ಭಾನುವಾರ, ಆಗಸ್ಟ್ 14, 2022
22 °C
ಜಿಲ್ಲೆಯಾದ್ಯಂತ ಮಹಾಲಯ ಅಮವಾಸ್ಯೆ ಆಚರಣೆ

ಗತಿಸಿದ ಹಿರಿಯರಿಗೆ ಭಕ್ತಿಯ ಶ್ರಾದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಗುರುವಾರ ಶ್ರದ್ಧಾಭಕ್ತಿಯಿಂದ ಮಹಾಲಯ ಅಮಾವಾಸ್ಯೆ ಆಚರಿಸಲಾಯಿತು. ನಗರ ಮತ್ತು ಗ್ರಾಮೀಣ ಪ್ರದೇಶದ ನಿವಾಸಿಗಳು ಸ್ಮಶಾನಕ್ಕೆ ತೆರಳಿ ಹಿರಿಯರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಕ್ಕಲಕುಂಟೆ, ತಿಪ್ಪೇನಹಳ್ಳಿ, ಯಲುವಹಳ್ಳಿ ಸೇರಿದಂತೆ ನಗರ ಮತ್ತು ಗ್ರಾಮದ ಹೊರವಲಯದಲ್ಲಿರುವ ಸ್ಮಶಾನಗಳಿಗೆ ಕುಟುಂಬ ಸದಸ್ಯರ ಸಮೇತ ತೆರಳಿದ ಜನರು ಪೂರ್ವಜರು, ಕುಟುಂಬದ ಹಿರಿಯರ ಸಮಾಧಿಗಳನ್ನು ಪೂಜಿಸಿ, ತರ್ಪಣ, ಶ್ರಾದ್ಧಾಧಿಕ್ರಿಯೆಗಳ ಮೂಲಕ ಅವರನ್ನು ಸ್ಮರಿಸಿ, ಕೃತಜ್ಞತೆಗಳನ್ನು ಸಮರ್ಪಿಸಿದರು.

ಅಮಾವಾಸ್ಯೆ ಪ್ರಯುಕ್ತ ಜನರು ಮನೆಯಲ್ಲಿ ಅಗಲಿದ ಹಿರಿಯರ ಸ್ಮರಣೆಯಲ್ಲಿ ಅವರು ಇಷ್ಟಪಡುವ ತಿಂಡಿ ತಿನಿಸು ಸಿದ್ಧಪಡಿಸಿ, ತೊಡುತ್ತಿದ್ದ ಬಟ್ಟೆಬರೆಗಳನ್ನು ಶುಚಿಗೊಳಿಸಿ, ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು. ಹಿರಿಯರಿಗೆ ಅರ್ಪಿಸಿದ ಎಡೆ ಮನೆಯ ಮಹಡಿ ಮೇಲೆ ಇಟ್ಟು. ಅದನ್ನು ಕಾಗೆ ತಿಂದ ಬಳಿಕ ಪ್ರಸಾದದ ರೂಪದಲ್ಲಿ ಊಟ ಸೇವಿಸಿದರು.

‘ಮಹಾಲಯಪಕ್ಷದಲ್ಲಿ ಬರುವ ಅಮಾವಾಸ್ಯೆಯಂದು ಪಿತೃಗಳನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಲು ಪ್ರಶಸ್ತವಾದ ಸಮಯ. ನಮ್ಮ ವಂಶ, ಸಂತತಿ ಮುಂದುವರೆಯಲು ಕಾರಣೀಭೂತರಾದ ಹಿರಿಯರಿಗೆ ಕೃತಜ್ಞತೆ, ಧನ್ಯವಾದಗಳನ್ನು ಸಮರ್ಪಿಸುವುದು ಕೂಡ ಈ ಅಮಾವಾಸ್ಯೆಯ ವೈಶಿಷ್ಟ್ಯ. ಗತಿಸಿದ ಹಿರಿಯರಿಗೆ ಯಾವುದಾದರೂ ಕಾರಣಗಳಿಂದ ಶ್ರಾದ್ಧವನ್ನು ಮಾಡಲಾಗದಿದ್ದವರೂ ಮಹಾಲಯ ಅಮಾವಾಸ್ಯೆಯಂದು ತರ್ಪಣ ನೀಡಿದರೆ ಅದು ಶ್ರಾದ್ಧದಷ್ಟೇ ಫಲಕಾರಿ ಎನ್ನುತ್ತವೆ ಶಾಸ್ತ್ರಗಳು’ ಎಂದು ಕೋಟೆ ಪ್ರದೇಶ ನಿವಾಸಿ ಸೀತಾರಾಂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು