ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಮಳ್ಳೂರಿನಲ್ಲಿ ‘ಅತ್ತೆಮಳೆ ಹೊಂಗಲು’: ಬೆಳೆಗಳ ದೃಷ್ಟಿ ತೆಗೆಯುವ ಆಚರಣೆ

Published 14 ಅಕ್ಟೋಬರ್ 2023, 6:17 IST
Last Updated 14 ಅಕ್ಟೋಬರ್ 2023, 6:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ‘ಅತ್ತೆಮಳೆ ಹೊಂಗಲು’ ಎಂಬ ವಿಶಿಷ್ಟ ಆಚರಣೆಯನ್ನು ಗ್ರಾಮಸ್ಥರು ಒಗ್ಗೂಡಿ ಆಚರಿಸಿದರು.

ಬೆಳೆದು ನಿಂತ ಬೆಳೆಗಳಿಗೆ ದೃಷ್ಟಿಯಾಗದಿರಲಿ, ಕಣ್ಣೆಸರಾಗದಿರಲಿ ಎಂಬ ಉದ್ದೇಶದಿಂದ ಈ ಆಚರಣೆ ನಡೆಸಲಾಗುತ್ತಿದೆ. ಹಸ್ತ ಅಥವಾ ಅತ್ತೆ ಮಳೆ ನಕ್ಷತ್ರದಲ್ಲಿ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಗಳ ಹಳ್ಳಿಗಳಲ್ಲಿ ಆಚರಿಸಲಾಗುತ್ತಿದೆ.

ಇದನ್ನು ಅತ್ತೆ ಮಳೆ ವಂಗಲು, ಅತ್ತವಾನ ಬಲಿ, ಅತ್ತಾನಪಲಿ, ಹಸ್ತವಾನ ಪೊಂಗಲಿ, ಹಸ್ತವೊಂಗಲ, ಅತ್ತೆಮಳೆ ಹೊಂಗಲು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಾಮಾನ್ಯವಾಗಿ ಹಳ್ಳಿಯಲ್ಲಿ ಗಂಗಮ್ಮ ಅಥವಾ ಗ್ರಾಮದೇವತೆ ಎದುರು ಈ ಆಚರಣೆ ನಡೆಯುತ್ತದೆ.

ಈ ಆಚರಣೆ ದಿನವನ್ನು ಹಳ್ಳಿಯ ಹಿರಿಯರು ತೀರ್ಮಾನಿಸಿ ಸಾರುತ್ತಾರೆ. ಎಲ್ಲ ಮನೆಗಳಿಂದ ಚಂದಾ (ವರವ ಅಥವಾ ವರಿ ಎನ್ನುತ್ತಾರೆ) ವನ್ನು ಅಕ್ಕಿ ಹಾಗೂ ಹಣದ ರೂಪದಲ್ಲಿ ಪಡೆಯುತ್ತಾರೆ. ವರಿ ಹಣದಿಂದ ಪೂಜಾ ಸಾಮಾನು ಹಾಗೂ ಕುರಿ(ಮರಿ)ಯನ್ನು ಕೊಂಡು ತರುತ್ತಾರೆ.

ಆಚರಣೆ ದಿನದಂದು ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಗುಡಿಸಿ ಸಾರಿಸುತ್ತಾರೆ. ಸ್ನಾನ ಮಾಡಿ ಮಡಿ ತೊಟ್ಟು ಪೂಜಾ ಸಾಮಾನುಗಳೊಂದಿಗೆ ಗುಡಿ ಬಳಿ ಬರುತ್ತಾರೆ. ಹೊಸ ಮಡಕೆಯಲ್ಲಿ ಅನ್ನ ಬೇಯಿಸುತ್ತಾರೆ. ಕುಂಬಾರರ ಮನೆಯಿಂದ ಬೂದಿ ತಂದು, ಅವರೆ ಸೊಪ್ಪು, ಲಕ್ಕಿಸೊಪ್ಪು, ಬೇವಿನ ಸೊಪ್ಪು ಮುಂತಾದ ಒಂಬತ್ತು ರೀತಿಯ ಸೊಪ್ಪುಗಳನ್ನು ಬೆರೆಸಿಡುವರು. ದೇವತೆಯೆದುರು ಎಡೆ ಇಟ್ಟು ಮರಿಯನ್ನು ಬಲಿ ಕೊಟ್ಟು ರಕ್ತವನ್ನು ಅನ್ನ, ಬೂದಿ ಮತ್ತು ಸೊಪ್ಪುಗಳಿಗೆ ಬೆರೆಸುತ್ತಾರೆ.

ತೋಟಿ, ತಳವಾರ, ನೀರ್ಗಂಟಿಗಳು ಒಟ್ಟಿಗೆ ಸೇರಿ ಮೊದಲು ಹಳ್ಳಿಯ ಸುತ್ತಲೂ ಒಂದು ಪ್ರದಕ್ಷಿಣೆ ಹೊರಟು ಎಲ್ಲರ ಜಮೀನುಗಳ ಮೇಲೆ ರಕ್ತ ಬೆರೆಸಿದ ಅನ್ನ, ಬೂದಿ ಮತ್ತು ಸೊಪ್ಪುಗಳನ್ನು ಹೋಬಲಿ ಅಥವಾ ಹೋಬಲೋ ಬಲಿ ಅಥವಾ ಕೋಬಲಿ (ತಗೋ ಬಲಿ) ಎಂದು ಮೂರು ಸಲ ಉಚ್ಚರಿಸಿ ಎಸೆಯುತ್ತಾರೆ. ಅನಂತರ ಹಳ್ಳಿಯ ಸುತ್ತಲೂ ಅವನ್ನು ಎರಚುತ್ತಾರೆ. ಬೂದಿ ಚೆಲ್ಲೋದನ್ನು ‘ಚರಗ ಚೆಲ್ಲೋದು’ ಅಂತ ಕರೆಯುವರು.

‘ಈ ಬೂದಿ, ಲಕ್ಕಿರಿಕಡ್ಡಿ ತರುವ, ಹಂಚುವ, ಚರಗ ಚಲ್ಲುವ ಕೆಲಸ ಊರ ತೋಟಿಯ ಜವಾಬ್ದಾರಿ ಆಗಿರುತ್ತದೆ. ಆತನಿಗೆ ನಾವು ತಲಾ ಇಂತಿಷ್ಟು ‘ಓಲಿ’ ಕೊಡಬೇಕು ಮತ್ತು ಬೆಳೆ ಆದಾಗ ‘ಮ್ಯಾರೆ’ ಕೊಡಬೇಕ’ ಎಂದು ಆಚರಣೆಯ ಹಿಂದಿನ ಜನಪದ ಕಥೆ ಹೇಳುತ್ತಾರೆ ರೈತ ಡಿ.ಎನ್.ಸುದರ್ಶನರೆಡ್ಡಿ.

‘ಈ ಆಚರಣೆಯಿಂದ ಪ್ರತಿಯೊಬ್ಬರ ಜಮೀನಿನಲ್ಲೂ ಉತ್ತಮ ಫಸಲು ಬರಲಿ, ಹಳ್ಳಿಗೆ ಒಳ್ಳೆಯದಾಗಲಿ ಎಂದು ಗ್ರಾಮದೇವತೆಯನ್ನು ಸಂತೃಪ್ತಿ ಪಡಿಸುವ ರೀತಿಯಿದು. ಅಲ್ಲಲ್ಲಿ ಮೂರು ನಾಮ, ಕುಡುಗೋಲು, ನೇಗಿಲು, ನೊಗ ಮುಂತಾದ ಚಿತ್ರಗಳನ್ನು ಬರೆಯುವರು. ಇದರಿಂದ ಬೆಳೆಗಳಿಗೆ ಬಿದ್ದ ಕೀಟಗಳು, ಹುಳುಗಳು ಸತ್ತು ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆಯಿದೆ. ಕಡೆಯಲ್ಲಿ ಬಲಿಕೊಟ್ಟ ಮರಿಯನ್ನು ಕೊಯ್ದು ಭಾಗ ಮಾಡಿಕೊಂಡು ಹಂಚಿಕೊಂಡು ಅಡುಗೆ ಮಾಡಿ ತಿನ್ನುತ್ತಾರೆ’ ಎಂದು ದೇವರಮಳ್ಳೂರಿನ ಬೈರಪ್ಪ, ಮುನಿರೆಡ್ಡಿ, ಅಕ್ಕಲಪ್ಪ, ಬಚ್ಚಪ್ಪ, ಬಿ.ಎಲ್.ಮುನಿರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT