ಭಾನುವಾರ, ಜೂನ್ 20, 2021
29 °C
ಮೊಬೈಲ್ ಆ್ಯಪ್‌ ಮೂಲಕ ಸುಲಭವಾಗಿ ತಮ್ಮ ಬೆಳೆ ಮಾಹಿತಿ ನಮೂದಿಸಲು ರೈತರಿಗೆ ಮೊದಲ ಬಾರಿಗೆ ಅವಕಾಶ

ಚಿಕ್ಕಬಳ್ಳಾಪುರ: ನಿಮ್ಮ ಬೆಳೆ ವಿವರ ನೀವೇ ದಾಖಲಿಸಿ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪಹಣಿಯಲ್ಲಿ (ಆರ್‌ಟಿಸಿ) ಅಧಿಕಾರಿಗಳು ಸರಿಯಾಗಿ ಬೆಳೆ ಮಾಹಿತಿ ನಮೂದಿಸದ ಕಾರಣಕ್ಕೆ ಪ್ರಕೃತಿ ವಿಕೋಪ, ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಪರಿಹಾರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಿಂದ ನೀವು ವಂಚಿತರಾಗುತ್ತಿದ್ದೀರಾ? ಹಾಗಿದ್ದರೆ, ಇನ್ನು ಮುಂದೆ ನಿಮ್ಮ ಜಮೀನಿನ ಬೆಳೆ ವಿವರ ನೀವೇ ದಾಖಲಿಸಿ ಸರ್ಕಾರದಿಂದ ಸಿಗುವ ನೆರವಿನ ಪ್ರಯೋಜನ ಪಡೆಯಬಹುದು!

ಅಚ್ಚರಿ ಎನಿಸಿದರೂ ಇದು ನಿಜ. ಬೆಳೆ ಸಮೀಕ್ಷೆ ಮಾಹಿತಿ ಪಹಣಿಯಲ್ಲಿ ಸರಿಯಾಗಿ ಪರಿಷ್ಕರಣೆಯಾಗದೆ ರೈತರು ಅನುಭವಿಸುವ ತೊಂದರೆಗಳನ್ನು ಅರಿತು ಕಂದಾಯ ಮತ್ತು ಕೃಷಿ ಇಲಾಖೆಗಳು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್) ಸಹಕಾರದೊಂದಿಗೆ ಆ್ಯಪ್‌ ಮೂಲಕ ರೈತರೇ ನೇರವಾಗಿ ತಮ್ಮ ಬೆಳೆ ವಿವರ ನಮೂದಿಸುವ ಉಪಯುಕ್ತ ವ್ಯವಸ್ಥೆ ಪರಿಚಯಿಸಿದೆ. 

ಬೆಳೆ ಸಮೀಕ್ಷೆಗಾಗಿ ರೈತರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವಂತಿಲ್ಲ. ಬದಲು, ‘ರೈತರ ಬೆಳೆ ಸಮೀಕ್ಷೆ ಆ್ಯಪ್‌ 2020–21’ ಎಂಬ ಮೊಬೈಲ್ ಆ್ಯಪ್‌ ಮೂಲಕ ರೈತರು ಸುಲಭವಾಗಿ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸಬಹುದಾಗಿದೆ.

ಕಳೆದ ಮೂರು ವರ್ಷಗಳಿಂದ ಗ್ರಾಮದ ಪಿಆರ್‌ಒಗಳ ನೆರವಿನೊಂದಿಗೆ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಅದರಲ್ಲಿ ಸಂಪೂರ್ಣವಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಪ್ರಸಕ್ತ ವರ್ಷದಿಂದ ರೈತನೇ ತನ್ನ ಬೆಳೆಯನ್ನು ಸಮೀಕ್ಷೆ ಮಾಡುವ ವಿಧಾನವನ್ನು ಜಾರಿಗೆ ತರಲಾಗಿದೆ.

‘ನನ್ನ ಬೆಳೆ ನನ್ನ ಹಕ್ಕು’ ಘೋಷ ವಾಕ್ಯದಡಿ ತನಗೆ ತಾನೇ ಪ್ರಮಾಣಪತ್ರ ಕೊಟ್ಟಿಕೊಳ್ಳುವಂಥ ಈ ವಿನೂತನ ವ್ಯವಸ್ಥೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂಬ ಆಶಾವಾದ ಕೃಷಿ ಇಲಾಖೆ ಅಧಿಕಾರಿಗಳದ್ದು. ಆ್ಯಂಡ್ರಾಯ್ಡ್‌ ಫೋನ್‌ ಇಲ್ಲದ ರೈತರು ಪಿ.ಆರ್‌.ಗಳ ನೆರವು  ಪಡೆಯಬಹುದು.

ಬೆಳೆ ಸಮೀಕ್ಷೆ ನಡೆಸುವುದು ಹೇಗೆ?
ರೈತರು ಸ್ಮಾರ್ಟ್‌ ಫೋನ್‌ಗಳ ಮೂಲಕ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಿಗುವ ‘Farmers Crop Survey App 2020-21’ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಸ್ಥಾಪಿಸಿಕೊಳ್ಳಬೇಕು. ಆ್ಯಪ್‌ ತೆರೆಯುತ್ತಿದ್ದಂತೆ 2020–21, ಮುಂಗಾರು ಎಂದು ದಾಖಲಿಸಿ, ಬಳಿಕ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಒಟಿಪಿ (ಒಂದು ಬಾರಿ ಬಳಸಬಹುದಾದ ಪಾಸ್‌ವರ್ಡ್‌) ದೊರೆಯುತ್ತದೆ. ಅದರ ನಮೂದಿಸಿದರೆ ಬಳಕೆದಾರರ ಐಡಿ ಲಭ್ಯವಾಗಲಿದೆ.

ಬಳಿಕ ತೆರೆದುಕೊಳ್ಳುವ ಕೆಲ ಆಯ್ಕೆಗಳಲ್ಲಿ ಡೌನ್‌ಲೋಡ್‌ ಮಾಸ್ಟರ್ ವಿವರ ಆಯ್ಕೆ ಮಾಡಿಕೊಂಡರು, ರೈತರು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್‌, ಹೆಸರು ವಿವರಗಳನ್ನು ದಾಖಲಿಸಬೇಕು.

ಬೆಳೆ ಸಮೀಕ್ಷೆ ನಡೆಸುತ್ತಿರುವ ಜಮೀನು ಸ್ವಂತದ್ದಾಗಿದ್ದಾರೆ ‘ಸ್ವಂತದ್ದು’, ಬೆರೆಯವರದಾಗಿದ್ದರೆ ‘ರೈತರ ಪರವಾಗಿ ಮಾಹಿತಿ ದಾಖಲಿಸುತ್ತಿದ್ದೇನೆ’ ಎಂಬ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ,ರೈತರ ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಬಳಿಕ ಪಹಣಿ ವಿವರ ಡೌನ್‌ಲೋಡ್ ಮಾಡಬೇಕು.

ನಂತರದಲ್ಲಿ ಗ್ರಾಮ ನಕ್ಷೆಯೊಂದು ತೆರೆದುಕೊಂಡು ಸಮೀಕ್ಷೆದಾರ ಇರುವ ಸ್ಥಳ ಸೂಚಿಸುತ್ತದೆ. ಅದರಲ್ಲಿ ರೈತ ತನ್ನ ಸರ್ವೇ ನಂಬರ್ ದಾಖಲಿಸಿದಾಗ ಆ ನಿಶ್ಚಿತ ಜಮೀನಿನ ನಕ್ಷೆ ಆಯ್ಕೆಯಾಗುತ್ತದೆ. ಆ ಜಮೀನಿನ ಒಳಗೆ 30 ಮೀಟರ್‌ ಬಂದು ಜಿಪಿಎಸ್‌ನಲ್ಲಿ ಮಾಲೀಕರ ಹೆಸರು ನಮೂದಿಸಬೇಕು. ಜಂಟಿ ಮಾಲೀಕತ್ವ ಇದ್ದಲ್ಲಿ ಆ ವಿವರ ನಮೂದಿಸಲು ಅವಕಾಶವಿರುತ್ತದೆ.

ಬೆಳೆ ವಿವರ ದಾಖಲಿಸುವಾಗ ಜಮೀನಿನಲ್ಲಿರುವ ಬೆಳೆಗಳನ್ನು ಆ್ಯಪ್‌ನಲ್ಲಿರುವ ಬೆಳೆಗಳ ಆಯ್ಕೆಯಲ್ಲಿ ಆಯ್ದು ನಮೂದಿಸಬೇಕು. ಒಂದೊಮ್ಮೆ ಒಂದೊಮ್ಮೆ ಜಮೀನಿನಲ್ಲಿ ಮನೆ, ಶೆಡ್‌ಗಳು ಇದ್ದರೆ ಬಳಕೆಯಾಗದ ಪ್ರದೇಶ ಎಂಬ ವಿವರದ ಕಾಲಂನಲ್ಲಿ ಅವುಗಳ ವಿವರ, ವಿಸ್ತೀರ್ಣ ಭರ್ತಿ ಮಾಡಿ, ಕೆಳಗೆ ಇರುವ ಕ್ಯಾಮೆರಾ ಆಯ್ಕೆಯ ಮೇಲೆ ಕ್ಲಿಕ್ಲಿಸಿ ಮನೆ ಚಿತ್ರ ಸೆರೆ ಹಿಡಿಯಬೇಕು.

ಪಾಳು ಬಿದ್ದ ಜಮೀನು, ಖಾಲಿ ಜಮೀನು, ಕಟಾವು ಮಾಡಿದ ಪ್ರದೇಶ ಇದೆಯೋ ಇಲ್ಲವೆ ಎಂಬ ವಿವರಗಳನ್ನು ಹೌದು, ಇಲ್ಲ ಆಯ್ಕೆಗಳ ಮೂಲಕ ನಮೂದಿಸಬೇಕು. ಜಮೀನಿನಲ್ಲಿರುವ ಬೆಳೆ, ನೀರಾವರಿಯ ಮೂಲ ಆಯ್ಕೆಗಳ ಮೂಲಕ ಭರ್ತಿ ಮಾಡಬೇಕು.

ಬಳಿಕ ರೈತ ಬೆಳೆಯೊಂದಿಗೆ ಛಾಯಾಚಿತ್ರ ಸೆರೆ ಹಿಡಿದುಕೊಳ್ಳಬೇಕು. ಸಂಪೂರ್ಣವಾಗಿ ಜಮೀನು ಕಾಣುವಂತೆ, ಸ್ಪಷ್ಟವಾಗಿ ಬೆಳೆ ಕಾಣುವಂತೆ ಸಮೀಪದ ಚಿತ್ರ, ಸಾಮಾನ್ಯವಾಗಿ ಒಂದು ಹೀಗೆ ಮೂರು ಛಾಯಾಚಿತ್ರಗಳನ್ನು ಸೆರೆ ಹಿಡಿದು ನಮೂದಿಸಿದ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ವಿವರ ಉಳಿಸಿ ಎಂಬ ಆಯ್ಕೆ ಮೇಲೆ ಕ್ಲಿಕ್ಕಿಸಿದರೆ

ಆ್ಯಪ್‌ನಲ್ಲಿ ನಮೂದಿಸಿದ ಮಹಿತಿ ಅಪ್‌ಲೋಡ್‌ ಆಗುವ ಜತೆಗೆ ಬೆಳೆ ಸಮೀಕ್ಷೆ ಯಶಸ್ವಿಯಾಗಿ ನಮೂದಾಗಿದೆ ಎಂಬ ಬಗ್ಗೆ ಸಂದೇಶ ಸಹ ಬರುತ್ತದೆ. ಬೆಳೆ ಸಮೀಕ್ಷೆ ವಿವರ ದಾಖಲಿಸಲು ಆಗಸ್ಟ್ 24 ಕೊನೆಯ ದಿನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು