ಭಾನುವಾರ, ಸೆಪ್ಟೆಂಬರ್ 26, 2021
21 °C
ವೈಜ್ಞಾನಿಕ ರೀತಿಯಲ್ಲಿ ಕಸ ವಿಂಗಡಣೆ: ರಿಯಾಯಿತಿ ದರದಲ್ಲಿ ಮಾರಾಟ

ಚಿಕ್ಕಬಳ್ಳಾಪುರ: ₹1ಕ್ಕೆ ಒಂದು ಕೆ.ಜಿ. ಗೊಬ್ಬರ; ಸಾವಯವ ಕೃಷಿಗೆ ಪ್ರೋತ್ಸಾಹ

ದೀಪಕ್‌.ಎನ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದ ನಗರಸಭೆಯೂ ಪ್ರತಿ ಮನೆಯಿಂದ ಸಂಗ್ರಹಿಸಿದ ಹಸಿ ಮತ್ತು ಒಣ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡಿಸಿ, ಅದರಿಂದ ಗೊಬ್ಬರ ತಯಾರಿಕೆ ಮಾಡುತ್ತಿದೆ. ಆ ಗೊಬ್ಬರವನ್ನು ಒಂದು ಕೆ.ಜಿಗೆ ₹1ನಂತೆ ರೈತರಿಗೆ ಮಾರಾಟ ಮಾಡಿ ಮಾದರಿಯಾಗಿದೆ.

ನಗರದ 31 ವಾರ್ಡ್‍ಗಳಲ್ಲಿ ಮನೆಯಿಂದ ಸಂಗ್ರಹಿಸಿದ ಕಸವನ್ನು ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಲಾಗುತ್ತದೆ. ಬಳಿಕ ಒಣ ಕಸವಾದ ಪ್ಲಾಸ್ಟಿಕ್, ಕಬ್ಬಿಣದ ಚೂರು ಇನ್ನಿತರೆ ವಸ್ತುಗಳನ್ನು ಪೌರಕಾರ್ಮಿಕರೇ ನೇರವಾಗಿ ಮಾರಾಟ ಮಾಡಿ ಒಂದಿಷ್ಟು ಹಣ ಗಳಿಸಿದರೆ, ಹಸಿ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ಎರೆಹುಳು ಗೊಬ್ಬರ ತಯಾರಿಕೆ, ಬಯೋಗ್ಯಾಸ್ ತಯಾರಿಕೆಗೆ ಬಳಸಲಾಗುತ್ತಿದೆ.

ರಿಯಾಯಿತಿ ದರ: ವೈಜ್ಞಾನಿಕವಾಗಿ ಸಂಗ್ರಹವಾಗುವ ಗೊಬ್ಬರವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಒದಗಿಸಲು ನಗರಸಭೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪುಟ್ಟತಿಮ್ಮನಹಳ್ಳಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರೈತರು ಭೇಟಿ ನೀಡಿ ಒಂದು ಕೆ.ಜಿ ಗೊಬ್ಬರಕ್ಕೆ ₹1 ರಿಯಾಯಿತಿ ದರದಲ್ಲಿ ಗೊಬ್ಬರ ಖರೀದಿಸಬಹುದಾಗಿದೆ.

ಸಾವಯವ ಕೃಷಿಗೆ ರೈತರಿಗೆ ಉತ್ತೇಜನ: ಚಿಕ್ಕಬಳ್ಳಾಪುರ ನಗರಸಭೆಯೂ ಸಾವಯವ ಕೃಷಿಗೆ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ತ್ಯಾಜ್ಯ ಸಂಸ್ಕರಣಾ ಘಟಕದ ಖಾಲಿಯಿರುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಬಳಸದೆ ಘಟಕದಲ್ಲಿ ತಯಾರಾಗಿರುವ ಎರೆಹುಳುಗೊಬ್ಬರ ಬಳಸಿ ಸಾವಯವ ಪದ್ಧತಿಯಲ್ಲಿ ವಿವಿಧ ರೀತಿಯ ಸೊಪ್ಪು, ತರಕಾರಿ ಹಲವು ರೀತಿಯ ಬೆಳೆಗಳನ್ನು ಬೆಳೆಯಲು ಮುಂದಾಗಿದೆ. ಸಾವಯುವ ಕೃಷಿ ಮಾಡಲು ರೈತರನ್ನು ಉತ್ತೇಜಿಸಲು ಮುಂದಾಗಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಡಿ. ಲೋಹಿತ್ ತಿಳಿಸಿದರು.

ಯಂತ್ರೋಪಕರಣಗಳ ಬಳಕೆ

ತಾಲ್ಲೂಕಿನ ಪುಟ್ಟತಿಮ್ಮನಹಳ್ಳಿಯ 15 ಎಕರೆ ಪ್ರದೇಶದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್ ವಸ್ತುಗಳು ಹಾಗೂ ಗೊಬ್ಬರವನ್ನು ಬೇರ್ಪಡಿಸುವ ಬೃಹತ್ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳ ಸಹಾಯದಿಂದ ಕಸವನ್ನು ವಿವಿಧ ಹಂತಗಳಲ್ಲಿ ವಿಂಗಡಿಸಲಾಗುತ್ತದೆ.

ಎರೆಹುಳು ಗೊಬ್ಬರ ಘಟಕ

ಇದೇ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಹಸಿ ಕಸದಿಂದ ಎರೆಹುಳು ಗೊಬ್ಬರ ತಯಾರಿಕಾ ಘಟಕವನ್ನೂ ಸ್ಥಾಪಿಸಲಾಗಿದೆ. ಇದರಿಂದ ತಯಾರಾಗುವ ಗೊಬ್ಬರವನ್ನು ರೈತರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದು, ಈಗಾಗಲೇ ಈ ಘಟಕದಲ್ಲಿ ರೈತರಿಗೆ ಮಾರಾಟ ಮಾಡಲು 20ರಿಂದ 25 ಟನ್‍ನಷ್ಟು ಗೊಬ್ಬರವನ್ನು ಸಂಗ್ರಹಿಸಲಾಗಿದೆ.

ರೈತರಿಗೆ ಸದುಪಯೋಗ: ನಗರಸಭೆ ಅಧ್ಯಕ್ಷ ಆನಂದರೆಡ್ಡಿ

ನಗರದ 31 ವಾರ್ಡ್‍ಗಳ ಪ್ರತಿ ಮನೆ ಬಾಗಿಲಿಗೆ ನಗರಸಭೆ ವಾಹನಗಳು ತೆರಳಿ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಹಸಿ ಕಸದಿಂದ ವೈಜ್ಞಾನಿಕ ರೀತಿಯಲ್ಲಿ ಗೊಬ್ಬರ ತಯಾರಿಸಲಾಗುತ್ತಿದೆ. ರೈತರಿಗಾಗಿ ರಿಯಾಯಿತಿ ದರದಲ್ಲಿ ಒಂದು ಕೆ.ಜಿ ಗೊಬ್ಬರವನ್ನು ₹1ಕ್ಕೆ ಮಾರಾಟ ಮಾಡಲು ಮುಂದಾಗಿದ್ದೇವೆ. ಇದನ್ನು ರೈತರು ಸದುಪಯೋಗ ಪಡಿಸಿಕೊಂಡು ಸಾವಯುವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು ಎನ್ನುತ್ತಾರೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು