ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರಿಗೂ ಗಳಿಕೆ ರಜೆ ನೀಡಲು ಮನವಿ: ಸರ್ಕಾರಕ್ಕೆ ಜಿಲ್ಲಾ ಸಂಘದಿಂದ ಒತ್ತಾಯ

Last Updated 27 ಆಗಸ್ಟ್ 2021, 2:44 IST
ಅಕ್ಷರ ಗಾತ್ರ

ಚಿಂತಾಮಣಿ: ಕೋವಿಡ್ ಸಮಯದಲ್ಲಿ ಕಾರ್ಯ ನಿರ್ವಹಿಸಿರುವ ಪಿ.ಯು ಉಪನ್ಯಾಸಕರಿಗೆ ನಿಯಮಾನುಸಾರ ಗಳಿಕೆ ರಜೆಯನ್ನು ಮಂಜೂರು ಮಾಡುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುನಿರೆಡ್ಡಿ ನೇತೃತ್ವದ ನಿಯೋಗವು ಗುರುವಾರ ಉಪ ನಿರ್ದೇಶಕರ ಮೂಲಕ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

ಪಿಯು ಶಿಕ್ಷಣ ಇಲಾಖೆಯು ರಜಾ ಸೌಲಭ್ಯದ ಇಲಾಖೆಯಾಗಿದೆ. ಇತರೆ ಇಲಾಖೆಗಳ ನೌಕರರಿಗೆ ದೊರೆಯುವ ಗಳಿಕೆ ರಜಾ ಸಿಗುವುದಿಲ್ಲ. ರಜಾ ಅವಧಿಯಲ್ಲಿ ಉಪನ್ಯಾಸಕರು, ಮತ್ತಿತರ ಸಿಬ್ಬಂದಿ ಕೋವಿಡ್ ಕಾರ್ಯಗಳಿಗೆ ನಿಯೋಜನೆಗೊಂಡು ಕೆಲಸ ಮಾಡಿದ್ದಾರೆ. ರಜಾ ಅವಧಿಯಲ್ಲಿ ಕೆಲಸ ಮಾಡಿದ್ದ ಶಿಕ್ಷಣ ಇಲಾಖೆಯ ನೌಕರರಿಗೆ ಗಳಿಕೆ ರಜೆ ಮಂಜೂರು ಮಾಡಲಾಗಿದೆ. ಪಿಯು ಉಪನ್ಯಾಸಕರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ಮುನಿರೆಡ್ಡಿ ಮನವಿ ಮಾಡಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ಎಸ್.ಎ.ಟಿ.ಎಸ್.ಯಲ್ಲಿ ದಾಖಲಿಸುವ ಆದೇಶ ಮರು ಪರಿಶೀಲಿಸಬೇಕು. ಹಾಜರಾತಿ ದಾಖಲೆ ಸಂಬಂಧದ ತೊಡಕು ನಿವಾರಿಸಬೇಕು. ಬಡ್ತಿ ಸಂಬಂಧವಾಗಿ ಜ್ಯೇಷ್ಠತಾ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

2021-22ನೇ ಶೈಕಣಿಕ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿ.ಯು ತರಗತಿಗಳ ಇತಿಹಾಸ ವಿಷಯದ ವಿಂಗಡಣೆ ಮಾಡಿರುವುದು ಸಮರ್ಪಕವಾಗಿಲ್ಲ. ಇತಿಹಾಸ ತಜ್ಞರ ಅಭಿಪ್ರಾಯ ಪಡೆದು ಆಗಿರುವ ಲೋಪದೋಷ ಸರಿಪಡಿಸಬೇಕು. ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರಿಗೆ ನಿಯಮಾನುಸಾರ ಗಳಿಕೆ ರಜೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗೆ ಡಯಟ್ ಸಂಸ್ಥೆಯಲ್ಲಿರುವ ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಪದವಿಪೂರ್ವ ಉಪ ನಿರ್ದೇಶಕರ ಕಚೇರಿಗೆ ಸಹಾಯಕ ಉಪ ನಿರ್ದೇಶಕರನ್ನಾಗಿ ನೇಮಕ ಮಾಡಲು ಸರ್ಕಾರ ಚಿಂತಿಸುತ್ತಿದೆ. ಇದನ್ನು ಕೈ ಬಿಟ್ಟು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಪ್ರಾಂಶುಪಾಲರನ್ನು ಈ ಹುದ್ದೆಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಪಿಯು ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುವ ಉಪನ್ಯಾಸಕರಿಗೆ ಪ್ರಭಾರ ಭತ್ಯೆ, ಗಳಿಕೆ ರಜಾ ಸೌಲಭ್ಯವನ್ನು ನಿಯಮಾನುಸಾರ ನೀಡುವುದು ಸೇರಿದಂತೆ ಉಪನ್ಯಾಸಕರ ಹಲವಾರು ಕುಂದುಕೊರತೆ ಪರಿಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಉಪ ನಿರ್ದೇಶಕ ಆನಂದ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಶೀಘ್ರವೇ ಇಲಾಖೆಯ ನಿರ್ದೇಶಕರಿಗೆ ರವಾನಿಸುವುದಾಗಿ ಭರವಸೆ ನೀಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು ಎಚ್. ಚಿಕ್ಕಣಜಿ, ಕೋಶಾಧ್ಯಕ್ಷ ನಂಜಿರೆಡ್ಡಿ ಮತ್ತಿತರರು ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT