ಶನಿವಾರ, ಜನವರಿ 18, 2020
21 °C
ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಸಾವಿತ್ರಿಬಾಯಿ ಫುಲೆ ಸ್ವಾಭಿಮಾನದ ಸಂಕೇತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಸಾವಿತ್ರಿಬಾಯಿ ಫುಲೆ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಆ ಮೂಲಕ ಶೈಕ್ಷಣಿಕ ಕ್ರಾಂತಿಕೆ ಕಾರಣರಾದರು. ಅವರ ತತ್ವಾದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳಬೇಕು’ ಎಂದು ತಾಲ್ಲೂಕಿನ ಇನಮಿಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ನರಸಿಂಹಮೂರ್ತಿ ಹೇಳಿದರು.

ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಸಾವಿತ್ರಿ ಅವರು 1848ರಲ್ಲಿ ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಕಾರಣ. ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ಹಾಗೂ ಅವಕಾಶಗಳು ಲಭಿಸುತ್ತವೆ. ಎಲ್ಲರೂ ವಿಶೇಷವಾಗಿ ಹೆಣ್ಣುಮಕ್ಕಳು ಕೂಡ ಶಿಕ್ಷಣ ಪಡೆಯಬೇಕು. ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ, ಮತ್ತು ಮಹಾತ್ಮ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ’ ಎಂದು ತಿಳಿಸಿದರು.

ಶಿಕ್ಷಕಿ ಲಲಿತಾಂಬ ಮಾತನಾಡಿ, ‘ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಸಮಾಜಕ್ಕೆ ಸ್ಫೂರ್ತಿ. ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯರಾದರು. ಸಮಾಜದಲ್ಲಿರುವ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದೆ. ಅವುಗಳನ್ನು ಬಳಸಿಕೊಂಡು ಎಲ್ಲರೂ ಶಿಕ್ಷಣವಂತರಾಗಬೇಕು’ ಎಂದರು.

ಶಿಕ್ಷಕಿ ಸುಶೀಲಾ ಮಂಜುನಾಥ್ ಮಾತನಾಡಿ, ‘ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ್ದು ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳ ಶಿಕ್ಷಣದ ಹಿಂದಿನ ಸ್ಫೂರ್ತಿಯಾಗಿದ್ದಾರೆ. ಅಂದಿನ ಸಮಾಜದಲ್ಲಿ ಮಕ್ಕಳಿಗೆ ಮೊದಲು ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಅವರ ಹೆಸರಿನಲ್ಲಿಯೇ ಶಿಕ್ಷಕರ ದಿನವನ್ನು ಆಚರಿಸುವುದು ಹೆಚ್ಚು ಸೂಕ್ತ ಮತ್ತು ಅರ್ಥಪೂರ್ಣವಾದದ್ದು’ ಎಂದು ಹೇಳಿದರು. ಹಂಗಾಮಿ ಮುಖ್ಯ ಶಿಕ್ಷಕಿ ಭಾರತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು