ಭಾನುವಾರ, ಏಪ್ರಿಲ್ 18, 2021
32 °C

ಮೌಢ್ಯದ ವಿರುದ್ಧ ಅರಿವು ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಸಮಾಜದಲ್ಲಿ ನಾಗರಿಕತೆ ‌ಮತ್ತು ಸಂಸ್ಕೃತಿಯ ಜತೆಗೆ ಆಧುನಿಕತೆ ಅಳವಡಿಸಿಕೊಂಡು ಬದುಕುವ ಮೂಲಕ ಮೌಢ್ಯದ ವಿರುದ್ಧ ಧ್ವನಿಯಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಾಗಿದೆ’ ಎಂದು ಜಿ.ಪಂ. ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ
ತಿಳಿಸಿದರು.

ತಾಲ್ಲೂಕಿನ ಹುಲಿಕುಂಟೆಯಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಗೊಲ್ಲ, ಅಲೆಮಾರಿ‌ ಮತ್ತು ಅರೆಅಲೆಮಾರಿ ಜನಾಂಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಬುಡಕಟ್ಟು ಜನತೆ ತಮ್ಮ ಕುಲಕಸುಬುಗಳ ಜತೆಗೆ ಸಮಾಜದ ಮುಖ್ಯ‌ವಾಹಿನಿಗೆ ಬರಲು ಸಹಕಾರಿಯಾಗುವಂತಹ ವಿವಿಧ ಕ್ಷೇತ್ರಗಳ‌ಲ್ಲಿ ಕಾರ್ಯ ನಿರ್ವಹಿಸುವಲ್ಲಿ ಮುಂದಾಗಬೇಕಾಗಿದೆ. ಆಚಾರ ವಿಚಾರದ ಜತೆಗೆ ಅನಾದಿಕಾಲದಿಂದಲೂ ಬಂದಿರುವ ಮೂಢನಂಬಿಕೆಗಳಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿ ಜನರಲ್ಲೂ ಜಾಗೃತಿ ‌ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಈ ಜನಾಂಗದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಸೌಲಭ್ಯ ನೀಡಿದ್ದು ಅವುಗಳ ಸದ್ಬಳಕೆಗೆ ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ಮಾತನಾಡಿ, ‘ಸರ್ಕಾರವು ದಶಕಗಳ‌ ಹಿಂದೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಗೊಲ್ಲ, ಅಲೆಮಾರಿ ‌ಮತ್ತು ಅರೆಅಲೆಮಾರಿ ಸಮುದಾಯದ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಮುದಾಯವು ವಾಸಿಸುವ ಪ್ರದೇಶಗಳಲ್ಲಿ‌ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಅನುದಾನದ ಮೂಲಕ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಿದೆ’ ಎಂದರು.

ಜನಾಂಗದಲ್ಲಿನ ಯುವಕರು ಎಚ್ಚೆತ್ತು ಮೌಢ್ಯದ ವಿರುದ್ಧ ಹೋರಾಟ ನಡೆಸಿ ಆಧುನಿಕತೆಗೆ ಅನುಗುಣವಾಗಿ ಬದುಕುವ ಜತೆಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ‌ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜ ನಾಯಕ್ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ‌ನೀಡಿದರು.

ಜಿ.ಪಂ. ಸದಸ್ಯೆ ಎ. ಅರುಂಧತಿ, ಮುಖಂಡರಾದ ಕೆ.ಎನ್. ಕೇಶವರೆಡ್ಡಿ, ಬಿ.ಪಿ. ಅಶ್ವತ್ಥನಾರಾಯಣಗೌಡ, ನಾರೆಪ್ಪರೆಡ್ಡಿ, ಅಶ್ವತ್ಥ ರೆಡ್ಡಿ, ಜಯಮ್ಮ, ಅಶ್ವತ್ಥನಾರಾಯಣ, ಬಾಲಕೃಷ್ಣ, ಪ್ರೇಮಾ, ಇಲಾಖೆಯ ಅಧಿಕಾರಿಗಳಾದ ನಾಗರಾಜನಾಯಕ್, ಸೋಮಶೇಖರ್, ವಸಂತಕುಮಾರಿ, ಶಾಂತಕುಮಾರಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು