ಸೋಮವಾರ, ಆಗಸ್ಟ್ 15, 2022
26 °C

ಚಿಂತಾಮಣಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಜುಲೈ 19 ಮತ್ತು 22ರಂದು ನಡೆಯಲಿರುವ ಪರೀಕ್ಷೆಗೆ ಕೋವಿಡ್ ಮಾರ್ಗಸೂಚಿ ಹಾಗೂ ಸುರಕ್ಷತಾ ಕ್ರಮಗಳ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹೊಸ ವಿಧಾನದಂತೆ ಪರೀಕ್ಷೆ ನಡೆಸಲು ತಾಲ್ಲೂಕಿನಲ್ಲಿ 18 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಒಟ್ಟು 4,011 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿಯೊಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುವುದು. 6 ಅಡಿ ಅಂತರದಲ್ಲಿ ಜಿಗ್‌ಜಾಗ್ ಮಾದರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.
 
ಜುಲೈ 19ರಂದು ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, 22ರಂದು ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಯಲಿದೆ. ಎರಡು ದಿನವೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೂ ಪರೀಕ್ಷೆ ನಡೆಯಲಿದೆ.

ನೂಕುನುಗ್ಗಲು ತಪ್ಪಿಸಲು ಹಾಗೂ ಆರೋಗ್ಯ ತಪಾಸಣೆಗಾಗಿ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಪರೀಕ್ಷೆಗೆ ಸಂಬಂಧಪಟ್ಟ ಎಲ್ಲ ಸಿಬ್ಬಂದಿಯೂ 8 ಗಂಟೆಗೆ ಹಾಜರಾಗಿರುತ್ತಾರೆ. ಪ್ರಕಟಣಾ ಫಲಕಗಳಲ್ಲಿ ಆಸನ ವ್ಯವಸ್ಥೆಯ ಮಾಹಿತಿ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಿಕ್ಷಕರು ಸಹ ಆಸನ ವ್ಯವಸ್ಥೆಯ ಮಾಹಿತಿ ನೀಡುತ್ತಾರೆ.

ಕೊರೊನಾ ಹಿನ್ನೆಲೆಯಲ್ಲಿ 6 ದಿನಗಳು ನಡೆಯುತ್ತಿದ್ದ ಪರೀಕ್ಷೆಯನ್ನು ಹೊಸ ಪದ್ಧತಿಯಲ್ಲಿ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪ್ರತಿದಿನ ಒಂದೇ ಪ್ರಶ್ನೆಪತ್ರಿಕೆಯಲ್ಲಿ ತಲಾ 40 ಅಂಕಗಳ 3 ವಿಷಯದ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳಿಗೆ 3 ಪ್ರಶ್ನೆಪತ್ರಿಕೆ ಮತ್ತು 3 ಒಎಂಆರ್ ಹಾಳೆಗಳನ್ನು ನೀಡಲಾಗುತ್ತದೆ.

ಪರೀಕ್ಷೆ ಬರೆಯುವ ಅಥವಾ ಟಿಕ್ ಮಾಡುವ ಅವಶ್ಯಕತೆ ಇರುವುದಿಲ್ಲ. ಒಎಂಆರ್ ಹಾಳೆಗಳಲ್ಲಿ ಶೇಡ್ ಮಾತ್ರ ಮಾಡಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಅಣಕು ಪರೀಕ್ಷೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ 4,011 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಈ ಪೈಕಿ 3,666 ಶಾಲಾ ವಿದ್ಯಾರ್ಥಿಗಳು, 180 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು, 160 ಖಾಸಗಿ ವಿದ್ಯಾರ್ಥಿಗಳು, 50 ಹಳೆಯ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷಾ ಉಸ್ತುವಾರಿಗಾಗಿ ಒಟ್ಟು 650 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ‘ಡಿ’ ದರ್ಜೆಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗಲು ರಾಜ್ಯ ಸಾರಿಗೆ ಸಂಸ್ಥೆಯು ಉಚಿತ ಬಸ್ ವ್ಯವಸ್ಥೆ ಮಾಡಿದೆ. ಅಕಸ್ಮಾತ್ ಯಾರಿಗಾದರೂ ತೊಂದರೆಯಾದರೆ ಆಯಾ ಶಾಲೆಯ ಶಿಕ್ಷಕರೇ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಬಂದು ಪರೀಕ್ಷೆ ನಂತರ ಬಿಟ್ಟು ಬರುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪ್ರತಿಯೊಂದು ಪರೀಕ್ಷಾ ಕೇಂದ್ರದಲ್ಲೂ ಪ್ರತ್ಯೇಕ ಕೋವಿಡ್ ಕೇರ್ ಕೊಠಡಿ ಸ್ಥಾಪಿಸಲಾಗಿದೆ. ಯಾರಿಗಾದರೂ ಜ್ವರ, ಕೆಮ್ಮು ಇದ್ದರೆ ಆ ಕೊಠಡಿಯಲ್ಲಿ ಪರೀಕ್ಷೆ ಬರೆಸಿ ನಂತ ಚಿಕಿತ್ಸೆಗೆ ಕಳುಹಿಸಿಕೊಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು