ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕಲ್ಪಕ್ಕೆ ಕಾದಿದೆ ಪಂಚಲಿಂಗ ದೇವಾಲಯ

ಪರಗೋಡಿನಲ್ಲಿ ಸೌಲಭ್ಯವಿಲ್ಲದ ಚೋಳರ ಕಾಲದ ದೇಗುಲ
Last Updated 17 ಮಾರ್ಚ್ 2021, 3:53 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಚೋಳರ ಕಾಲದಲ್ಲಿ ನಿರ್ಮಿಸಿದ ತಾಲ್ಲೂಕಿನ ಪರಗೋಡು ಪಂಚಲಿಂಗ ಐತಿಹಾಸಿಕ ದೇವಾಲಯ ಕಾಯಕಲ್ಪಕ್ಕೆ ಕಾಯುತ್ತಿದೆ.

ತಾಲ್ಲೂಕಿನ ಕೇಂದ್ರಕ್ಕೆ 5 ಕಿ.ಮೀ ದೂರದಲ್ಲಿರುವ ಪರಗೋಡು ರಾಷ್ಟ್ರೀಯ ಹೆದ್ದಾರಿ-7ರ ಪಕ್ಕದಲ್ಲಿ ಪಂಚಲಿಂಗೇಶ್ವರ ದೇವಸ್ಥಾನ ಇದೆ. ಪುಟ್ಟದಾದ ಹಳೆಯ ಬಿಳಿಯ ಗುಡಿಯಿಂದ ಚಿತ್ರಾವತಿ ನದಿಯ ದಂಡೆಯಲ್ಲಿ ಇದೆ. ದೇವಾಲಯ ಬಲು ಪ್ರಾಚೀನವಾಗಿದೆ. ಕ್ರಿ.ಶ 838ರಲ್ಲಿ ಚೋಳವಂಶದ ದೊರೆಯಾದ ಕುಲೋತ್ತುಂಗ ಎಂಬ ಮಹಾರಾಜನಿಂದ ಸ್ಥಾಪಿಸಲ್ಪಟ್ಟಿರಬಹುದು ಎಂದು ದೇವಾಲಯದ ಇಂದಿನ ಗೋಡೆಯಲ್ಲಿ ಇರುವ ಶಾಸನದಿಂದ ತಿಳಿದಿದೆ. ಈ ಪ್ರದೇಶವನ್ನು 'ಪಾರ್ವತಿಪುರ' ಎಂದು ಕರೆಯುತ್ತಿದ್ದರಂತೆ.

ದೇವಾಲಯದ ಮುಖ್ಯದ್ವಾರವು ದಕ್ಷಿಣಾಭಿಮುಖವಾಗಿದೆ. ದ್ವಾರದ ಮೇಲೆ ಗಾರೆಯ ಭಗ್ನವಾದ ಆಕರ್ಷಕವಾದ ವಿನಾಯಕ ಮೂರ್ತಿ ಇದೆ. ಹಿಂದೆ ಒಳಗಿದ್ದ ಕಾಳಿ ಹಾಗೂ ವೀರಭದ್ರರ ವಿಗ್ರಹಗಳನ್ನು ದ್ವಾರದ ಎಡ ಹಾಗೂ ಬಲಭಾಗದಲ್ಲಿ ಸ್ಥಾಪಿಸಿದ್ದಾರೆ. ಮುಖ್ಯದ್ವಾರ ದಾಟಿ ನವರಂಗದ ನಂತರ ಎದುರಿಗೆ ಗರ್ಭಗುಡಿಯಲ್ಲಿ ಲಿಂಗ ಇದೆ. ಇದನ್ನು ‘ಧರ್ಮೇಶ್ವರ’ ಎನ್ನುವರು. ನವರಂಗದ ಎಡಬದಿಗೆ ಪಶ್ಚಿಮದಲ್ಲಿ ಮತ್ತೊಂದು ಗರ್ಭಗುಡಿಯಲ್ಲಿ ಇರುವ ಲಿಂಗವನ್ನು ‘ಭೀಮೇಶ್ವರ’ ಎಂದು ಕರೆಯುತ್ತಾರೆ. ಆಕಾರ ಒಂದೇ ಇದ್ದರೂ ಧರ್ಮೇಶ್ವರ, ಭೀಮೇಶ್ವರನಿಗಿಂತ ಚಿಕ್ಕದಾಗಿದೆ. ಇವೆರಡು ಲಿಂಗಗಳು ಚಿಕ್ಕಬಳ್ಳಾಪುರದ ನಂದಿಗ್ರಾಮದ ಭೋಗನಂದೀಶ್ವರ ಹಾಗೂ ಕೋಲಾರದ ಸೋಮೇಶ್ವರ ಲಿಂಗಗಳಿಗಿಂತಲೂ ದೊಡ್ಡದಾಗಿದೆ.

ನವರಂಗದ ವಾಯುವ್ಯದ ಲಿಂಗವನ್ನು ‘ನಕುಲೇಶ್ವರ’ ಈಶಾನ್ಯದಲ್ಲಿನ ಲಿಂಗವನ್ನು ‘ಸಹದೇಶ್ವರ’ ಎಂದು ಕರೆಯುವರು. ಒಟ್ಟಾರೆ ದೇವಾಲಯವು ಪಂಚಪಾಂಡವರ ಪ್ರತೀಕವಾಗಿ ಐದು ಲಿಂಗಗಳು ಇರುವುದರಿಂದ ಪಂಚಲಿಂಗೇಶ್ವರ ದೇವಾಲಯ ಎಂದು ಹೆಸರು ಪಡೆದಿದೆ.

‘ಪುರಾತನ ದೇವಾಲಯದ ಆಗಿದೆ. ಆದರೆ ಸರ್ಕಾರಗಳು, ಧಾರ್ಮಿಕ ದತ್ತಿ ಇಲಾಖೆಯವರು ಸಾಕಷ್ಟು ಅಭಿವೃದ್ಧಿಪಡಿಸುವುದರಲ್ಲಿ ವಿಫಲರಾಗಿದ್ದಾರೆ. ಐತಿಹಾಸಿಕ ದೇವಾಲಯಗಳನ್ನು ಉಳಿಸಿ-ಬೆಳೆಸಬೇಕಾಗಿದೆ. ದೇವಾಲಯದ ಪಕ್ಕದಲ್ಲಿ ಚಿತ್ರಾವತಿ ನದಿ ಇದೆ. ನದಿಯ ಪಾಶ್ರ್ಚದಲ್ಲಿ ನಡುಗಡ್ಡೆ ಇದೆ. ಲಿಂಗಗಳು ಹುದುಗಿವೆ ಎಂಬ ಪ್ರತೀತಿಯೂ ಇದೆ. ದೇವಾಲಯವನ್ನು ಪ್ರಾಚ್ಯವಸ್ತು ತಜ್ಞರಿಂದ ಸಂಶೋಧನೆ ಆಗಬೇಕು. ಸುತ್ತಲಿನ ಪ್ರದೇಶದಲ್ಲಿ ಉತ್ಖನನ ನಡೆಸಿದಲ್ಲಿ ಇತಿಹಾಸದ ಅಮೂಲ್ಯ ಘಟನೆಗಳು ಬೆಳಕಿಗೆ ಬರಬಹುದು’ ಎನ್ನುತ್ತಾರೆ ಗ್ರಾಮಸ್ಥರು

ನದಿಯ ಮರಳು ಸಾಗಿಸುತ್ತಿರುವುದರಿಂದ ದೇವಾಲಯಕ್ಕೆ ಸಂಚರಿಸುವ ರಸ್ತೆಯಲ್ಲಿ ಜಲ್ಲಿ-ಕಲ್ಲುಗಳೇ ಕಾರುಬಾರು ಆಗಿದೆ. ಮೊಣಕಾಲುದ್ದ ಗುಂಡಿಗಳು ಇದೆ. ಪರಗೋಡು ಕ್ರಾಸ್‌ನಿಂದ ದೇವಾಲಯದವರಿಗೂ ಅನೇಕ ವರ್ಷಗಳಿಂದ ರಸ್ತೆ ಡಾಂಬರೀಕರಣ ಆಗಿಲ್ಲ. ಕೊಳವೆಬಾವಿ ಇಲ್ಲದೇ ಕುಡಿಯುವ ನೀರಿಗೆ ಪರದಾಡುವಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT