ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ರೋಗ ಕಾಟ, ಬೆಲೆಯೂ ಕುಸಿತ: ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

ಹುಳು ಆರೋಗ್ಯದಲ್ಲಿ ಏರುಪೇರು: ರೋಗ ಕಾಟ । ಬೆಲೆಯೂ ಕುಸಿತ । ಬೆಳೆ ಬಂದರೂ ನಷ್ಟ
Published 19 ಮೇ 2024, 6:22 IST
Last Updated 19 ಮೇ 2024, 6:22 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ರೈತರ ಆದಾಯದ ಮೂಲವಾಗಿರುವ ರೇಷ್ಮೆ ಕೃಷಿ ಈ ಬಾರಿ ಅಂದುಕೊಂಡಂತೆ ಕೈಹಿಡಿದಿಲ್ಲ. ಒಂದೆಡೆ ಪ್ರಕೃತಿ ಮತ್ತೊಂದೆಡೆ ಬೆಲೆ ಕುಸಿತ ರೇಷ್ಮೆ ಬೆಳೆಗಾರರನ್ನು ಹೈರಾಣಾಗಿಸಿದೆ.

ಕಳೆದ ವರ್ಷದ ಬರಗಾಲ ಮತ್ತು ಈ ಬಾರಿ ಬಿಸಿಲಿನ ತೀವ್ರತೆ ರೇಷ್ಮೆ ಕೃಷಿಯ ಮೇಲೂ ಪರಿಣಾಮ ಬೀರಿದೆ. ಅಧಿಕ ರೇಷ್ಮೆ ಹುಳುಗಳ ಆರೋಗ್ಯದಲ್ಲಿ ಏರುಪೇರಾಗಿ, ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗಿವೆ. ಇದು ಸಾಲದೆಂಬಂತೆ ರೇಷ್ಮೆಗೂಡಿನ ದರವೂ ಕುಸಿದಿದೆ. ದುಬಾರಿ ವೆಚ್ಚ ಹಾಕಿ ರೇಷ್ಮೆ ಹುಳು ಸಾಗಣೆಗೆ ಮುಂದಾದರೂ ಬೆಳೆ ಕೈ ಹಿಡಿಯುತ್ತದೆಂಬ ಬಗ್ಗೆ ಯಾವ ಆಶಾಭಾವನೆಯೂ ಇಲ್ಲ.

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ರೇಷ್ಮೆ ಗೂಡಿನ ಸರಾಸರಿ ಧಾರಣೆ ₹532 ಇತ್ತು. ಪ್ರಸ್ತಕ ಸಾಲಿನ ಏಪ್ರಿಲ್‌ನಲ್ಲಿ ₹404ಗೆ ಕುಸಿದಿದೆ.

ಬಿಸಿಲ ಝಳದಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರು ಕಡಿಮೆಯಾದರೂ, ಹಗಲು ರಾತ್ರಿ ಎನ್ನದೆ ರೇಷ್ಮೆ ತೋಟಕ್ಕೆ ರೈತರು ನೀರು ಕಟ್ಟಿದ್ದರು. ಆದರೆ, ರೇಷ್ಮೆ ಹುಳುಗಳು ಬಿಸಿಲ ಬೇಗೆಯಿಂದ ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗಿದ್ದು, ರೇಷ್ಮೆ ಬೆಳೆಗಾರರಿಗೆ ನಷ್ಟ ಉಂಟಾಗುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.

ಬಿಸಿಲಿನ ತಾಪಮಾನಕ್ಕೆ ಬೆಳೆಗಳು ಒಣಗಿ ಹೋಗುತ್ತಿವೆ. ಕಚ್ಚಾ ರೇಷ್ಮೆಗೆ ಬೇಡಿಕೆ ಕುಸಿದ ಕಾರಣ ಕಷ್ಟ ಪಟ್ಟು ಬೆಳೆದ ರೇಷ್ಮೆ ಗೂಡಿಗೂ ಸಮರ್ಪಕ ಬೆಲೆ ಸಿಗುತ್ತಿಲ್ಲ. ಬೆಳೆ ಬಂದರೂ ಬೆಳೆಗಾರ ನಷ್ಟ ಅನುಭವಿಸುವಂತಾಗಿದೆ.

100ರಿಂದ 200 ಕೆಜಿ ರೇಷ್ಮೆಗೂಡು ಬೆಳೆಯುತ್ತಿದ್ದ ರೈತರು, ಇದೀಗ 30ರಿಂದ 40 ಕೆಜಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಯಲು ಹೆಚ್ಚಿನ ಖರ್ಚು ಮಾಡಬೇಕಿದೆ. ಅಂದರೆ ರೇಷ್ಮೆಹುಳು ಮರಿಗಳ ಬೆಲೆಯೂ ಅಧಿಕವಾಗಿದೆ. ಸುಣ್ಣ, ಪೇಪರು, ಚಂದ್ರಿಕೆ ಬಾಡಿಗೆ, ಕಾರ್ಮಿಕರ ಕೂಲಿ, ಸಾಕಾಣಿಕೆ ವೆಚ್ಚ, ರೇಷ್ಮೆ ತೋಟದಿಂದ ರೇಷ್ಮೆ ಸೊಪ್ಪನ್ನು ಸಾಗಾಣಿಕೆ ಮಾಡಲು ಹೆಚ್ಚಿನ ವೆಚ್ಚ ಮಾಡಬೇಕಾಗುತ್ತಿದೆ. ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದರೂ ರೇಷ್ಮೆ ಬೆಳೆ ಬಿಸಿಲಿನ ಝಳದಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿದೆ.

ಈ ಎಲ್ಲಾ ಕಾರಣಗಳಿಂದ ರೇಷ್ಮೆ ಬೆಳೆಯುವ ರೈತರು ಸಂಕಷ್ಟ ಸ್ಥಿತಿಗೆ ಸಿಲುಕಿದ್ದಾರೆ.

ಬೇಸಿಗೆ ಕಾಲದಲ್ಲಿ ಬೆಳೆಗಳ ಸಂರಕ್ಷಣೆಗೆ  ಹಲವು ಕ್ರಮ ಅನುಸರಿಸಬೇಕು ಎಂದು ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಸಣ್ಣ ರೇಷ್ಮೆ ಬೆಳೆಗಾರರು ಹಾಗೂ ಸಾಮಾನ್ಯ ಬೆಳೆಗಾರರು ಪ್ರತ್ಯೇಕ ರೇಷ್ಮೆ ಹುಳು ಸಾಕಾಣಿಕೆ ಮನೆ ಹೊಂದಿಲ್ಲ. ತಾವು ವಾಸ ಮಾಡುವ ಮನೆಗಳು ಹಾಗೂ ಸಿಮೆಂಟ್‌ ಶೀಟ್‌ ಮೇಲ್ಛಾವಣಿಗಳಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡುವುದರಿಂದ ರೇಷ್ಮೆ ಹುಳುಗಳು ಬಿಸಿಲಿನ ತಾಪದಿಂದ ರೋಗಗಳಿಗೆ ತುತ್ತಾಗಿ ರೇಷ್ಮೆ ಬೆಳೆ ಕ್ಷೀಣಿಸಿದೆ.

ಸವಲತ್ತು ಒದಗಿಸಲು ಮನವಿ: ಸಣ್ಣ ರೇಷ್ಮೆ ಬೆಳೆಗಾರರನ್ನು ಗುರುತಿಸಿ ಬೇಸಿಗೆ ಹಾಗೂ ಬರಗಾಲದಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಅಗತ್ಯವಾದ ಉಪಕರಣಗಳು ಹಾಗೂ ಸವಲತ್ತುಗಳನ್ನು ನೀಡಬೇಕು. ಜತೆಗೆ ತರಬೇತಿ ನೀಡಬೇಕು. ಬೇಸಿಗೆ ಕಾಲದಲ್ಲಿ ರೇಷ್ಮೆ ಹುಳು ತುತ್ತಾಗುವ ರೋಗಗಳ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರ ಬೆಂಬಲ ಬೆಲೆ ನೀಡಬೇಕು ಗೋಪಾಲಗೌಡ ರೇಷ್ಮೆ ಬೆಳೆಗಾರರು

ಈ ಬಾರಿ ಬೇಸಿಗೆ ತೀವ್ರವಾಗಿತ್ತು. 38 ರಿಂದ 40 ಡಿಗ್ರಿ ಮುಟ್ಟಿದ್ದ ತಾಪಮಾನ ರೇಷ್ಮೆ ಬೆಳೆಗೆ ಮಾರಕವಾಗಿತ್ತು. ರೇಷ್ಮೆ ಹುಳುಗಳು ರೋಗಗಳಿಗೆ ತುತ್ತಾಗುವಂತಾಯಿತು. ಇಲಾಖೆಯಿಂದ ಸಾಕಷ್ಟು ಮಾರ್ಗೋಪಾಯಗಳನ್ನು ಕೊಟ್ಟಿದ್ದರೂ ಬೆಳೆ ಬೆಳೆಯುವುದು ಕಷ್ಟವಾಗಿದೆ.
–ಕೆ.ತಿಮ್ಮರಾಜು, ರೇಷ್ಮೆ ಗೂಡಿನ ಮಾರುಕಟ್ಟೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT