ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಭಾವನಾ ಯಾತ್ರೆ: ಪೂರ್ವಭಾವಿ ಸಭೆ

ಶಿಡ್ಲಘಟ್ಟದಲ್ಲಿ ನಾಳೆ ಸಂಚಾರ
Last Updated 4 ಫೆಬ್ರುವರಿ 2021, 5:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಸುಗಟೂರು ಗ್ರಾಮಕ್ಕೆ ಫೆಬ್ರುವರಿ 5ರಂದು ತ್ರಿಪುರದ ಸದ್ಭಾವನಾ ಯಾತ್ರೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆ ನಡೆಯಿತು.

ಈಶಾನ್ಯ ರಾಜ್ಯ ತ್ರಿಪುರ ರಾಜ್ಯವು ಏಕೀಕರಣಗೊಂಡ ಸುವರ್ಣಮಹೋತ್ಸವದ ಅಂಗವಾಗಿ 50 ದಿನಗಳ ಕಾಲ ದೇಶದ 28 ರಾಜ್ಯಗಳಲ್ಲಿ ಸದ್ಭಾವನಾ ಯಾತ್ರೆಯನ್ನು ಹಮ್ಮಿಕೊಂಡಿದೆ. ತ್ರಿಪುರ ರಾಜ್ಯದ ಯುವವಿಕಾಸ ಕೇಂದ್ರ ಮತ್ತು ನೀಫಾ ಸಂಸ್ಥೆಯ ಆಶ್ರಯದಲ್ಲಿ 11 ಮಂದಿ ಯುವ ಸ್ವಯಂಸೇವಕರನ್ನೊಳಗೊಂಡ ತಂಡದ ರಾಷ್ಟ್ರೀಯ ಸದ್ಭಾವನಾಯಾತ್ರೆಗೆ ಅಲ್ಲಿನ ಮುಖ್ಯಮಂತ್ರಿ ವಿಪ್ಲವ್‌ ಕುಮಾರ್‌ ದೇವ್‌ ಜ.21ರಂದು ಚಾಲನೆ ನೀಡಿದ್ದಾರೆ. ಅಂದಿನಿಂದ ಸದ್ಭಾವನಾ ಯಾತ್ರೆಯು ಈಗಾಗಲೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಂಚರಿಸಿ ಫೆ.5ರಂದು ಕರ್ನಾಟಕ ರಾಜ್ಯವನ್ನು ಪ್ರವೇಶಿಸಲಿದೆ.

ಯಾತ್ರೆಯ ವೇಳೆ ರಾಷ್ಟ್ರೀಯ ಏಕತೆ, ಶಾಂತಿ, ಕಲೆ ಮತ್ತು ಸಾಹಿತ್ಯ ಪ್ರಸಾರ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು ಯಾತ್ರೆಯ ವೇಳೆ ದೇಶದಾದ್ಯಂತ ಸುಮಾರು 50 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ.

ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮಕ್ಕೆ ಸದ್ಭಾವನಾ ಯಾತ್ರೆ ಫೆ.5ರಂದು ಸಂಜೆ 4 ಗಂಟೆಗೆ ಬರಲಿದ್ದು, ಗ್ರಾಮದ ಪ್ರಮುಖ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ. ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಕೋ ಕ್ಲಬ್ ವತಿಯಿಂದ ತ್ರಿಪುರ ರಾಜ್ಯದ ಮಣ್ಣು ಮತ್ತು ಮಾತಾ ತ್ರಿಪುರೇಶ್ವರಿ ದೇವಾಲಯದ ನೀರನ್ನು ಹಾಕಿ ತ್ರಿಪುರ ರಾಜ್ಯದ ಪ್ರತಿನಿಧಿಗಳು ಗಿಡ ನೆಡಲಿದ್ದಾರೆ.

ಶಾಲಾ ಮುಂಭಾಗದಲ್ಲಿ ತ್ರಿಪುರ ರಾಜ್ಯದ ಪ್ರತಿನಿಧಿಗಳೊಂದಿಗೆ ಸಂದರ್ಶನ, ಸಾಮೂಹಿಕ ಸರ್ವಧರ್ಮ ಪ್ರಾರ್ಥನೆ, ಅಂತರರಾಜ್ಯ ಯುವ ಸಾಂಸ್ಕೃತಿಕ ವಿನಿಮಯ, ರಾಷ್ಟ್ರೀಯ ಸದ್ಭಾವನಾ ಘೋಷಣೆ, ತ್ರಿಪುರ ರಾಜ್ಯದ ವೈಶಿಷ್ಟ್ಯಗಳ ಕುರಿತ ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಶಿಕ್ಷಕ, ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಸಂಚಾಲಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದ್ದಾರೆ.

ಫೆ.6 ರಂದು ಬೆಳಿಗ್ಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ತ್ರಿಪುರ ರಾಜ್ಯದ ಪ್ರತಿನಿಧಿಗಳು ಇತಿಹಾಸ ಪ್ರಸಿದ್ಧ ಸುಗಟೂರು ಗ್ರಾಮದ ದೇವಾಲಯಗಳಿಗೆ ಭೇಟಿ ನೀಡಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಬೀಳ್ಕೊಡಲಾಗುವುದು ಎಂದು ಅವರು ಹೇಳಿದರು.

ಸದ್ಭಾವನಾ ಯಾತ್ರೆಯ ಸದಸ್ಯರು ವಿಜಯಪುರ, ದೇವನಹಳ್ಳಿ ಮಾರ್ಗವಾಗಿ ಬೆಂಗಳೂರು ತಲುಪಿ, ರಾಜ್ಯಪಾಲರನ್ನು ಭೇಟಿ ಮಾಡುವರು. ನಂತರ ಮಂಗಳೂರು ಪ್ರವೇಶಿಸಿ ಗೋವಾಗೆ ಅಂದೇ ಪ್ರಯಾಣ ಬೆಳೆಸಲಿದ್ದಾರೆ ಎಂದು ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್ ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯ ನಾರಾಯಣಸ್ವಾಮಿ, ನರಸಮ್ಮ, ಕಲಾವತಿ, ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಎಂ.ನಾಗರಾಜು, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಗುತ್ತಿಗೆದಾರ ಶಿವಶಂಕರಪ್ಪ, ದೇವರಾಜು, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥಗೌಡ, ದೊಡ್ಡಮುನಿವೆಂಕಟಶೆಟ್ಟಿ, ಮುಖ್ಯಶಿಕ್ಷಕಿ ಉಮಾದೇವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT