಪೂರೈಸುವ ವಾಲ್ ಮಾರ್ಟ್‌, ಜಿಯೋ ಮಾರ್ಕೆಟಿಂಗ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಕಾರ್ಪೊರೇಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರವಿದು‘ ಎಂದು ಆರೋಪಿಸಿದರು.

’ದೊಡ್ಡ ಕಂಪೆನಿಗಳು ಈವರೆಗೆ ಎಪಿಎಂಸಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದಿತ್ತು. ತಮ್ಮದೇ ಪ್ರಾಂಗಣ (ಯಾರ್ಡ್‌) ಹೊಂದಿರುವ ಕಂಪನಿಗಳು ರೈತರಿಂದ ಖರೀದಿ ಮಾಡಬೇಕಾದರೆ ಕೃಷಿ ಮಾರುಕಟ್ಟೆ ನಿರ್ದೇಶನಾಲಯದ ಜತೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು‘ ಎಂದು ಹೇಳಿದರು.

’ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಪಿಎಂಸಿ ಪ್ರಾಂಗಣದಿಂದ ಹೊರಗೆ ಅಥವಾ ಒಡಂಬಡಿಕೆಯ ಪ್ರಾಂಗಣ ಹೊಂದಿದವರು ಮಾತ್ರ ಖರೀದಿ ಮಾಡಬಹುದು ಎಂಬ ಷರತ್ತನ್ನು ತೆಗೆದು ಹಾಕಿ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸಲು ಸರ್ಕಾರಗಳು ಮುಂದಾಗಿವೆ‘ ಎಂದು ತಿಳಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ರಾಮಾಂಜಿನಪ್ಪ, ತಾದೂರು ಮಂಜುನಾಥ್, ರಮಣಾರೆಡ್ಡಿ, ದಪರ್ತಿ ಮುರುಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT