ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಮತ್ಸ್ಯಪ್ರಿಯರಿಗೆ ಮೀನೂಟ ದುಬಾರಿ

ಮೀನುಗಾರಿಕೆಗೆ ಋತು ಅಂತ್ಯ, ಗಗನಮುಖಿಯಾದ ಸಮುದ್ರ ಉತ್ಪನ್ನಗಳ ಬೆಲೆಗಳು
Last Updated 14 ಜುಲೈ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ನಂತರ ಗಗನಮುಖಿಯಾಗಿದ್ದ ಚಿಕನ್ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಯಿತು ಎನ್ನುವಾಗಲೇ, ಇನ್ನೊಂದೆಡೆ ಮತ್ಸ್ಯ ಪ್ರಿಯರಿಗೆ ಮೀನಿನ ಊಟ ‘ದುಬಾರಿ’ಯಾಗಿ ಪರಿಣಮಿಸಿದೆ.

ಸುಮಾರು ಕೆಲ ತಿಂಗಳ ಬಳಿಕ ಕೋಳಿ ಮಾಂಸದ (ಲೈವ್‌ ಚಿಕನ್‌) ಬೆಲೆ ಕೆ.ಜಿ. ಯೊಂದಕ್ಕೆ ಸುಮಾರು ₹50 ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ಕೋಳಿ ಮಾಂಸ (ಲೈವ್‌ ಚಿಕನ್‌) ಕೆ.ಜಿ.ಗೆ ₹120-₹130 , ಕೋಳಿ ಮಾಂಸ ಕೆ.ಜಿ.ಗೆ ₹180–₹200 ಇದೆ.

ಚಿಕನ್ ಸೇವನೆಯಿಂದ ಕೊರೊನಾ ವೈರಸ್‌ ಸೋಂಕು ಹರಡುತ್ತದೆ ಎಂಬ ವದಂತಿ ಕಾರಣಕ್ಕೆ ಕೋವಿಡ್ ಆರಂಭದ ದಿನಗಳಲ್ಲಿ ಚಿಕನ್ ಬೆಲೆ ಭಾರೀ ಇಳಿಕೆಯಾಗಿತ್ತು. ಆದರೆ ನಂತರ ಒಂದೇ ಸಮನೆ ಏರಿಕೆಯಾಗಿತ್ತು.

ಲಾಕ್‌ಡೌನ್‌ ಕಾರಣಕ್ಕೆ ಕೋಳಿ ಫಾರಂಗಳಿಗೆ ಫೀಡ್‌ (ಕೋಳಿಗಳ ಆಹಾರ) ಪೂರೈಕೆ ಸ್ಥಗಿತವಾದ್ದರಿಂದ ಕೋಳಿ ಉತ್ಪಾದನೆ ಕಡಿಮೆಯಾಗಿ ಬೆಲೆ ಮತ್ತಷ್ಟು ಹೆಚ್ಚಳವಾಗಿತ್ತು. ಇದೀಗ ಫೀಡ್‌ ಪೂರೈಕೆ ಯಥಾಸ್ಥಿತಿಗೆ ಬಂದಿರುವುದರಿಂದ ಕೋಳಿ ಉತ್ಪಾದನೆಯೂ ಸಹಜ ಸ್ಥಿತಿಗೆ ಬಂದಿದೆ.

‌ಆದರೆ, ಕರಾವಳಿಯಲ್ಲಿ ಆಳಸಮುದ್ರದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಮೀನಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಸಮುದ್ರದ ಮೀನುಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.

ಮೀನುಗಳ ಸಂತಾನೋತ್ಪತ್ತಿಗೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್ 1ರಿಂದ ಜುಲೈ 31ರ ವರೆಗೆ ರಾಜ್ಯ ಸೇರಿದಂತೆ ದೇಶದಾದ್ಯಂತ ಆಳಸಮುದ್ರದ ಮೀನುಗಾರಿಕೆ ಮೇಲೆ ನಿಷೇಧ ಹೇರಲಾಗುತ್ತದೆ.

ಪರಿಣಾಮ, ಈ ಎರಡು ತಿಂಗಳ ಅವಧಿಯಲ್ಲಿ ಸಮುದ್ರದ ಆಹಾರ ಉತ್ಪನ್ನಗಳಿಗೆ ಇನ್ನಿಲ್ಲದ ಬೇಡಿಕೆ ಕುದುರುತ್ತದೆ. ಆಗಸ್ಟ್‌ ಮೊದಲ ವಾರದಲ್ಲಿ ರಾಜ್ಯದ ಮಂಗಳೂರು, ಮಲ್ಪೆ ಬಂದರುಗಳಲ್ಲಿ ಸಹ ಮೀನುಗಾರಿಕೆ ಪುನರಾರಂಭವಾಗಲಿದೆ. ಆಗ ಮೀನುಗಳ ಬೆಲೆ ತಹಬದಿಗೆ ಬರಲಿದೆ ಎನ್ನುತ್ತಾರೆ ಮೀನು ಮಾರಾಟಗಾರರು.

ಸಮುದ್ರದಲ್ಲಿ ಸಿಗುವ ಬಂಗುಡೆ, ಅಂಜಲ್, ಕಾಣೆ, ಮಾಂಜಿ ಮೊದಲಾದ ಮೀನುಗಳ ಬೆಲೆಗಳು ಗಗನಮುಖಿಯಾಗುತ್ತಿದ್ದರೆ, ಇನ್ನೊಂದೆಡೆ ಸ್ಥಳೀಯವಾಗಿ ಕೆರೆ, ಹೊಳೆಯ ಸಿಹಿನೀರಿನಲ್ಲಿ ಬೆಳೆಯುವ ಕಾಟ್ಲ, ರೋಹು, ರೂಪ್ ಚಂದ್‌ ತಳಿಯ ಮೀನುಗಳ ಬೆಲೆಯಲ್ಲಿ ಅಷ್ಟಾಗಿ ವ್ಯತ್ಯಾಸವಾಗಿಲ್ಲ.

ಸಮುದ್ರದಲ್ಲಿ ಮಾತ್ರವೇ ದೊರೆಯುವ ಮೀನುಗಳ ಬೆಲೆ ಕಳೆದ ಕೆಲ ವಾರಗಳಿಂದ ಈಚೆಗೆ ವಿವಿಧ ತಳಿಗಳನ್ನು ಆಧರಿಸಿ ಒಂದು ಕೆ.ಜಿಯ ಮೇಲೆ ಸುಮಾರು ₹200 ರಿಂದ ₹400 ವರೆಗೆ ಹೆಚ್ಚಳವಾಗಿದೆ. ಜತೆಗೆ ಸಮುದ್ರ ಏಡಿಗಳ ಬೆಲೆಗಳು ಕೂಡ ಏರಿವೆ. ಸ್ಥಳೀಯವಾಗಿ ಬೆಳೆಯುವ ರೂಪಚಂದ್, ರೋಹು, ಕಾಟ್ಲಾ, ಪಂಗಸ್ ಮೀನುಗಳ ಬೆಲೆ ಎಂದಿನಂತೆ ₹200ರ ಆಸುಪಾಸಿನಲ್ಲಿದೆ.

‘ಪ್ರಸ್ತುತ ಮೀನುಗಳ ಬೆಲೆಯಲ್ಲಿಶೇ 40 ರಷ್ಟು ಹೆಚ್ಚಳವಾಗಿದೆ. ಅನೇಕ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಂಗುಡೆ ಮೀನಿನ ಬೆಲೆ ವಿಪರೀತ ಹೆಚ್ಚಳವಾಗಿದೆ. ಈ ಹಿಂದೆ ಯಾವತ್ತೂ ಒಂದು ಕೆ.ಜಿ.ಗೆ ₹300 ದಾಟದ ಬಂಗುಡೆ ಈ ಬಾರಿ ₹450 ರ ವರೆಗೆ ಏರಿಕೆಯಾಗಿದೆ’ ಎಂದು ನಗರದ ಮತ್ಸ್ಯದರ್ಶಿನಿ ಮಾಲೀಕ ಪ್ರಜ್ವಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT