ಮಂಗಳವಾರ, ಜೂನ್ 28, 2022
24 °C

ರಾಗಿ ಖರೀದಿ: ಬಿಡುಗಡೆಯಾಗದ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಸರ್ಕಾರದ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ) ರಾಗಿ ಮಾರಾಟ ಮಾಡಿದ್ದ ರೈತರಿಗೆ 3 ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಸರ್ಕಾರವೇ ಹಣ ನೀಡದೆ ರೈತರನ್ನು ಅಲೆದಾಡಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತಾಲ್ಲೂಕಿನಲ್ಲಿ 1,617 ರೈತರು ಎಂ.ಎಸ್.ಪಿ ಯೋಜನೆಯಡಿ ರಾಗಿ ಮಾರಲು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 1,504 ರೈತರು 26,931 ಕ್ವಿಂಟಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ್ದಾರೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ರೈತರಿಂದ ನೇರವಾಗಿ ರಾಗಿಯನ್ನು ಖರೀದಿಸಿತ್ತು.

ಅದರಲ್ಲಿ ಮಾರ್ಚ್‌ 15ರ ಒಳಗೆ ಮಾರಾಟ ಮಾಡಿದ್ದ 1097 ರೈತರಿಗೆ ಹಣ ಬಿಡುಗಡೆಯಾಗಿದ್ದು, ಅವರ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಇನ್ನುಳಿದ 407 ಜನರಿಗೆ ಹಣ ಬಿಡುಗಡೆಯಾಗಿಲ್ಲ. 3 ತಿಂಗಳಿನಿಂದ ಬ್ಯಾಂಕ್‌ ಹಾಗೂ ಖರೀದಿ ಕೇಂದ್ರಕ್ಕೆ ಅಲೆದಾಡಿ ರೈತರು ಸುಸ್ತಾಗಿದ್ದಾರೆ.

ರೈತರು ಉತ್ಪನ್ನಗಳನ್ನು ಮಾರಿ ತಿಂಗಳಾನುಗಟ್ಟಲೇ ಕಾಯುವಷ್ಟು ಸುಸ್ಥಿತಿಯಲ್ಲಿ ಇಲ್ಲ. ಕಟಾವು ಬಂದ ತಕ್ಷಣ ಮಾರಾಟ ಮಾಡಿ ಮಾಡಿರುವ ಸಾಲ ಸೋಲ ತೀರಿಸುವುದು ಹಾಗೂ ಮುಂದಿನ ಕೃಷಿ ಖರ್ಚುಗಳಿಗೆ ಉಪಯೋಗಿಸಿಕೊಳ್ಳುತ್ತಾರೆ. ಬೆಳೆ ಬಂದ ಕೂಡಲೇ ನೀಡುತ್ತೇನೆ ಎಂದು ಅನೇಕ ರೈತರು ಕೈಸಾಲ ಪಡೆದಿರುತ್ತಾರೆ. ಮಾರಾಟವಾದ ಕೂಡಲೇ ಸಾಲಗಾರರು ಒತ್ತಡ ಹೇರುತ್ತಾರೆ. ಜತೆಗೆ ಬಡ್ಡಿಯು ಹೆಚ್ಚಾಗುತ್ತದೆ. ಸರ್ಕಾರ ಹಣ ಬಿಡುಗಡೆ ಮಾಡದೆ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ರೈತಸಂಘದ ಅಧ್ಯಕ್ಷ ಸೀಕಲ್ ರಮಣಾ ರೆಡ್ಡಿ ದೂರಿದರು.

ಕೃಷಿ ಇಲಾಖೆ ಮೇ 31 ರಿಂದಲೇ ಬಿತ್ತನೆ ಬೀಜಗಳನ್ನು ವಿತರಿಸುತ್ತಿದೆ. ಜಮೀನುಗಳನ್ನು ಉಳುಮೆ ಮಾಡಿಸುವುದು, ಬಿತ್ತನೆ ಬೀಜ, ರಸಗೊಬ್ಬರ ಖರೀದಿಸುವುದು, ಕೂಲಿ ಸೇರಿ ಕೃಷಿ ಖರ್ಚುಗಳಿಗೆ ಹಣ ಅಗತ್ಯವಿದೆ. ಲಾಕ್‌ಡೌನ್‌ನಿಂದ ಅಗತ್ಯ ವಸ್ತುಗಳು ದುಬಾರಿಯಾಗಿವೆ. ರೈತರ ಬೆಂಬಲವಾಗಿ ನಿಲ್ಲಬೇಕಿದ್ದ ಸರ್ಕಾರವೇ ಹಣ ಬಿಡುಗಡೆ ಮಾಡದಿರುವುದು ಸರಿಯಲ್ಲ. ಮಾಡಿರುವ ಸಾಲವನ್ನು ತೀರಿಸಲಾಗದೆ, ಅತ್ತ ಮುಂಗಾರಿನ ಕೃಷಿ ಮಾಡಲು ಹಣವಿಲ್ಲದೆ ರೈತರು ಪರದಾಡುವಂತಾಗಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ.

ಖರೀದಿಗಾಗಿ ನೋಂದಾಯಿಸಿ
ಕೊಳ್ಳಲು ದಾಖಲೆಗಳನ್ನು ಒದಗಿಸಬೇಕು. ಹಲವು ಷರತ್ತುಗಳನ್ನು ಪೂರೈಸಿ ರಾಗಿಯನ್ನು ಮಾರಾಟ ಮಾಡಿದರೆ ಹಣವನ್ನೇ ನೀಡುವುದಿಲ್ಲ. ತನ್ನ ಸ್ವಯಾರ್ಜಿತ ಶ್ರಮದ ಹಣವನ್ನು ಪಡೆಯಲು ರೈತ ಗೋಗರೆಯಬೇಕಾಗಿದೆ. ಕೈಯಿಂದ ಹಣ ಖರ್ಚು ಮಾಡಿಕೊಂಡು ಬ್ಯಾಂಕ್‌ ಕಚೇರಿಗೆ ಅಲೆದಾಡಬೇಕಾಗಿದೆ. ಸರ್ಕಾರದ ಈ ಎಡಬಿಡಂಗಿ ಹಾಗೂ ಗೊಂದಲ ನೀತಿಯಿಂದ ಬಹುತೇಕ ರೈತರು ಬೆಂಬಲ ಬೆಲೆಯ ಮಾರಾಟದ ಕಡೆ ಮುಖ ಮಾಡುವುದಿಲ್ಲ ಎಂದು ಅನೇಕ ರೈತರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಅಕ್ಟೋಬರ್‌ನಲ್ಲೇ ಸುಗ್ಗಿಯ ಕಾಲ ಪ್ರಾರಂಭವಾದರೂ ಅಳೆದು ತೂಗಿ ರೈತರು ಒತ್ತಡ ಹೇರಿದ ನಂತರ ಡಿಸೆಂಬರ್ ಅಂತ್ಯದಲ್ಲಿ ಖರೀದಿ ಕೇಂದ್ರ ತೆರೆದರು.
ಕ್ವಿಂಟಲ್‌ಗೆ ₹ 3,295 ಬೆಂಬಲ ಬೆಲೆ ಹಾಗೂ 2 ಚೀಲಕ್ಕೆ ₹ 44 ಸೇರಿ ಒಟ್ಟು 3,339 ರೂ ನಿಗದಿಯಾಗಿತ್ತು. ಬೆಂಬಲ ಬೆಲೆಗಾಗಿ 3 ತಿಂಗಳು ರೈತರು ಕಾಯುವುದಿಲ್ಲ. ಸಾಲ ಸೋಲ ಮಾಡಿರುತ್ತಾರೆ ಜತೆಗೆ ಸಂಗ್ರಹಣೆ ಮಾಡಲು ಸೂಕ್ತ ಅನೂಕೂಲವೂ ಇರುವುದಿಲ್ಲ. ಹೀಗಾಗಿ ಕಟಾವಿನ ನಂತರವೇ ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹2,100-2,300 ರವರೆಗೆ ಮಾರಾಟ ಮಾಡಿದರು. ‌

ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ, ದಾಸ್ತಾನು ಮಾಡಿಕೊಂಡಿದ್ದರು. ಖರೀದಿ ಕೇಂದ್ರ ತೆರೆದ ನಂತರ ರೈತರ ಹೆಸರಿನಲ್ಲಿ ಬೆಂಬಲ ಬೆಲೆಗೆ ಮಾರಾಟ
ಮಾಡಿ ಸಾಕಷ್ಟು ಲಾಭವನ್ನು ಮಾಡಿಕೊಂಡರು ಎಂದು ರೈತ ಮುಖಂಡರು ದೂರುತ್ತಾರೆ.

ಖರೀದಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮುಖ್ಯ ಕಚೇರಿಯಿಂದ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡುತ್ತಾರೆ. ಖಜಾನೆಯಿಂದ ಹಣ ಬಿಡುಗಡೆಯಾದ ಕೂಡಲೇ ರೈತರ ಖಾತೆಗಳಿಗೆ ಜಮಾ ಆಗುತ್ತದೆ. ಜೂನ್ 15ರ ಒಳಗೆ ಬಿಡುಗಡೆಯಾಗುತ್ತದೆ ಎನ್ನುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು