ಸೋಮವಾರ, ಅಕ್ಟೋಬರ್ 19, 2020
24 °C

ಅಲ್ಲಿ ಅತ್ಯಾಚಾರ ಸಾಮಾನ್ಯ ವಿಷಯ: ಹಾಥರಸ್‌ ಪಕ್ಕದ ಊರಿನ ಯುವಕರ ಮಾತು

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ಒಂದು ಗ್ರಾಮ ಎಂದರೆ, ಅದರ ಸಂಪೂರ್ಣ ಹಿಡಿತ ಒಬ್ಬ ಮೇಲುಜಾತಿಯವರಲ್ಲಿರುತ್ತದೆ. ಪೊಲೀಸ್ ವ್ಯವಸ್ಥೆ, ಡಿಎಂ (ಜಿಲ್ಲಾಧಿಕಾರಿ) ಸೇರಿದಂತೆ ಎಲ್ಲವೂ, ಎಲ್ಲರೂ ಅವರ ಅಧೀನವೇ. ಪ್ರಶ್ನಿಸುವ ಅಧಿಕಾರವಾಗಲೀ ಅಥವಾ ಧ್ವನಿ ಎತ್ತುವುದಾಗಲೀ ಅಲ್ಲಿ ನಡೆಯುವುದಿಲ್ಲ. ಅತ್ಯಾಚಾರ ಎಂಬುದು ಅಲ್ಲಿ ಸಾಮಾನ್ಯ ವಿಷಯ..

ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಪಕ್ಕದ ಗ್ರಾಮದ ಯುವಕರ ಮಾತಿದು. ಬಾಗೇಪಲ್ಲಿಯಲ್ಲಿ ಎರಡು–ಮೂರು ವರ್ಷದಿಂದ  ಕಾರ್ಮಿಕರಾಗಿ ದುಡಿಯುತ್ತಿರುವ ಈ ಯುವಕರು, ಯುವತಿಯ ಅತ್ಯಾಚಾರ ಪ್ರಕರಣವನ್ನು ಸಂದರ್ಭದಲ್ಲಿ ಆ ಭಾಗದ ಸ್ಥಿತಿಯನ್ನು ಹೇಳಿಕೊಂಡು ಬೆಚ್ಚಿಬಿದ್ದರು.

‘ಉತ್ತರ ಪ್ರದೇಶದಲ್ಲಿ ಆಕಸ್ಮಾತ್ ಒಂದು ಹಸುವನ್ನು ರಾತ್ರೋರಾತ್ರಿ ಪೆಟ್ರೋಲ್ ಹಾಕಿ ಸುಟ್ಟಿದ್ದರೆ ಇಷ್ಟು ಹೊತ್ತಿಗೆ ಇಡೀ ಯುಪಿ ಹತ್ತಿ ಉರಿಯುತ್ತಿತ್ತು. ಆದರೆ ಅಲ್ಲಿ ಸುಟ್ಟು ಹಾಕಿರುವುದು ಹೆಣ್ಣು ಮಗಳನ್ನು. ಅದಕ್ಕೆ ಆಳುವ ವರ್ಗ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತದೆ. ಮನುಷ್ಯನ ಜೀವಕ್ಕಿಂತ ಜಾನುವಾರುಗಳಿಗೇ ಅಲ್ಲಿ ಬೆಲೆ ಅಧಿಕ’ ಎಂದರು.

‘ಹಾಥರಸ್ ಮೊದಲಿನಿಂದಲೂ ಮೇಲುಜಾತಿಯ ಜನರ ಹಳೆಯ ಕಟ್ಟಡಗಳನ್ನು ಹೊಂದಿರುವ ಜಿಲ್ಲೆ. ಆ ಕಟ್ಟಡಗಳಂತೆಯೇ ಅಲ್ಲಿನ ಸಂಸ್ಕೃತಿಯೂ ಹಳೆಯದೇ ಆಗಿದೆ. ಸಾಮಾಜಿಕವಾಗಿ ಉನ್ನತ ಸ್ಥಾನದಲ್ಲಿರುವ ಒಂದು ವರ್ಗದ ಜನ ಬಹುಸಂಖ್ಯಾತರನ್ನು ಆಳುತ್ತಿದ್ದಾರೆ. ಬಹುಸಂಖ್ಯಾತ ವರ್ಗಕ್ಕೆ ಸೇರಿದ ಪರಿಶಿಷ್ಟರು, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಇಂದಿಗೂ ಭಯದಲ್ಲಿ ಬದುಕುತ್ತಿದ್ದಾರೆ. ಆ ಸಮುದಾಯಗಳ ಹೆಣ್ಣುಮಕ್ಕಳಿಗೆ ಇಂದಿಗೂ ಶಿಕ್ಷಣದ ವ್ಯವಸ್ಥೆಗಳಿಲ್ಲ. ಶಾಲೆಗೆ ಹೋಗಬೇಕಾದರೂ ದೂರ ಹೋಗಬೇಕು. ಉನ್ನತ ಶಿಕ್ಷಣ ಎಂಬುದು ಅವರಿಗೆ ಮರೀಚಿಕೆಯೇ ಸರಿ. ದಿಟ್ಟತನದಿಂದ ಪ್ರಶ್ನಿಸುವ ಮನಃಸ್ಥಿತಿಗಿಂತ ಭಯದಿಂದ ಮುಚ್ಚಿ ಹಾಕುವುದೇ ಅಧಿಕ’ ಎಂದು ತಾವು ಕಂಡ ಸತ್ಯವನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು