ಸೋಮವಾರ, ಆಗಸ್ಟ್ 8, 2022
21 °C
ಹಿಪ್ಪುನೇರಳೆ ತೋಟದಲ್ಲಿ ರೇಷ್ಮೆ ಕೃಷಿ ವಿಜ್ಞಾನಿ ಡಾ.ಕೆ.ಎಸ್.ವಿನೋದಾ ತರಬೇತಿ

ಬೇರುಗಂಟು ರೋಗ; ಇಳುವರಿ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಹಿಪ್ಪುನೇರಳೆ ತೋಟಗಳಲ್ಲಿ ಬೇರುಗಂಟು ರೋಗ ಉಲ್ಬಣಗೊಳ್ಳುತ್ತಿದ್ದು ಸೊಪ್ಪಿನ ಇಳುವರಿ ಹಾಗೂ ಗುಣಮಟ್ಟ ಕುಸಿಯುತ್ತಿದೆ ಎಂದು ರೇಷ್ಮೆ ಕೃಷಿ ವಿಜ್ಞಾನಿ ಡಾ.ಕೆ.ಎಸ್.ವಿನೋದಾ ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಕುರುಬೂರಿನ ಮಂಜುನಾಥ್ ಎಂಬುವವರ ಹಿಪ್ಪುನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೊರಾಂಗಣ ತರಬೇತಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.

ತೋಟಗಳಲ್ಲಿ ಬೇರುಗಂಟು ರೋಗ ಪೀಡಿತ ಸಸ್ಯಗಳ ಬೇರುಗಳಲ್ಲಿ ಜಂತುಗಳು ಗಂಟುಗಳನ್ನುಂಟು ಮಾಡಿ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಸೊಪ್ಪಿನ ಎಲೆಗಳು ಬಿಳಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳಿಂದ ಕೂಡಿದ್ದು ಚಮಚದ ಆಕಾರ ಪಡೆಯುತ್ತವೆ. ಈ ಜಂತುಗಳನ್ನು ನಾಶಪಡಿಸಲು ವರ್ಷಕ್ಕೆ ಒಮ್ಮೆಯಾದರೂ ಬೇವಿನ ಹಿಂಡಿ, ನೀಮಾಹರಿ ನೀಡಬೇಕು ಎಂದು ಸೂಚಿಸಿದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಜೀವಾಣುಗಳ ಮಿಶ್ರಣದ (100 ಲೀ. ನೀರಿಗೆ 6 ಲೀ ಜೀವಾಣು ಮಿಶ್ರಣ) ದ್ರಾವಣವನ್ನು ನಾಲ್ಕು ತಿಂಗಳಿಗೊಮ್ಮೆ ಪವರ್ ಸ್ಪ್ರೇಯರ್ ಮೂಲಕ ಬೇರಿನವರೆಗೆ ಮಣ್ಣಿನಲ್ಲಿ ಸೇರುವಂತೆ ಸಿಂಪಡಿಸಿ ನೀರು ಹಾಯಿಸಬೇಕು. ಇದರಿಂದ ಜಂತು ಹುಳುವನ್ನು ಪರಿಸರಸ್ನೇಹಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಹಿಪ್ಪುನೇರಳೆ ತೋಟಗಳಲ್ಲಿ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುವುದು, ಎಲೆಗಳಿಗೆ ಚುಕ್ಕೆಗಳು ಬರುವುದು ಕಂಡುಬಂದರೆ ವಿಜ್ಞಾನಿಗಳನ್ನು ಅಥವಾ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬೇಕು. ಅವರ ಸಲಹೆ, ಸೂಚನೆಯಂತೆ ಔಷಧೋಪಚಾರ ಕೈಗೊಳ್ಳ ಬೇಕು. ತೋಟಗಳನ್ನು ಸಮ ರ್ಪಕವಾಗಿ ನಿರ್ವಹಿಸಿದರೆ ರೋಗ ಬಾಧೆಯು ಕಡಿಮೆಯಾಗುತ್ತದೆ ಎಂದರು.

ಬೇಸಾಯಶಾಸ್ತ್ರ ವಿಜ್ಞಾನಿ ವಿಶ್ವನಾಥ್ ಮಾತನಾಡಿ, ಹಿಪ್ಪುನೇರಳೆಯಲ್ಲಿ ಕಳೆ ನಿಯಂತ್ರಣ ಮಾಡಿ ತೋಟಗಳನ್ನು ಸ್ವಚ್ಛವಾಗಿಡಬೇಕು. ಆಸರೆ ಸಸ್ಯಗಳನ್ನು ನಾಶಪಡಿಸಬೇಕು. ಅಂತರ ಬೆಳೆಯಾಗಿ ಚೆಂಡು, ಸಾಸಿವೆಯಂತಹ ಶತ್ರು ಸಸ್ಯಗಳನ್ನು ವರ್ಷಕ್ಕೊಮ್ಮೆ ಬೆಳೆಸುವುದರಿಂದಲೂ ಜಂತು ನಿಯಂತ್ರಣ ಮಾಡಬಹುದು. ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ರೇಷ್ಮೆ ಹುಳುಗಳಿಗೆ ಗುಣಮಟ್ಟದ ಸೊಪ್ಪನ್ನು ನೀಡಿದರೆ ಗುಣಮಟ್ಟದ ಗೂಡನ್ನು ಪಡೆದು ಹೆಚ್ಚಿನ ದರ ಪಡೆಯಬಹುದು ಎಂದರು.

ಹಿಪ್ಪುನೇರಳೆ ಸಸ್ಯಗಳಿಗೆ ಬೇರುಗಂಟು ರೋಗಕ್ಕೆ ಔಷಧೋಪಚಾರ ಪದ್ಧತಿಯನ್ನು ಪ್ರತ್ಯಕ್ಷಿಕೆ ಮೂಲಕ ಡಾ.ಕೆ.ಎಸ್.ವಿನೋದ ಮಾಡಿ ತೋರಿಸಿದರು. ವಿಜ್ಞಾನಿ ಆನಂದ್, ಕುರುಬೂರು ಹಾಗೂ ಸುತ್ತಮುತ್ತಲಿನ ಪ್ರಗತಿಪರ ರೈತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.