ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗುತ್ತಿಗೆ ನೌಕರರಿಗೂ ಸೇವಾ ಭದ್ರತೆ ಕಲ್ಪಿಸಿ :ಎಂ.ಬಿ.ನಾಗಣ್ಣಗೌಡ

ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಒತ್ತಾಯ
Last Updated 19 ಆಗಸ್ಟ್ 2020, 13:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸೇವಾ ಭದ್ರತೆ ಇಲ್ಲದೇ ಹೊರಗುತ್ತಿಗೆ ಅಡಿ ಎಂಟು ಸಾವಿರಕ್ಕೂ ಹೆಚ್ಚು ಚಾಲಕರು, ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೊರಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರ ಸೇವಾ ಭದ್ರತೆ ಕಲ್ಪಿಸುವ ಕೆಲಸ ಮಾಡಬೇಕು’ ಎಂದು ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ವಾಹನ ಚಾಲಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ನಡೆದ ಸ್ಥಳೀಯ ನಗರಸಭೆ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ವಾಹನ ಚಾಲಕರನ್ನು ನೇರ ವೇತನಕ್ಕೆ ಒಳಪಡಿಸಿ, ಸರ್ಕಾರಿ ಸವಲತ್ತು ಒದಗಿಸಬೇಕು. ಇಲ್ಲದೇ ಹೋದರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

‘ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ, ಇಎಸ್‍ಐ ಸಕಾಲದಲ್ಲಿ ಪಾವತಿಸುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ ಕೆಲಸದಿಂದ ಕೈಬಿಡುವ ಬೆದರಿಕೆ ಒಡ್ಡಲಾಗುತ್ತಿದೆ. ಅಧಿಕಾರಿಗಳು ಇಂತಹ ಧೋರಣೆ ಬಿಟ್ಟು, ನೌಕರ ಸ್ನೇಹಿಯಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ನಗರಗಳ ಸ್ವಚ್ಛತೆ ಕಾಪಾಡುವಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಚಾಲಕರು, ಪೌರಕಾರ್ಮಿಕರು ಹಾಗೂ ಸಹಾಯಕರನ್ನು ನೇರ ವೇತನಕ್ಕೆ ಒಳಪಡಿಸಬೇಕು. ಕೊರೊನಾ ಸೋಂಕು ನಿವಾರಕ ಸಲಕರಣೆಗಳ ಜತೆಗೆ ಸಂಕಷ್ಟ ಭತ್ಯೆಯಾಗಿ ಪ್ರತಿ ತಿಂಗಳು ಕನಿಷ್ಠ ₹10 ಸಾವಿರ ನೀಡಬೇಕು’ ಎಂದು ಆಗ್ರಹಿಸಿದರು.

‘ಆರೋಗ್ಯ ಇಲಾಖೆಯ ನರ್ಸ್‍ಗಳಿಗೆ ಘೋಷಿಸಿರುವ ವಿಶೇಷ ಭತ್ಯೆಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಚಾಲಕರಿಗೂ ವಿಸ್ತರಿಸಬೇಕು. ಹೊರ ಗುತ್ತಿಗೆ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಬೇಕು. ಆರೋಗ್ಯ ವಿಮೆ ಮಾಡಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಬೇಕು’ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಪಂ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಎಸ್.ಸುರೇಶ್‍ ಅವರನ್ನು ಆಯ್ಕೆ ಮಾಡಲಾಯಿತು. ತಾಲ್ಲೂಕು ಘಟಕದ ಅಧ್ಯಕ್ಷ ರಾಜಪ್ಪ, ಮಂಡ್ಯ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ಕೆಂಪರಾಜು, ದಲಿತ ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT