ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಸ್ಸಿಗೆ ನೆಟ್ಟಿದ ಯಂತ್ರದ ಕಲ್ಲು

Last Updated 11 ಏಪ್ರಿಲ್ 2021, 7:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮಕ್ಕಳು ರಚ್ಚೆ ಹಿಡಿದಾಗ, ಹುಷಾರು ತಪ್ಪಿದಾಗ ಮಂತ್ರ ಹಾಕಿಸುವುದು, ತಾಯತ ಕಟ್ಟಿಸುವ ಪದ್ಧತಿ ಈಗಲೂ ಇದೆ. ಬೆಳ್ಳಿ, ಪಂಚಲೋಹ ಅಥವಾ ತಾಮ್ರದ ಹಾಳೆಯ ಮೇಲೆ ಬೀಜಾಕ್ಷರ, ಮಂತ್ರ ಇತ್ಯಾದಿ ಬರೆದು ತಾಯತದಲ್ಲಿಟ್ಟು ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ, ವ್ಯಾಧಿಗಳಿಂದ ವಿಮುಕ್ತಿ ಸಿಗುವುದೆಂಬ ನಂಬುಗೆಯದು.

ಇದೇ ರೀತಿ ಇಡೀ ಗ್ರಾಮಕ್ಕೆ, ಊರಿಗೆ ಪೀಡೆ ಪರಿಹಾರಕ್ಕೆಂದು ಬಹಳ ಹಿಂದೆ ಕಲ್ಲುಗಳನ್ನು ನಿರ್ಮಿಸುತ್ತಿದ್ದರು. ಇವನ್ನು ಯಂತ್ರದ ಕಲ್ಲುಗಳೆಂದುಕರೆಯುತ್ತಾರೆ.

ಗ್ರಾಮ ಅಥವಾ ಊರಿನ ಶ್ರೇಯಸ್ಸಿಗಾಗಿ ನಿರ್ಮಿಸುತ್ತಿದ್ದ ಇಂತಹ ಪುರಾತನ ಕಲ್ಲು ಶಿಡ್ಲಘಟ್ಟ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆಯಿದ್ದು ನಮ್ಮಲ್ಲೂ ಈ ರೀತಿಯ ಪದ್ಧತಿ ಆಚರಣೆಯಲ್ಲಿದ್ದುದಕ್ಕೆ ನಿದರ್ಶನವಾಗಿದೆ. ಇಂತಹ ಕಲ್ಲುಗಳನ್ನು ಅದರ ಬಗ್ಗೆ ತಿಳಿಯದೇ ಪೂಜನೀಯ ವಸ್ತುವೆಂದು ಭಾವಿಸಿ ಕೆಲವೆಡೆ ಪೂಜಿಸುತ್ತಿದ್ದರೆ, ಇನ್ನು ಕೆಲವು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ.

ಶಿಡ್ಲಘಟ್ಟದ ಎರಡನೇ ನಗರ್ತಪೇಟೆಯಲ್ಲಿ ಚರಂಡಿಯ ಪಕ್ಕದಲ್ಲೇ ಅನಾಥವಾಗಿ ಯಂತ್ರದ ಕಲ್ಲೊಂದಿದೆ. ಅದರ ಬಳಿ ತ್ಯಾಜ್ಯದ ರಾಶಿಯಿದೆ. ಇದರ ಮೌಲ್ಯ ಅರಿಯದೇ ನಿರ್ಲಕ್ಷ್ಯಕ್ಕೊಳಗಾಗಿದೆ. ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ವೇಶ್ವರ ದೇವಾಲಯದ ಬಳಿ ಒಂದು ಯಂತ್ರದ ಕಲ್ಲಿದ್ದರೆ, ಹನುಮಂತಪುರ ಗ್ರಾಮದ ಬಸವಣ್ಣನ ದೇಗುಲದ ಬಳಿ ಮೂರು ಯಂತ್ರದ ಕಲ್ಲುಗಳಿವೆ. ‘ಸಾಮಾನ್ಯವಾಗಿ ಈ ಬಗೆಯ ಕಲ್ಲುಗಳನ್ನು ಹಳ್ಳಿಗಳ ಮುಂದೆ ನೋಡಬಹುದು. ಪೀಡಾ ಪರಿಹಾರಕ್ಕಾಗಿ ಯಂತ್ರ ಬರೆದು ನಿಲ್ಲಿಸಿರುತ್ತಾರೆ. ಇವುಗಳನ್ನು ಹಳ್ಳಿಯ ಜನ ಇಂದಿಗೂ ಪೂಜಿಸುತ್ತಾರೆ. ಈ ರೀತಿ ಪೂಜಿಸುವುದರಿಂದ ತಮ್ಮ ದನ, ಕರುಗಳಿಗೆ ಅಥವಾ ತಮಗೆ ಒದಗಿರುವ ಪೀಡೆಯು ಪರಿಹಾರವಾಗುತ್ತದೆಂದು ಅವರ ನಂಬಿಕೆ. ಕೆಲವು ಯಂತ್ರಗಳಲ್ಲಿ ಕೇವಲ ಬೀಜಾಕ್ಷರಗಳಿದ್ದರೆ ಕೆಲವು ಪೀಡಾ ಪರಿಹಾರಕ್ಕೆ ಹಾಕಿಸಿರುವ ಕಟ್ಟುಯಂತ್ರ ಅಥವಾ ದಿಗ್ಬಂಧನ ಯಂತ್ರವಾಗಿರುತ್ತವೆ’ ಎಂದು ಶಾಸನ ತಜ್ಞ ಶೇಷಶಾಸ್ತ್ರಿ ತಿಳಿಸಿದರು.

‘ಹೆಚ್ಚಾಗಿ ತಾಮ್ರಪಟಗಳ ಮೇಲೆ ಈ ರೀತಿಯ ಯಂತ್ರ ಮಂತ್ರಗಳನ್ನು ಬರೆದಿರುವುದೇ ಹೆಚ್ಚು. ಈಗಲೂ ಚಿಕ್ಕದಾದ ತಾಮ್ರದ ಹಾಳೆಯಲ್ಲಿ ಬರೆದು ತಾಯತದಲ್ಲಿಟ್ಟು ಕಟ್ಟುವುದು, ಕೊಂಚ ದೊಡ್ಡದಾದರೆ ಅದಕ್ಕೆ ಚೌಕಟ್ಟನ್ನು ಹಾಕಿಸಿ ಅಂಗಡಿ ಮನೆಗಳಲ್ಲಿ ನೇತುಹಾಕುವುದು ರೂಢಿಯಲ್ಲಿದ’ ಎಂದರು.

‘ಈ ಪುರಾತನ ಯಂತ್ರದ ಕಲ್ಲುಗಳಿಂದ ಯಂತ್ರ ಮಂತ್ರ ಚಿಕಿತ್ಸಾ ವಿಧಾನಗಳು ಕರ್ನಾಟಕದಲ್ಲಿ ಅದರಲ್ಲೂ ನಮ್ಮ ನಗರ ಹಾಗೂ ತಾಲ್ಲೂಕಿನಲ್ಲಿ ಪ್ರಚಲಿತವಿತ್ತು ಎಂದು ತಿಳಿದುಬರುತ್ತದೆ. ಈ ರೀತಿಯ ಚಿಕಿತ್ಸಾ ಕ್ರಮದ ಒಂದು ಅನುಸರಣೆಯೇ ಈ ಬಗೆಯ ಶಾಸನಗಳಿಗೆ ಪ್ರೇರಣೆ ನೀಡಿದೆ. ಈ ಯಂತ್ರ ಚಿಕಿತ್ಸಾ ಕ್ರಮದ ಬಗ್ಗೆ, ಅದರ ಯಶಸ್ಸಿನ ಬಗ್ಗೆ ವೈಜ್ಞಾನಿಕ ಯುಗದಲ್ಲಿರುವ ನಮ್ಮ ಧೋರಣೆ ಬದಲಾಗಿರಬಹುದು. ಆದರೆ ಯಂತ್ರ, ಮಂತ್ರಗಳ ಮೂಲಕವೂ ನಮ್ಮ ಜನ ತಮ್ಮ ಶ್ರೇಯಸ್ಸಿಗಾಗಿ ಪ್ರಯತ್ನಿಸಿದರು ಎಂಬುದು ಇದರಿಂದ ತಿಳಿದುಬರುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT