ಸೋಮವಾರ, ಏಪ್ರಿಲ್ 6, 2020
19 °C
ಮೊದಲ ಪತ್ನಿಯನ್ನು ಅನಾರೋಗ್ಯದ ಸಂದರ್ಭದಲ್ಲಿ ಕಡೆಗಣಿಸಿದ ಆರೋಪ, ಮೊದಲ ಪತ್ನಿಯ ಮಕ್ಕಳಿಂದ ಎರಡನೇ ಪತ್ನಿ ಮನೆ ಎದುರು ಅಹೋರಾತ್ರಿ ಧರಣಿ

ಮನೆ ಎದುರು ಶವ ಇಟ್ಟು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ತಮ್ಮ ತಂದೆಯ ಕಡೆಗಣನೆಯಿಂದಾಗಿಯೇ ನಮ್ಮ ತಾಯಿ ಮೃತಪಟ್ಟಿದ್ದು, ಅವರ ಸಾವಿಗೆ ನಮಗೆ ನ್ಯಾಯಬೇಕು ಎಂದು ಆಗ್ರಹಿಸಿ ಚೇಳೂರಿನ ಮುಖಂಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ವಿ.ರಾಮಾಂಜನೇಯರೆಡ್ಡಿ ಅವರ ಮೊದಲ ಪತ್ನಿಯ ಮೂರು ಮಕ್ಕಳು ಗುರುವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನದ ವರೆಗೆ ಚೇಳೂರಿನಲ್ಲಿರುವ ರಾಮಾಂಜನೇಯರೆಡ್ಡಿ ಮನೆ ಎದುರು ತಮ್ಮ ತಾಯಿಯ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದರು.

ರಾಮಾಂಜನೇಯರೆಡ್ಡಿ ಅವರು ನಿಮ್ಮಕಾಯಲಪಲ್ಲಿ ಗ್ರಾಮದ ನಿವಾಸಿ ಸರೋಜಮ್ಮ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಇದ್ದಾರೆ. ರಾಮಾಂಜನೇಯರೆಡ್ಡಿ ಅವರು ಮೊದಲ ಪತ್ನಿಯನ್ನು ತೊರೆದು ಮತ್ತೊಂದು ಮಂಜುಳಾ ಎಂಬುವರೊಂದಿಗೆ ಎರಡನೇ ವಿವಾಹ ಮಾಡಿಕೊಂಡು ಚೇಳೂರಿನ ಕೊದಂಡರಾಮಸ್ವಾಮಿ ದೇವಾಲಯ ರಸ್ತೆಯಲ್ಲಿ ನೆಲೆಸಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ.

ನಿಮ್ಮಕಾಯಲಪಲ್ಲಿಯೇ ವಾಸಿಸುತ್ತಿದ್ದ ಮೊದಲನೇ ಪತ್ನಿ ಸರೋಜಮ್ಮ (55) ಅವರು ಕಳೆದ ಭಾನುವಾರ ಪಾಶ್ವವಾಯುವಿಗೆ ತುತ್ತಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದರು. ಬಳಿಕ ಸರೋಜಮ್ಮ ಅವರ ಮಕ್ಕಳಾದ ರಾಧಿಕಾ, ಮಾಲಿನಿ ಮತ್ತು ಮಧುಸೂಧನ್ ರೆಡ್ಡಿ ಅವರು ತಮ್ಮ ತಾಯಿಯ ಶವವನ್ನು ಗುರುವಾರ ರಾತ್ರಿ ಚೇಳೂರಿಗೆ ತಂದು ರಾಮಾಂಜನೇಯರೆಡ್ಡಿ ಮನೆ ಎದುರು ಇಟ್ಟು ಪ್ರತಿಭಟನೆ ಆರಂಭಿಸಿದರು.

‘ತಮ್ಮ ತಾಯಿ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ವಿಚಾರವನ್ನು ಮೊಬೈಲ್, ವ್ಯಾಟ್ಸಪ್‌ ಮೂಲಕ ತಂದೆಯ ಗಮನಕ್ಕೆ ತಂದರೂ ಆಸ್ಪತ್ರೆಯತ್ತ ಕೂಡ ಅವರು ತಲೆ ಹಾಕಲಿಲ್ಲ. ಮೊಬೈಲ್ ಸ್ವಿಚ್ಡ್‌ಆಫ್‌ ಮಾಡಿಕೊಂಡು ನಮ್ಮನ್ನು ನಿರ್ಲಕ್ಷ್ಯ ಮಾಡಿದರು. ಅವರು ನಿಷ್ಕಾಂಳಜಿಯಿಂದಾಗಿ ಸಕಾಲಕ್ಕೆ ಸಮರ್ಪಕ ಚಿಕಿತ್ಸೆ ಸಿಗದೆ ನಮ್ಮ ತಾಯಿ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ಕೇಳಿದ ನಂತರವೂ ಕನಿಷ್ಠ ಸೌಜನ್ಯದ ನಡವಳಿಕೆ ತೋರಲಿಲ್ಲ’ ಎಂದು ಸರೋಜಮ್ಮ ಅವರ ಹಿರಿಯ ಪುತ್ರಿ ರಾಧಿಕಾ ತಿಳಿಸಿದರು.

‘ನಮ್ಮ ತಾಯಿಯ ಸಾವಿಗೆ ನ್ಯಾಯಬೇಕು. ಅಲ್ಲಿಯವರೆಗೆ ನಾವು ತಾಯಿ ಶವ ಇಲ್ಲಿಂದ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವುದಿಲ್ಲ. ಮದುವೆಯಾಗುವ ಹೆಂಡತಿ ಬೇಕಾಗಿತ್ತು. ಅನಾರೋಗ್ಯದಿಂದ ಬಳಲಿ ಸಾಯುವಾಗ ಕಡೆಗಣಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಈ ಸುದ್ದಿ ತಿಳಿದು ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ್, ಎಸ್‌ಐ ಚಂದ್ರಕಲಾ, ಮುಖಂಡ ಪಿ.ಆರ್.ಚಲಂ, ಎರಡನೇ ಪತ್ನಿ ಸಂಬಂಧಿಕರು ಸದ್ಯ ಅಂತ್ಯಕ್ರಿಯೆ ನೆರವೇರಿಸಿ ಬರುವ ಬುಧವಾರ ನ್ಯಾಯಪಂಚಾಯಿತಿ ನಡೆಸಿ ಮಾತನಾಡೋಣ ಎಂದು ಪ್ರತಿಭಟನಾನಿರತರ ಮನವೊಲಿಸುವ ಕೆಲಸ ಮಾಡಿದರು. ಮಧ್ಯಾಹ್ನದ ಬಳಿಕ ಪಟ್ಟು ಸಡಿಲಿಸಿದ ಸರೋಜಮ್ಮ ಅವರ ಮಕ್ಕಳು ಶುಕ್ರವಾರ ಸಂಜೆ 4ರ ಸುಮಾರಿಗೆ ಶವವನ್ನು ನಿಮ್ಮಕಾಯಲಪಲ್ಲಿ ತೆಗೆದುಕೊಂಡು ಅತ್ಯಕ್ರಿಯೆ ನೆರವೇರಿಸಿದರು. ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)