ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಹಿಂಪಡೆದ ಅಧ್ಯಕ್ಷ, ಉಪಾಧ್ಯಕ್ಷೆ

ಜಿಲ್ಲಾ ಪಂಚಾಯಿತಿ ಸಾರಥಿಗಳ ಬದಲಾವಣೆ ಮೇಲೆ ಪರಿಣಾಮ ಬೀರಿದ ರಾಜ್ಯ ರಾಜಕಾರಣದ ಅನಿಶ್ಚಿತತೆಯ ಕರಿನೆರಳು
Last Updated 10 ಜುಲೈ 2019, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಿಢೀರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್‌ ಮತ್ತು ಉಪಾಧ್ಯಕ್ಷೆ ಪಿ.ನಿರ್ಮಲಾ ಮುನಿರಾಜು ಅವರು ತಮ್ಮ ಸ್ಥಾನಗಳಿಗೆ ನೀಡಿದ್ದ ರಾಜೀನಾಮೆಯನ್ನು ಮಂಗಳವಾರ ಸಂಜೆ ಹಿಂಪಡೆದಿದ್ದಾರೆ. ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಏರಲು ಕಸರತ್ತು ನಡೆಸಿದವರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಕ್ಷೀಪ್ರ ರಾಜಕೀಯ ಬೆಳವಣಿಗೆ ನಡುವೆ ಶಾಸಕ ಡಾ.ಕೆ.ಸುಧಾಕರ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂಬ ವದಂತಿಗೆ ಅವರು ಮಂಗಳವಾರ ಬೆಂಗಳೂರಿನ ನಿವಾಸದಲ್ಲಿಯೇ ಇದ್ದರೂ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದಿರುವುದು ಪುಷ್ಟಿ ನೀಡಿತ್ತು.

ಹೀಗಾಗಿ ಮಂಗಳವಾರ ಸಂಜೆ ಕಾಂಗ್ರೆಸ್‌ ವರಿಷ್ಠರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ಆಪ್ತ ಮಂಜುನಾಥ್‌ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿ ರಾಜಕೀಯ ಪ್ರಕ್ಷುಬ್ಧತೆ ಸಹಜಸ್ಥಿತಿಗೆ ಮರಳುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿದ್ದರು. ಅದರ ಬೆನ್ನಲ್ಲೇ ಮಂಜುನಾಥ್ ಅವರು ತಮ್ಮ ನಿರ್ಧಾರ ಬದಲಿಸಿದರು ಎನ್ನಲಾಗಿದೆ.

ಶಾಸಕ ಸುಧಾಕರ್ ಅವರ ಬೆಂಬಲಿಗ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಪೂರ್ವದಲ್ಲಿ ಆದ ಒಪ್ಪದದಂತೆ ಪಕ್ಷದ ವರಿಷ್ಠರ ಸೂಚನೆ ಮೆರೆಗೆ ಮಂಜುನಾಥ್ ಅವರು ಜೂನ್ 26 ರಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬೆನ್ನಲ್ಲೇ ನಿರ್ಮಲಾ ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮಂಜುನಾಥ್‌ ಅವರ ರಾಜೀನಾಮೆ ಕಾನೂನು ಬದ್ಧವಾಗಿ ಅಂಗೀಕಾರಗೊಳ್ಳಲು ಗುರುವಾರ (ಜುಲೈ 11) ಕೊನೆಯ ದಿನವಾಗಿತ್ತು. ಹೀಗಾಗಿ ಅಧ್ಯಕ್ಷರ ಹುದ್ದೆಗಾಗಿ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಕ್ಷೇತ್ರದ ಪಿ.ಎನ್.ಪ್ರಕಾಶ್, ಚಿಂತಾಮಣಿಯ ಊಲವಾಡಿ ಕ್ಷೇತ್ರದ ಸದಸ್ಯ ಶಿವಣ್ಣ, ಬಾಗೇಪಲ್ಲಿ ಕಸಬಾ ಕ್ಷೇತ್ರದ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ (ಚಿನ್ನಿ) ಅವರ ನಡುವೆ ಪೈಪೋಟಿ ನಡೆದಿತ್ತು.

ಈ ಪೈಕಿ ಅಧ್ಯಕ್ಷ ಸ್ಥಾನ ಶಾಸಕ ಸುಧಾಕರ್ ಅವರ ಆಪ್ತ ಪ್ರಕಾಶ್‌ ಅವರಿಗೆ ಮತ್ತು ಬಿಸಿಎಂಎ (ಮಹಿಳೆ)ಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನ ಶಿವಶಂಕರರೆಡ್ಡಿ ಅವರ ಬೆಂಬಲಿಗರಾದ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ ಅವರಿಗೆ ಸಿಗುವುದು ಖಚಿತವಾಗಿತ್ತು. ಆದರೆ ಅಂತಿಮ ಗಳಿಗೆಯಲ್ಲಿ ಸುಧಾಕರ್ ಅವರ ನಡೆಯಿಂದ ಆಕ್ರೋಶಗೊಂಡ ಕಾಂಗ್ರೆಸ್‌ ವರಿಷ್ಠರು ತಮ್ಮ ನಿರ್ಧಾರ ಬದಲಿಸಿದರು ಎನ್ನಲಾಗಿದೆ.

‘ರಾಜೀನಾಮೆ ಬಳಿಕ ನಿರಾಳವಾಗಿ ಹೊಸ ಜೀವನ ಶೈಲಿ ರೂಢಿಸಿಕೊಂಡಿದ್ದೆ. ವೈಯಕ್ತಿಕ ಕೆಲಸಗಳತ್ತ ಗಮನ ಹರಿಸಿದ್ದೆ. ಪ್ರವಾಸದ ಯೋಚನೆಯಲ್ಲಿದ್ದೆ. ಆದರೆ ರೀತಿ ಆಗುತ್ತದೆ ಕನಸಿನಲ್ಲಿ ಎಂದುಕೊಂಡಿರಲಿಲ್ಲ. ಮಂಗಳವಾರ ಸಂಜೆ ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಅವರು ನನಗೆ ರಾಜೀನಾಮೆ ಹಿಂಪಡೆಯುವಂತೆ ಸಚಿವ ಶಿವಶಂಕರರೆಡ್ಡಿ ಅವರ ಮೂಲಕ ಸೂಚಿಸಿದರು. ಅದರಂತೆ ನಾನು ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆದುಕೊಂಡೆ’ ಎಂದು ಮಂಜುನಾಥ್‌ ಹೇಳಿದರು.

‘ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಮ್ಮ ನಾಯಕರು ಸೂಚಿಸಿದ್ದಾರೆ. ಎಲ್ಲ ಸದಸ್ಯರು ನನ್ನೊಂದಿಗೆ ವಿಶ್ವಾಸದೊಂದಿಗೆ ಇದ್ದಾರೆ. ಹೀಗಾಗಿ ಸದ್ಯ ನಾನು ಆದ್ಯತೆ ಮೆರೆಗೆ ಬರಪರಿಹಾರ, ಕುಡಿಯುವ ನೀರು, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳತ್ತ ಗಮನ ಹರಿಸುವೆ’ ಎಂದು ತಿಳಿಸಿದರು.

ವರಿಷ್ಠರ ಬದಲಾದ ಈ ನಡೆ ಕುರಿತು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಶಿವಣ್ಣ ಅವರನ್ನು ಪ್ರಶ್ನಿಸಿದರೆ, ‘ನಮ್ಮ ಪಕ್ಷ ಮತ್ತು ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಆಗುವುದೆಲ್ಲ ಒಳ್ಳೆಯದಕ್ಕೆ. ನಾವು ಎಲ್ಲರ ಜತೆ ಕೆಲಸ ಮಾಡಿಕೊಂಡು ಹೋಗುತ್ತೇವೆ’ ಎಂದು ಹೇಳಿದರು. ಪ್ರಕಾಶ್‌ ಅವರನ್ನು ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಬುಧವಾರ ಸುಧಾಕರ್ ಅವರು ಸ್ಪೀಕರ್‌ ರಮೇಶ್‌ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ ಎನ್ನುತ್ತಾರೆ ಅವರ ಆಪ್ತರು. ಹೀಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್‌ ವರಿಷ್ಠರು ಮುಂಬರುವ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT