ಸೋಮವಾರ, ಮಾರ್ಚ್ 30, 2020
19 °C
ಕಾಗಾನಪಲ್ಲಿ, ಮರವಪಲ್ಲಿ, ಸಿದ್ದನಪಲ್ಲಿ, ಮೈನಗಾನಪಲ್ಲಿ; ಸಂಚಾರಕ್ಕೆ ಕಚ್ಚಾ ರಸ್ತೆಯೇ ಗತಿ

ಬಾಗೇಪಲ್ಲಿ: ತಾಂಡಾಗಳಿಗೆ ಮರೀಚಿಕೆಯಾದ ರಸ್ತೆ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನ ಬೆಟ್ಟಗುಡ್ಡಗಳ ತಪ್ಪಲಿನಲ್ಲಿರುವ ಲಂಬಾಣಿ ತಾಂಡಾಗಳಿಗೆ ಇಂದಿಗೂ ಸೂಕ್ತ ಸಂಪರ್ಕ ರಸ್ತೆ ಇಲ್ಲ. ಕಚ್ಚಾ ರಸ್ತೆಯಲ್ಲಿಯೇ ಇಂದಿಗೂ ಇಲ್ಲಿನ ಜನರು ಸಂಚರಿಸಬೇಕಾಗಿದೆ.

ಕಾಗಾನಪಲ್ಲಿ, ಮರವಪಲ್ಲಿ, ಸಿದ್ದನಪಲ್ಲಿ, ಮೈನಗಾನಪಲ್ಲಿ ಲಂಬಾಣಿ ತಾಂಡಾಗಳಿಗೆ ರಸ್ತೆ ನಿರ್ಮಿಸಿ ಎಂದು ಇಲ್ಲಿನ ಜನರು ಈ ಹಿಂದಿನ ಚುನಾವಣೆಗಳನ್ನು ಬಹಿಷ್ಕರಿಸಿದರು. ಅಧಿಕಾರಿಗಳಿಗೆ ಪರಿಪರಿಯಾಗಿ ಮನವಿ ಮಾಡಿದ್ದರು. ಆದರೆ ತಾಂಡಾಗಳಿಗೆ ಇದುವರೆಗೂ ರಸ್ತೆ ಮಾಡಿಸಿಲ್ಲ ಎಂದು ಗ್ರಾಮಸ್ಥರು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾರಕೂರು ಕ್ರಾಸ್ ಮೂಲಕ ಪಾತಪಾಳ್ಯ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಕಾಗಾನಪಲ್ಲಿ ಕ್ರಾಸ್ ಇದೆ. ಕಾಗಾನಪಲ್ಲಿ ತಾಂಡಾದಲ್ಲಿ 200 ಮಂದಿ, ಮರವಪಲ್ಲಿ 400, ಸಿದ್ದನಪಲ್ಲಿ 150 ಹಾಗೂ ಮೈನಗಾನಪಲ್ಲಿ ತಾಂಡದಲ್ಲಿ 100 ಮಂದಿ ವಾಸಿಸುತ್ತಿದ್ದಾರೆ.

ಎಲ್ಲರೂ ಬಹುತೇಕ ಕೃಷಿ ಕೂಲಿಕಾರ್ಮಿಕರೇ ಇದ್ದಾರೆ. ಈ ತಾಂಡಾಗಳಿಗೆ ತೆರಳಬೇಕಾದರೆ ಕಾಲು ದಾರಿಯಲ್ಲಿಯೇ ಸಾಗಬೇಕು. ಈ ಕಚ್ಚಾ ರಸ್ತೆಗಳು ಜಲ್ಲಿ-ಕಲ್ಲುಗಳಿಂದ ಕೂಡಿವೆ. ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳು ಕಳೆಗಿಡಗಳು ಬೆಳೆದಿವೆ.

ತಾಂಡಾಗಳಿಗೆ ಬಸ್‌ ಸಂಚರಿಸುವುದಿಲ್ಲ. ಇದರಿಂದ ಗ್ರಾಮಸ್ಥರು, ಗರ್ಭಿಣಿಯರು, ಬಾಣಂತಿಯರು, ವೃದ್ಧರು, ವಿದ್ಯಾರ್ಥಿಗಳು ಕಾಗಾನಪಲ್ಲಿ ಕ್ರಾಸ್‌ಗೆ ನಡೆದು ಅಲ್ಲಿಂದ ಬಸ್ ಬಸ್ ಅಥವಾ ಇತರೆ ವಾಹನಗಳನ್ನು ಹಿಡಿಯಬೇಕು. ಆಟೊಗಳ ಸಂಚಾರ ಸಹ ಅತಿ ವಿರಳ. ಆಸ್ಪತ್ರೆ, ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ಕಷ್ಟದ ಸ್ಥಿತಿ ಇದೆ.

ರಸ್ತೆ ಮಾಡಿಕೊಡಿ ಎಂದು ಜನರು ಸರ್ಕಾರಿ ಕಚೇರಿಗಳ ಮುಂದೆ ಹೋರಾಟ ಸಹ ನಡೆಸಿದ್ದರು. 2005ರ ಲೋಕಸಭಾ ಚುನಾವಣೆ ಸಮಯದಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆಗ ತಹಶೀಲ್ದಾರ್‌ ತಾಂಡಾಗಳಿಗೆ ಭೇಟಿ ನೀಡಿ ರಸ್ತೆ ಮಾಡಿಸುವ ಭರವಸೆ ನೀಡಿದ್ದರು. ಆದರೆ ರಸ್ತೆ ಆಗಲಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರು ಮತ ಚಲಾಯಿಸದೆ ಪ್ರತಿಭಟಿಸಿದರು.

ಹಿಂದಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರಿಗೆ ರಸ್ತೆ ಮಾಡಿಸಿ ಕೊಡಿ ಜನರು ಮನವಿ ಮಾಡಿದ್ದರು. ಅವರು ಭೇಟಿ ನೀಡಿ ರಸ್ತೆ, ನೀರು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಖುದ್ದು ಪರಿಶೀಲಿಸಿದ್ದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಾಂಡಾ ರಸ್ತೆಗಳನ್ನು ಸರ್ವೆ ಮಾಡಿಸುವಂತೆ ಸೂಚಿಸಿ, ₹ 7 ಕೋಟಿ ಹಣ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಅನಿರುದ್ಧ್ ಅವರ ವರ್ಗಾವಣೆ ಆಯಿತು. ನಂತರ ಯಾವೊಬ್ಬ ಅಧಿಕಾರಿಗಳು ತಾಂಡಾಗಳ ರಸ್ತೆಯ ಅಭಿವೃದ್ಧಿ ಕಡೆ ಗಮನ ಹರಿಸಿಲ್ಲ.

ತಾಂಡಾಕ್ಕೆ ಅಭಿವೃದ್ಧಿ ಕಲ್ಪಿಸಿ
ತಾಂಡಾದಿಂದ ಆಸ್ಪತ್ರೆ ಇರುವ ಗ್ರಾಮಗಳಿಗೆ ಬಾಣಂತಿರು, ಗರ್ಭಿಣಿಯರು ಸಂಚರಿಸಲು ಆಗುತ್ತಿಲ್ಲ. ಚುಚ್ಚುಮದ್ದುಗಳನ್ನು ಕೊಡಿಸಲು ಆಗುತ್ತಿಲ್ಲ. ಕುಡಿಯುವ ನೀರು ಸಮರ್ಪಕವಾಗಿ ಇಲ್ಲ. ಪೌಷ್ಟಿಕಾಂಶ ಕೊರತೆ ಹೆಚ್ಚುತ್ತಿದೆ. ಸರ್ಕಾರಗಳು ತಾಂಡಾಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳುತ್ತಿವೆ. ಆದರೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ರಸ್ತೆ , ಶುದ್ಧ ಕುಡಿಯುವ ನೀರು, ಶಾಲೆ, ಆರೋಗ್ಯ, ಸ್ವಚ್ಛತೆ ಕಲ್ಪಿಸಬೇಕು ಎಂದು ಮರವಪಲ್ಲಿ ತಾಂಡಾದ ಕಲಾವತಿ ಆಗ್ರಹಿಸುವರು.

ನಮ್ಮೂರಿಗೆ ಮಾತ್ರ ಅಭಿವೃದ್ಧಿ ಇಲ್ಲ
ಬಾಗೇಪಲ್ಲಿ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ರಸ್ತೆಗಳು ಆಗುತ್ತಿದೆ. ಆದರೆ ಅಧಿಕಾರಿಗಳು ನಮ್ಮ ತಾಂಡಾಗಳ ಅಭಿವೃದ್ಧಿ ಏಕೆ ಮಾಡುತ್ತಿಲ್ಲ? ಅಧಿಕಾರಿಗಳಿಗೆ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಿತ್ಯ ಅಧಿಕಾರಿಗಳು ರಸ್ತೆಯಲ್ಲಿ ನಡೆದರೆ ಗೊತ್ತಾಗುತ್ತದೆ ಎಂದು ಸಿದ್ದನಪಲ್ಲಿ ತಾಂಡಾದ ಸೀನಾನಾಯಕ್ ಅಸಮಾಧಾನ ವ್ಯಕ್ತಪಡಿಸುವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು