ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ ವಿಶೇಷ ವಿಭಾಗದ ಮುಖ್ಯಸ್ಥೆ ಶಿಡ್ಲಘಟ್ಟದ ವಿದ್ಯಾರ್ಥಿನಿ

Last Updated 28 ಮೇ 2021, 3:05 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಗರದ ಶ್ರೀಸರಸ್ವತಿ ಕಾನ್ವೆಂಟ್‌ನ ಹಳೆ ವಿದ್ಯಾರ್ಥಿನಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ತಮಿಳುನಾಡಿನ ಸರ್ಕಾರ ವಿಶೇಷ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರ ಮಗಳಾದ ಐಎಎಸ್ ಅಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಚುನಾವಣಾ ಪ್ರವಾಸ ಸಂದರ್ಭದಲ್ಲಿ ಜನರು ಮಂಡಿಸಿದ 100 ದಿನಗಳ ಕುಂದುಕೊರತೆ ಪರಿಹರಿಸಲು ಕ್ರಮಕೈಗೊಳ್ಳುವ ವಿಶೇಷ ವಿಭಾಗದ ಮುಖ್ಯಸ್ಥರಾಗಿ ಡಿಎಂಕೆ ಸರ್ಕಾರ ನೇಮಿಸಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ನಾಯಕ ತನ್ನ ‘ಉಂಗಲ್ ತೊಗುಡಿಯಿಲ್ ಸ್ಟಾಲಿನ್’ (ನಿಮ್ಮ ಕ್ಷೇತ್ರದಲ್ಲಿ ಸ್ಟಾಲಿನ್) ಕಾರ್ಯಕ್ರಮದ ಮೂಲಕ ಜನರಿಂದ ಅರ್ಜಿ ಸ್ವೀಕರಿಸಿದ್ದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 100 ದಿನಗಳಲ್ಲಿ ಈ ಅರ್ಜಿಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದರು.

1981 ಆಗಸ್ಟ್ 31 ಜನಿಸಿದ ಶಿಲ್ಪಾ ಅವರ ತಂದೆ ಪ್ರಭಾಕರ್ ಶಿಡ್ಲಘಟ್ಟದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ಆಗಿದ್ದರು.

ಪ್ರಾಥಮಿಕ ಶಿಕ್ಷಣವನ್ನು ನಗರದ ಶ್ರೀಸರಸ್ವತಿ ಕಾನ್ವೆಂಟ್ ನಲ್ಲಿ ಪೂರೈಸಿದ್ದರು. ನಂತರ ಪ್ರೌಢ ಶಿಕ್ಷಣವನ್ನು ಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜ್ನಲ್ಲಿ ಮುಗಿಸಿ, ಮುಂದಿನ ವಿದ್ಯಾಭ್ಯಾಸ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಇದಾದ ಬಳಿಕ ಯುಪಿಎಸ್ ಸಿ ಪರೀಕ್ಷೆಯಲ್ಲಿ 46ನೇ ಸ್ಥಾನದೊಂದಿಗೆ ಉತ್ತೀರ್ಣರಾದರು. 2018ರಲ್ಲಿ ತಮಿಳುನಾಡಿನ ತಿರುವನ್ವೆಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ತಮಿಳುನಾಡಿನ ಅಂಗನವಾಡಿ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಅಂಗನವಾಡಿ ಮಾಡಲು ನಿರ್ಧರಿಸಿ ತಮ್ಮ ಮೂರು ವರ್ಷದ ಹೆಣ್ಣುಮಗುವನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸುದ್ದಿಯಾಗಿದ್ದರು.

2013ರ ಜನವರಿಯಲ್ಲಿ ಶ್ರೀಸರಸ್ವತಿ ಕಾನ್ವೆಂಟ್ ನ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ಸನ್ಮಾನಿಸಲಾಗಿತ್ತು. ಆ ಸಂದರ್ಭದಲ್ಲಿ ಅವರು ತಮ್ಮನ್ನು ಬಾಲ್ಯದಲ್ಲಿ ರೂಪಿಸಿದ ಶಿಕ್ಷಕರನ್ನು ನೆನೆದು, ತಾನು ಬಾಲ್ಯ ಕಳೆದ ಊರಿನಲ್ಲಿ, ವ್ಯಕ್ತಿತ್ವ ರೂಪಿಸಿದ ಶಿಕ್ಷಕರ ಕೈಯಿಂದಲೇ ಗೌರವಿಸಲ್ಪಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT