ಶನಿವಾರ, ಮಾರ್ಚ್ 28, 2020
19 °C
ಭೀಮಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ 21 ಮತ್ತು 22 ರಂದು ವಿಶೇಷ ಕಾರ್ಯಕ್ರಮ

ಶಿವರಾತ್ರಿ ಉತ್ಸವಕ್ಕೆ ಕರೆಯುತ್ತಿದೆ ಕೈವಾರ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಮಹಾಶಿವರಾತ್ರಿಯ ಪ್ರಯುಕ್ತ ಕೈವಾರದ ಭೀಮಲಿಂಗೇಶ್ವರ ದೇವಾಲಯದಲ್ಲಿ ಫೆ.21 ಮತ್ತು 22 ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿಯಿಡೀ ಏಕವಾರ ರುದ್ರಾಭಿಷೇಕ, ಹರಿಕಥೆ, ಭಜನೆ, ಭೀಮಲಿಂಗೇಶ್ವರಸ್ವಾಮಿಯ ವಿಶೇಷ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಅತ್ಯಂತ ಪ್ರಾಚೀನ ಮತ್ತು ವೈಶಿಷ್ಟ್ಯವಾದ ದೇವಾಲಯಕ್ಕೆ ಪೌರಾಣಿಕ ಮಹತ್ವವಿದೆ. ದೇವಾಲಯದಲ್ಲಿರುವ ಪುರಾತನವಾದ ಕಂಬಗಳಲ್ಲಿ ಈಶ್ವರ ಲಿಂಗವನ್ನು ಕಾಣಬಹುದಾದ ಏಕೈಕ ದೇವಾಲಯ ಇದಾಗಿದೆ. ದ್ವಾಪರ ಯುಗದಲ್ಲಿ ಪಂಚಪಾಂಡವರು ಈ ಕ್ಷೇತ್ರದಲ್ಲಿ ನೆಲೆಸಿದ್ದರು ಎಂಬ ನಂಬಿಕೆ ಇದೆ.

ಬೆಟ್ಟದಲ್ಲಿ ಬಕಾಸುರನನ್ನು ಸಂಹರಿಸಿ ಗವಿಯೊಳಕ್ಕೆ ಹಾಕಿ ಮುಚ್ಚಿರುವ ದೊಡ್ಡ ಬಂಡೆ ಇದೆ. ಇದನ್ನು ‘ಬಕನ ಗುಂಡು’ ಎಂದು ಹೆಸರಾಗಿದೆ. ದೇವಾಲಯದಲ್ಲಿರುವ ಭೀಮಲಿಂಗೇಶ್ವರ ಲಿಂಗ ಮತ್ತು ಬಕನ ಗುಂಡು ಒಂದೇ ಕಕ್ಷೆಯಲ್ಲಿ ಬರುತ್ತದೆ ಎನ್ನುತ್ತಾರೆ ಅರ್ಚಕರು.

ಈ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಕಂಬಗಳನ್ನು ವಿಶೇಷ ಕುಸರಿ ಕೆಲಸದಿಂದ ನಿರ್ಮಾಣ ಮಾಡಲಾಗಿದೆ. ಕಂಬಗಳಲ್ಲಿ ವಿನಾಯಕ, ಶಿವ, ಪಾರ್ವತಿ, ನಟರಾಜ ಮುಂತಾದ ವಿಗ್ರಹಗಳನ್ನು ಕಾಣಬಹುದು. ನಂದಿ ಹಾಗೂ ಒಂದು ಕಂಬದಲ್ಲಿ ಚಾಮುಂಡೇಶ್ವರಿಯ ವಿಗ್ರಹ ಇದೆ.

ಪಾಪ ಪರಿಹಾರ್ಥಕ್ಕೆ ಲಿಂಗ ಪ್ರತಿಷ್ಠಾಪನೆ

ಅರಗಿನ ಮನೆಯಿಂದ ಕುಂತಿಯ ಸಮೇತರಾಗಿ ಬಂದ ಪಂಚಪಾಂಡವರು ಕೈವಾರದ (ಆಗ ಏಕಚಕ್ರಪುರ) ಅಗ್ರಹಾರದಲ್ಲಿ ನೆಲೆಸಿದ್ದರು. ಕೈವಾರದ ಬೆಟ್ಟದಲ್ಲಿದ್ದ ರಾಕ್ಷಸ ಬಕಾಸುರನಿಗೆ ಪ್ರತಿದಿನವೂ ಒಂದು ಎತ್ತಿನ ಬಂಡಿ ತುಂಬಾ ಭಕ್ಷ್ಯಭೋಜ್ಯದ ಜತೆಗೆ ಒಬ್ಬ ಮನುಷ್ಯನನ್ನು ಆಹಾರವಾಗಿ ನೀಡಬೇಕಾಗಿತ್ತು. ಸರತಿಯಂತೆ ಕೈವಾರದ ಪ್ರಜೆಗಳು ಬಕಾಸುರನಿಗೆ ಆಹಾರವನ್ನು ಒದಗಿಸುತ್ತಿದ್ದರು. ಪಾಂಡವರು ತಂಗಿದ್ದ ವೃದ್ಧ ದಂಪತಿಗಳ ಕುಟುಂಬದ ಸರತಿ. ದಂಪತಿಯ ಏಕೈಕ ಪುತ್ರನನ್ನು ಬಕಾಸುರನಿಗೆ ಆಹಾರವಾಗಿ ಕಳುಹಿಸುವುದಕ್ಕೆ ದಂಪತಿ ಗೋಳಿಡುತ್ತಿದ್ದರು. ಆಗ ಕುಂತಿಯು ಭೀಮನನ್ನು ಕಳುಹಿಸಿದಳು. ಭೀಮ ರಾಕ್ಷಸನನ್ನು ಸಂಹಾರ ಮಾಡಿದನು.

ಈಶ್ವರನ ಭಕ್ತನಾದ ಬಕಾಸುರನ ಸಂಹಾರದ ಪಾಪ ಪರಿಹಾರ್ಥವಾಗಿ ಭೀಮ ಲಿಂಗವನ್ನು ಪ್ರತಿಷ್ಠಾಪಿಸಿದನು. ಸುತ್ತಲೂ ಉಳಿದ ನಾಲ್ವರು ಪಾಂಡವರು ಒಂದೊಂದು ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಅದೇ ಇಂದು ಭೀಮಲಿಂಗೇಶ್ವರ ದೇವಾಲಯ ಎಂದು ಪ್ರಸಿದ್ಧಿಯಾಗಿದೆ ಎಂಬ ಸ್ಥಳ ಪುರಾಣ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)