ಗುರುವಾರ , ಸೆಪ್ಟೆಂಬರ್ 23, 2021
25 °C
ತಾಲ್ಲೂಕು ಕಚೇರಿ ಎದುರು ಕೃಷಿ, ಕೂಲಿಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಬಾಗೇಪಲ್ಲಿ: ಕಾರ್ಪೊರೇಟ್ ಕಂಪನಿಗಳು ತೊಲಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ರೈತ, ಕಾರ್ಮಿಕ ಹಾಗೂ ಕೂಲಿಕಾರರು ಹಮ್ಮಿಕೊಂಡಿರುವ ದೇಶವ್ಯಾಪಿ ಪ್ರತಿಭಟನೆ ಅಂಗವಾಗಿ ಸೋಮವಾರ ಪ್ರಾಂತ ರೈತ ಸಂಘ, ಕೃಷಿಕೂಲಿಕಾರರ ಸಂಘ, ಸಿಐಟಿಯು ನೇತೃತ್ವದಲ್ಲಿ ನೂರಾರು ಕೃಷಿ ಕೂಲಿಕಾರ್ಮಿಕರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರಾಂತ ರೈತ ಸಂಘ ತಾಲ್ಲೂಕು ಕಾರ್ಯದರ್ಶಿ ಪಿ.ಮಂಜುನಾಥರೆಡ್ಡಿ ಮಾತನಾಡಿ, ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಕಾರ್ಪೊರೇಟ್ ಕಂಪನಿಗಳಿಗೆ, ಬಂಡವಾಳಶಾಹಿ, ಶ್ರೀಮಂತರಿಗೆ ಅನುಕೂಲ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊರಟಿವೆ. ಕಾರ್ಪೊರೇಟ್ ಕಂಪನಿಗಳೇ ಭಾರತ ಬಿಟ್ಟು ತೊಲಗಿ ಎಂದು ಹೋರಾಟ ಮತ್ತಷ್ಟು ಬಲಿಷ್ಟವಾಗಬೇಕು ಎಂದರು.

ಕೃಷಿ ರಂಗದಲ್ಲಿ ಸುಧಾರಣೆ ಜಾರಿಗೆ ತರುವ ನೆಪದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ 3 ಹೊಸ ಕೃಷಿ ಕಾನೂನುಗಳು ರೈತ ವಿರೋಧಿ ಆಗಿವೆ. ವ್ಯವಸಾಯ ರಂಗವನ್ನು ಕಬಳಿಸಿ, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಲು ಹೊರಟಿರುವುದು ಖಂಡನೀಯ ಎಂದರು.

8 ತಿಂಗಳಿನಿಂದ ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ, ಪ್ರಧಾನಮಂತ್ರಿ ನರೇಂದ್ರಮೋದಿ ಮಾತನಾಡಿಸಿಲ್ಲ. 3 ಕೃಷಿ ತಿದ್ದುಪಡಿ ಕಾನೂನುಗಳನ್ನು ಜಾರಿ ಮಾಡಲು ರೈತರು ಬಿಡುವುದಿಲ್ಲ ಎಂದು ತಿಳಿಸಿದರು.

ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಬಿಳ್ಳೂರು ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಬಗರ್‌ಹುಕುಂಗೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಸಾಗುವಳಿ ಚೀಟಿ ನೀಡಿಲ್ಲ. ಕೃಷಿಕೂಲಿ ಕಾರ್ಮಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.

ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ಸಮಿತಿ ಸದಸ್ಯೆ ಬಿ.ಸಾವಿತ್ರಮ್ಮ, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀರಾಮನಾಯಕ್, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥಪ್ಪ, ಎಚ್.ಎ.ರಾಮಲಿಂಗಪ್ಪ, ಫಾತೀಮಾಭಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.