ಮಂಗಳವಾರ, ಮಾರ್ಚ್ 31, 2020
19 °C
ಉಪಾಧ್ಯಕ್ಷರಾಗಿ ಪೆರೇಸಂದ್ರ ಕ್ಷೇತ್ರದ ಸದಸ್ಯ ತಿರುಮಳಪ್ಪ ಕೂಡ ಅವಿರೋಧ ಆಯ್ಕೆ

ಪಿಎಲ್‌ಡಿ: ಅಧ್ಯಕ್ಷರಾಗಿ ನಾಗೇಶ್‌ ಪುನರಾಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಿ.ನಾಗೇಶ್‌ ಪುನರಾಯ್ಕೆಯಾದರೆ, ತಿರುಮಳಪ್ಪ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ 11 ಸಾಲಗಾರರ ಕ್ಷೇತ್ರ ಮತ್ತು ಒಂದು ಸಾಲಗಾರರಲ್ಲದ ಕ್ಷೇತ್ರಗಳು ಸೇರಿದಂತೆ ಒಟ್ಟು 12 ನಿರ್ದೇಶಕ ಸ್ಥಾನಗಳಿಗೆ ಇತ್ತೀಚೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಎರಡು ಸ್ಥಾನಗಳನ್ನು ಅವಿರೋಧವಾಗಿ ಗೆಲ್ಲುವ ಜತೆಗೆ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದುಕೊಂಡಿದ್ದರು. ಇನ್ನುಳಿದ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್‌–ಜೆಡಿಎಸ್ ಮೈತ್ರಿಕೂಟ ತೃಪ್ತಿಪಟ್ಟುಕೊಂಡಿತ್ತು.

ಜತೆಗೆ, ಸರ್ಕಾರದ ನಾಮನಿರ್ದೇಶಿತ ಒಬ್ಬ ಸದಸ್ಯ ಕೂಡ ಬಿಜೆಪಿ ಬೆಂಬಲಿತರಾಗಿರುವುದರಿಂದ ಬ್ಯಾಂಕಿನಲ್ಲಿ ಸದ್ಯ ಬಿಜೆಪಿ ಬೆಂಬಲಿತರ ಸಂಖ್ಯೆ ಒಂಬತ್ತು ಆಗಿದೆ. ಹೀಗಾಗಿ, ಬಹುಮತದ ಕಾರಣದಿಂದಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಯಾವುದೇ ಸ್ಪರ್ಧೆ ಏರ್ಪಡಲಿಲ್ಲ.

ಸುಮಾರು 85 ವರ್ಷಗಳ ಇತಿಹಾಸ ಉಳ್ಳ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸುಮಾರು ಐದು ದಶಕಗಳಷ್ಟು ಜೆಡಿಎಸ್‌ ಪ್ರಾಬಲ್ಯವಿತ್ತು. ಶಾಸಕ, ಹಾಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ತಂತ್ರಗಾರಿಕೆ ಫಲವಾಗಿ ಬ್ಯಾಂಕ್ ಕಳೆದ ಐದು ವರ್ಷದಿಂದ ಕಾಂಗ್ರೆಸ್‌ ತೆಕ್ಕೆಗೆ ಬಂದಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಧಾಕರ್‌ ಬಣದವರೆಲ್ಲ ಬಿಜೆಪಿಗರಾಗಿ ಬದಲಾಗಿ ಇದೇ ಮೊದಲ ಬಾರಿಗೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕೂಡ ಬಿಜೆಪಿ ಖಾತೆ ತೆರೆಯಲು ಸಿದ್ಧತೆ ನಡೆಸಿದ್ದರು. ಇನ್ನೊಂದೆಡೆ, ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ ‘ಹೊಂದಾಣಿಕೆ’ ರಾಜಕೀಯ ಉತ್ತಮ ಪ್ರತಿಫಲ ನೀಡಿದ ಕಾರಣಕ್ಕೆ ಈ ಚುನಾವಣೆಯಲ್ಲೂ ಸುಧಾಕರ್ ಅವರ ನಾಗಾಲೋಟಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಉಭಯ ಪಕ್ಷಗಳ ಮುಖಂಡರು ಮೈತ್ರಿ ಮಂತ್ರ ಜಪಿಸಿದ್ದರು. ಈ ಚುನಾವಣೆಯಲ್ಲಿ ಸಚಿವರ ತಂತ್ರಗಾರಿಕೆ ಎದುರು ಮೈತ್ರಿ ‘ಜಾದೂ’ ಫಲ ನೀಡಲಿಲ್ಲ.

ಇದೀಗ ಮತ್ತೊಂದು ಅವಧಿಗೆ ಪಿಎಲ್‌ಡಿ ಬ್ಯಾಂಕ್ ಚುಕ್ಕಾಣಿ ಸುಧಾಕರ್ ಅವರ ಬೆಂಬಲಿಗರ ಕೈಸೇರಿದ್ದು, ಕಳೆದ ಅವಧಿಯಲ್ಲಿ ಉತ್ತಮವಾಗಿ ಆಡಳಿತ ನಡೆಸಿದ ಪರಿಣಾಮ ನಾಗೇಶ್‌ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಮುಖಂಡರು ತೀರ್ಮಾನ ತೆಗೆದುಕೊಂಡರು ಎಂದು ತಿಳಿದು ಬಂದಿದೆ.

ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮುಖಂಡರಾದ ಪಿ.ಎನ್.ರವೀಂದ್ರರೆಡ್ಡಿ, ಮರಳಕುಂಟೆ ಕೃಷ್ಣಮೂರ್ತಿ, ಕೆ.ವಿ.ನಾಗರಾಜ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ಅವರು ಶುಭ ಕೋರಿ, ಅಭಿನಂದಿಸಿದರು.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಗಲಗುರ್ಕಿ ಕ್ಷೇತ್ರದಿಂದ ಎರಡನೇ ಬಾರಿಗೆ ಪುನರಾಯ್ಕೆ ಬಯಸಿ ಸ್ಪರ್ಧಿಸಿದ್ದ ಪಿ.ನಾಗೇಶ್ ಅವರು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ನಾರಾಯಣಸ್ವಾಮಿ ಅವರ ನಾಮಪತ್ರ ತಾಂತ್ರಿಕ ದೋಷದಿಂದ ತಿರಸ್ಕೃತವಾದ ಪರಿಣಾಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನೊಂದೆಡೆ, ಪೆರೇಸಂದ್ರ ಕ್ಷೇತ್ರದಲ್ಲಿ (ಎಸ್‌ಸಿ) ತಿರುಮಳಪ್ಪ ಅವರು ಪ್ರತಿ ಸ್ಪರ್ಧಿಗಳಿಂದ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗದ ಕಾರಣ ಅವಿರೋಧವಾಗಿ ಗೆಲುವಿನ ನಗೆ ಬೀರಿದ್ದರು. ಈ ಇಬ್ಬರು ಅವಿರೋಧವಾಗಿಯೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)