ಬುಧವಾರ, ಜನವರಿ 22, 2020
27 °C
ಚಿತ್ರಾವತಿ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ನೆಮ್ಮದಿಯ ಬದುಕಿಗೆ ಹಕ್ಕುಗಳು ಮುಖ್ಯ: ನ್ಯಾಯಾಧೀಶ ಕೆ.ಅಮರನಾರಾಯಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಹುಟ್ಟತ್ತಾ ಎಲ್ಲರೂ ಸಮಾನರಾಗಿರುತ್ತಾರೆ. ಆದರೆ ಬೆಳೆಯುತ್ತಾ ಸಮಾಜದಲ್ಲಿರುವ ಅಸಮಾನತೆಯಲ್ಲಿ ಮುಳುಗುತ್ತಾರೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಬಾಳಲು ಮಾನವ ಹಕ್ಕುಗಳು ಪಾತ್ರ ಹೆಚ್ಚಿದೆ. ಅಸಮಾನತೆ ತೊಡೆದು ಹಾಕಿ ಮುಖ್ಯ ವಾಹಿನಿಗೆ ಬರಲು ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆ.ಅಮರನಾರಾಯಣ್ ತಿಳಿಸಿದರು.

ನಗರ ಹೊರವಲಯದ ಚಿತ್ರಾವತಿ ವಿಶ್ವವಿದ್ಯಾಲಯ ಶಿಕ್ಷಣ ಕಾಲೇಜಿನಲ್ಲಿ ‘ವಿಶ್ವ ಮಾನವ ಹಕ್ಕುಗಳ ದಿನಾಚರಣೆ’ ಅಂಗವಾಗಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಜನಸಾಮಾನ್ಯರು ಉತ್ತಮ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯಗತ್ಯ. ಆದ್ದರಿಂದ ಇತರರ ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ತಡೆದು ರಕ್ಷಣೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ದೇಶ ಮತ್ತು ರಾಜ್ಯ ಮಟ್ಟದಲ್ಲಿ ರಚಿಸಿರುವ ಮಾನವ ಹಕ್ಕುಗಳ ಆಯೋಗಗಳು ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಬೇಕು’ ಎಂದು ಹೇಳಿದರು.

‘ಮಾನವ ಹಕ್ಕುಗಳು ಮನುಷ್ಯ ಹುಟ್ಟಿನಿಂದಲೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಹಾಗೂ ಸಮಾನತೆಯನ್ನು ನೀಡುತ್ತೇವೆ. ವಿಶ್ವ ಸಂಸ್ಥೆಯು 1948 ಡಿ. 10 ರಂದು ಮಾನವ ಹಕ್ಕುಗಳನ್ನು ರಕ್ಷಿಸುವ ಮೂಲ ಉದ್ದೇಶವನ್ನಿಟ್ಟುಕೊಂಡು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಆಚರಿಸಲು ಘೋಷಣೆ ಮಾಡಿದೆ. ಇಂದು ದೇಶ ಸೇರಿದಂತೆ ಇಡೀ ಪ್ರಪಂಚವೇ ಮಾನವ ಹಕ್ಕುಗಳ ವಿರುದ್ಧ ಹೋರಾಟ ನಡೆಸಿ ಹಕ್ಕುಗಳ ರಕ್ಷಣೆಯನ್ನು ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಈ ದಿನಾಚರಣೆ ಆಚರಣೆ ಮಾಡುತ್ತಿದೆ’ ಎಂದರು.

‘ಭಾರತ ಸಂವಿಧಾನದ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದಲೇ ಸಮಾನತೆ, ಸ್ವಾತಂತ್ರ್ಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ಜತೆಗೆ ಶೋಷಣೆಯ ವಿರುದ್ಧದ ಹಕ್ಕು ಲಭಿಸುತ್ತದೆ. ಪ್ರತಿಯೊಬ್ಬರೂ ಇದನ್ನು ಅರಿತು ಪರರ ಸ್ವಾತಂತ್ರ್ಯವನ್ನು ಗೌರವಿಸುವ ಜತೆಗೆ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಧ್ವನಿ ಎತ್ತುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ ಮಾತನಾಡಿ, ‘ಮಾನವ ಹಕ್ಕುಗಳಿಂದ ಉಲ್ಲಂಘನೆಗೊಳಗಾದ ನಿರ್ಗತಿಕರಿಗೆ ಕಾನೂನಿನ ರಕ್ಷಣೆ, ನೆರವು, ಬದುಕಲು ದಾರಿಯನ್ನು ತೋರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಒಬ್ಬ ವ್ಯಕ್ತಿಯನ್ನು ಮತ್ತೊಬ್ಬ ವ್ಯಕ್ತಿ ಶೋಷಣೆ ಮಾಡಬಾರದು ಎನ್ನುವ ಉದ್ದೇಶವಿಟ್ಟುಕೊಂಡು ವಿಶ್ವ ಸಂಸ್ಥೆ ಮಾನವ ಹಕ್ಕುಗಳನ್ನು ಜಾರಿಗೆ ತಂದಿದೆ ಆದ್ದರಿಂದ ಇವತ್ತು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್, ಎಚ್. ದೇವರಾಜು, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮಾಲಾ, ಶಾಂತಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ.ವಿಶ್ವನಾಥ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು