ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಸರ್ಕಾರಿ ಶಾಲೆ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

Published 30 ಮೇ 2024, 14:28 IST
Last Updated 30 ಮೇ 2024, 14:28 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನೆಲ್ಲೆಡೆ ಸರ್ಕಾರಿ ಶಾಲೆಗಳ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು, ಕಲಿಕಾ ಪರಿಸರವನ್ನು ಸೃಷ್ಟಿಸಿಕೊಂಡು ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುವಂತಿವೆ.

ಈಗಾಗಲೇ ಮೇ 29ರಿಂದಲೇ ಶಾಲೆಗಳು ಆರಂಭಗೊಂಡಿದ್ದು ಸ್ವಚ್ಛತೆ, ಪೂರ್ವಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ಮೇ 31ರಂದು ಶಾಲೆ ಪ್ರಾರಂಭೋತ್ಸವಕ್ಕೆ ಮಾವಿನ ತೋರಣ, ಬಾಳೆಕಂದುಗಳಿಂದ ಶಾಲೆಯನ್ನು ಅಲಂಕರಿಸಲಾಗಿದೆ. ವಿದ್ಯಾರ್ಥಿಗಳನ್ನು ಗುಲಾಬಿ, ಸಿಹಿತಿಂಡಿ ನೀಡಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳು, ಗ್ರಾಮಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ ಪುಸ್ತಕ, ಲೇಖನಿ ವಿತರಿಸಲಾಗುವುದು.

ಶಿಕ್ಷಣ ಇಲಾಖೆಯು ಈ ವರ್ಷವನ್ನು ಶೈಕ್ಷಣಿಕ ಬಲವರ್ಧನೆ ವರ್ಷವೆಂದು ಘೋಷಿಸಿದ್ದು, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಈಗಾಗಲೇ ಒಂದು ದಿನದ ಕಾರ್ಯಾಗಾರ ಮಾಡಿ ದಾಖಲಾತಿ ಹೆಚ್ಚಳ, ವರ್ಷಪೂರ್ತಿ ಗುಣಾತ್ಮಕ ಶಿಕ್ಷಣ ನೀಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಗಿದೆ.

ಶಾಲೆಗಳಲ್ಲಿ ಈಗಾಗಲೇ ಶೈಕ್ಷಣಿಕ ಅಭಿವೃದ್ಧಿ ಯೋಜನೆ, ಕ್ರಿಯಾಯೋಜನೆ, ವೇಳಾಪಟ್ಟಿ ಮತ್ತಿತರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಈಗಾಗಲೇ ಬಹುತೇಕ ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜಾಗಿದ್ದು ಆರಂಭದಿಂದಲೇ ಪೂರ್ವಪರೀಕ್ಷೆ, ನೈದಾನಿಕ ಪರಿಹಾರ ಬೋಧನೆ, ಸಾಫಲ್ಯ ಪರೀಕ್ಷೆ, ಪಠ್ಯಬೋಧನೆ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಜತೆ ಸಮವಸ್ತ್ರಗಳನ್ನು ಈಗಾಗಲೇ ವಿತರಿಸಿದ್ದು, ಇಂದಿನಿಂದಲೇ ಹೊಸ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸುವ ನಿರೀಕ್ಷೆ ಇದೆ.

ಮಿಂಚಿನ ಸಂಚಾರ: ಶಾಲೆಗಳಲ್ಲಿ ಹೊಸ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಚುರುಕುಗೊಳಿಸಿ ಮಾರ್ಗದರ್ಶನ ನೀಡಲು ತಾಲ್ಲೂಕಿನಲ್ಲಿ ಸಿಆರ್‌ಪಿ, ಬಿಆರ್‌ಪಿ, ಇಸಿಒಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಜೂನ್ 3ರಿಂದ ಎಲ್ಲಾ ಶಾಲೆಗಳಿಗೆ ಮಿಂಚಿನ ಸಂಚಾರದ ಮೂಲಕ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿ ಮಾರ್ಗದರ್ಶನ ಮಾಡುವ ಬಗ್ಗೆ ಕ್ರಮವಹಿಸಲಾಗಿದೆ.

ಮನೆ ಮನೆ ಭೇಟಿ: ಮೇ 29ರಿಂದಲೇ ಶಾಲೆಗಳು ತೆರೆದಿದ್ದರೂ ಇನ್ನೂ ಶಾಲೆಗೆ ಬಾರದೆ ಇರುವ ವಿದ್ಯಾರ್ಥಿಗಳ ಮನೆಗಳಿಗೆ ಶಿಕ್ಷಕರ ತಂಡವು ಭೇಟಿ ನೀಡಿ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನ ನಡೆದಿದೆ. ಅಂತೆಯೇ ಅರ್ಹ ವಯಸ್ಸಿನ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ಹೊರಗುಳಿಯದಂತೆ ನೋಡಿಕೊಳ್ಳಲು ದಾಖಲಾತಿ ಆಂದೋಲನ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT