ಸೋಮವಾರ, ಏಪ್ರಿಲ್ 6, 2020
19 °C
ಹಿರಿಯ ವಕೀಲ ನಾರಾಯಣಸ್ವಾಮಿ ಅವರ ಮೇಲಿನ ಹಲ್ಲೆಗೆ ಜಿಲ್ಲೆಯಾದ್ಯಂತ ಖಂಡನೆ

ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಮತದಾನದ ವೇಳೆ ಹಿರಿಯ ವಕೀಲ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಮತ್ತು ನಾರಾಯಣಸ್ವಾಮಿ ಅವರ ಮೇಲೆ ಪೊಲೀಸರು ದಾಖಲಿಸಿರುವ ಸುಳ್ಳು ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲೆಯಾದ್ಯಂತ ಮಂಗಳವಾರ ವಕೀಲರು ಕಲಾಪಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿರುವ ವಕೀಲರ ಭವನದ ಎದುರು ವಕೀಲರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಪೊಲೀಸ್ ಇಲಾಖೆಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಕಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ‘ಪಿಎಲ್‌ಡಿ ಬ್ಯಾಂಕ್ ಚುನಾವಣೆ ಮತದಾನದ ವೇಳೆ ಮತದಾರರಲ್ಲದವರು ಮತಗಟ್ಟೆ ಆವರಣದೊಳಗೆ ಪ್ರವೇಶಿಸಿದ್ದು ಪ್ರಶ್ನಿಸಿದ ವಕೀಲ ನಾರಾಯಣಸ್ವಾಮಿ ಅವರ ವಿರುದ್ಧವೇ ಪೊಲೀಸರು ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆ. ಮತದಾರರಲ್ಲದವರು ಮತಗಟ್ಟೆ ಆವರಣ ಪ್ರವೇಶಿಸುವುದು ತಪ್ಪು. ಅದನ್ನು ಪ್ರಶ್ನಿಸಿದವರ ಮೇಲೆಯೇ ಪೊಲೀಸರು ರಾಜಕೀಯ ಒತ್ತಡದಿಂದಾಗಿ ಪ್ರಕರಣ ದಾಖಲಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ವಕೀಲ ಆರ್.ಮಟಮಪ್ಪ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ ಸೇರಿದಂತೆ ಹಲವರು ಮತಗಟ್ಟೆ ಅತಿಕ್ರಮ ಪ್ರವೇಶ ಮಾಡಿದ್ದನ್ನು ತಡೆಯುವಂತೆ ನಾರಾಯಣಸ್ವಾಮಿ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಕೇಶವರೆಡ್ಡಿ ಮತ್ತು ನಾರಾಯಣಸ್ವಾಮಿ ಅವರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನಡೆದಿದೆ. ಈ ವೇಳೆ ಕೇಶವರೆಡ್ಡಿ ಅವರ ಖಾಸಗಿ ಭದ್ರತಾ ಸಿಬ್ಬಂದಿ ಚೇತನ್ ಎಂಬಾತ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅನ್ಯಾಯವನ್ನು ಪ್ರಶ್ನಿಸಿದ ವಕೀಲರ ಮೇಲೆ ದೌರ್ಜನ್ಯ ನಡೆಸಿ, ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಹಲ್ಲೆಗೊಳಗಾದ ನಾರಾಯಣಸ್ವಾಮಿ ಅವರು ಕೂಡಲೇ ಆ ಬಗ್ಗೆ ಹಲ್ಲೆ ನಡೆಸಿದವರ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಪೊಲೀಸ್‌ ಅಧಿಕಾರಿಗಳು ಈವರೆಗೆ ಎಫ್‌ಐಆರ್‌ ದಾಖಲಿಸಿಲ್ಲ. ಆದರೆ, ಹೆಡ್‌ಕಾನ್‌ಸ್ಟೆಬಲ್‌ವೊಬ್ಬರು ನೀಡಿದ ಸುಳ್ಳು ದೂರಿನ ಆಧಾರದ ಮೇಲೆ ರಾಜಕೀಯ ಒತ್ತಡದಿಂದಾಗಿ ನಾರಾಯಣಸ್ವಾಮಿ ಅವರ ವಿರುದ್ಧ ತ್ವರಿತವಾಗಿ ಎಫ್ಐಆರ್‌ ದಾಖಲಿಸಿದ್ದಾರೆ. ಹಿರಿಯ ವಕೀಲರಿಗೆ ಇಂತಹ ಗತಿಯಾದರೆ ಇನ್ನು ಜನಸಾಮಾನ್ಯರ ಪಾಡೇನು? ಗ್ರಾಮೀಣ ಪ್ರದೇಶದ ಬಡಜನರಿಗೆ ರಕ್ಷಣೆ ನೀಡುವವರು ಯಾರು’ ಎಂದು ಪ್ರಶ್ನಿಸಿದರು.

‘ನಾರಾಯಣಸ್ವಾಮಿ ಅವರು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ. ಆದ್ದರಿಂದ ಅವರ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣ ಕೂಡಲೇ ಹಿಂಪಡೆಯಬೇಕು. ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ಮಾಡಿದವನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಹೇಳಿದರು.

ವಕೀಲ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಆರ್.ಹರಿಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಕಾರ್ಯಕಾರಿ ಸಮಿತಿ ಸದಸ್ಯ ಅಯೂಬ್‌ ಖಾನ್, ವಕೀಲರಾದ ಎಸ್‌.ಎನ್.ನಾಗರಾಜ್, ಪಠಾಣ್, ಮಂಜುನಾಥ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು