ಸೋಮವಾರ, ಜನವರಿ 24, 2022
29 °C
ಸರ್ವರ್‌ ಸಮಸ್ಯೆ ಪರಿಹರಿಸಲು ರಾಜ್ಯ ಆಹಾರ ಆಯೋಗಕ್ಕೆ ಮನವಿ

ಪಡಿತರ ವಿತರಕರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ‘ಸರ್ಕಾರದಿಂದ ಬರುವ ಆಹಾರ ಧಾನ್ಯಗಳನ್ನು ಪಡಿತರ ಅಂಗಡಿಗಳ‌ ಮೂಲಕ ಅರ್ಹ ಫಲಾನುಭವಿಗಳಿಗೆ ನೀಡುವ ಎಲ್ಲಾ‌ ವಿತರಕರು ಬದ್ಧತೆಯ ಜತೆಗೆ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ’ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಎಚ್.ವಿ. ಶಿವಶಂಕರ್ ಸಲಹೆ ನೀಡಿದರು.

ನಗರದ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಸರ್ಕಾರಿ ಪಡಿತರ ವಿತರಕರ ಸಂಘದಿಂದ ಆಯೋಜಿಸಿದ್ದ ತಾಲ್ಲೂಕು ಪಡಿತರ ವಿತರಕರ ಸಮಾವೇಶದಲ್ಲಿ ‌ಅವರು ಮಾತನಾಡಿದರು.

‘ಪಡಿತರ ವಿತರಕರ ಸಮಸ್ಯೆಗಳನ್ನು ‌ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಂಬಂಧಿಸಿದ ‌ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕೂಡಲೇ ಪರಿಹರಿಸಲು ಶ್ರಮಿಸುತ್ತೇನೆ. ರಾಜ್ಯದಲ್ಲಿ ಲಕ್ಷಾಂತರ ಪಡಿತರ ವಿತರಕರು ಪ್ರಾಮಾಣಿಕತೆಯಿಂದ ಸೇವೆ ಮಾಡುವ ಮೂಲಕ ಸಾಕಷ್ಟು ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ನಿಮ್ಮೆಲ್ಲರ ಹಿತ ಕಾಪಾಡಲು ಆಹಾರ ಆಯೋಗ ಬದ್ಧವಾಗಿದೆ’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ರಾಮಚಂದ್ರ, ರಾಜ್ಯದಲ್ಲಿನ ಬಹುತೇಕ ಪಡಿತರ ವಿತರಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಸರ್ಕಾರ ಹಾಗೂ ಆಹಾರ ಆಯೋಗ ಅರಿತು ಬಗೆಹರಿಸಲು‌ ಮುಂದಾಗಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 542 ಪಡಿತರ ವಿತರಣೆ ಕೇಂದ್ರಗಳಿವೆ. ಇವುಗಳ ಮೂಲಕ ಗ್ರಾಮೀಣ ಭಾಗದ ಬಡವರ ಕುಟುಂಬಗಳಿಗೆ ನಿಗದಿತ ಸಮಯಕ್ಕೆ ಪಡಿತರ ತಲುಪಿಸಲು ಎಲ್ಲಾ ವಿತರಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಿತ್ಯ ಎಲ್ಲಾ ವಿತರಕರು ಸರ್ವರ್ ಸಮಸ್ಯೆ ಎದುರಿಸುತ್ತಿದ್ದರೂ ಎಂದಿಗೂ ಆಹಾರ ವಿತರಣೆಯನ್ನು ಸ್ಥಗಿತಗೊಳಿಸಿಲ್ಲ ಎಂದರು. 

ಸರ್ವರ್ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕಿದೆ. ಜತೆಗೆ ಪ್ರತಿ ತಿಂಗಳು‌ ನಿಯಮಿತವಾಗಿ ವಿತರಕರಿಗೆ ಕೇಂದ್ರ ಮತ್ತು ರಾಜ್ಯದಿಂದ ಕಮಿಷನ್ ಹಣ ಬರುವಂತೆ ಮಾಡಬೇಕಾಗಿದೆ ಎಂದು‌ ಹೇಳಿದರು.

ವೇದಿಕೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಆಹಾರ ವಿತರಕರಾದ ನರಸಿಂಹರೆಡ್ಡಿ, ಕೊಂಡಮ್ಮ, ಪಾರ್ಶ್ಚನಾಥಯ್ಯ, ಪದ್ಮಾವತಮ್ಮ ಹಾಗೂ ನಿವೃತ್ತ ಸಗಟು ಸೀಮೆಎಣ್ಣೆ ವಿತರಕರಾದ ಇಸ್ತೂರಿ ಆರ್. ರಂಗನಾಥ್, ಶ್ರೀನಾಥ್ ಅವರನ್ನು ಸನ್ಮಾನಿಸಲಾಯಿತು.

ಆಹಾರ ಇಲಾಖೆಯ ನಿರೀಕ್ಷಕ ಜೈಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್. ಮದನಗೋಪಾರೆಡ್ಡಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ತಿಪ್ಪಾರೆಡ್ಡಿ, ಸದಾಶಿವರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಪಿ. ಶಿವಣ್ಣ, ಖಜಾಂಚಿ ವೆಂಕಟೇಶಮೂರ್ತಿ, ನಿರ್ದೇಶಕರಾದ ರಾಮನಾಥ್, ಎಂ. ನಾಗರಾಜ್, ಮಲ್ಲೇಶ್ವರಯ್ಯ, ಕೆ.ವಿ. ಸುಗುಣಮ್ಮ, ಕೆ.ಎ. ರಮೇಶ್, ಎನ್. ವೆಂಕಟರೆಡ್ಡಿ, ಇಂದಿರಮ್ಮ, ಚಲಪತಿ, ನಾರಾಯಣಸ್ವಾಮಿ
ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.