ಸೋಮವಾರ, ಜುಲೈ 4, 2022
22 °C
ಕಟ್ಟಡ ನಿರ್ಮಾಣಕ್ಕೆ ₹ 99 ಲಕ್ಷ ವಿನಿಯೋಗ

ಬಾಗೇಪಲ್ಲಿ: ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರುಪಯುಕ್ತ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ₹ 99 ಲಕ್ಷ ವೆಚ್ಚದಡಿ ನಿರ್ಮಿಸಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ ಬಳಕೆಗೆ ಬಾರದಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 7ರ ಬಳಿ ಇದ್ದ 22 ಎಕರೆ ರೇಷ್ಮೆ ಇಲಾಖೆಗೆ ಸೇರಿದ ಜಮೀನನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಶಾಸಕರಾಗಿದ್ದಾಗ ಜಿ.ವಿ. ಶ್ರೀರಾಮರೆಡ್ಡಿ ಬದಲಾಯಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಮಂಜೂರು ಮಾಡಿಸಿದ್ದರು. ಕೇಂದ್ರ ಸರ್ಕಾರದಿಂದ ರಾಜ್ಯದ ಎಲ್ಲಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ವಿದ್ಯಾರ್ಥಿನಿಲಯ ನಿರ್ಮಿಸಲು ಆದೇಶಿಸಿ ಅನುದಾನವನ್ನು ಬಿಡುಗಡೆಗೊಳಿಸಲಾಗಿತ್ತು.

ಎನ್. ಸಂಪಂಗಿ ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 2013ರಲ್ಲಿ ಇದು ಲೋಕಾರ್ಪಣೆ ಗೊಂಡಿತು. 

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 25 ವಿದ್ಯಾರ್ಥಿನಿಯರು ಮತ್ತು 293 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಆವರಣದ ಮಹಿಳಾ ವಸತಿ ನಿಲಯದಲ್ಲಿ 100 ವಿದ್ಯಾರ್ಥಿನಿಯರು ಇರಲು ಕೊಠಡಿಗಳನ್ನು ನಿರ್ಮಿಸಲಾಗಿದೆ.

ಶೌಚಾಲಯ, ನೀರಿನ ವ್ಯವಸ್ಥೆ, ಅಡುಗೆ ಮನೆ, ವಿಶಾಲವಾದ ಊಟದ ಕೊಠಡಿ ನಿರ್ಮಿಸಲಾಗಿದೆ. ತಾಂತ್ರಿಕ ಶಿಕ್ಷಣಕ್ಕೆ ವಿದ್ಯಾರ್ಥಿನಿಯರ ದಾಖಲಾತಿ ಕಡಿಮೆ ಇದ್ದರೂ, ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿನಿ ನಿಲಯ ನಿರ್ಮಿಸಲಾಗಿದೆ. ಆದರೆ, ವಿದ್ಯಾರ್ಥಿನಿಯರ ಉಪಯೋಗಕ್ಕೆ ಬಾರದಂತಾಗಿದೆ. ಇಂದಿಗೂ ಈ ಕಟ್ಟಡದಲ್ಲಿ ಹಾಸ್ಟೆಲ್‌ ಆರಂಭಿಸಿಲ್ಲ. ತಾಲ್ಲೂಕು ಮಾತ್ರವಲ್ಲದೆ ದೂರದ ಪ್ರದೇಶಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಬೆಳಿಗ್ಗೆ-ಸಂಜೆ ಗ್ರಾಮ ಗಳಿಗೆ ಹೋಗಲು ತೊಂದರೆ ಆಗಿದೆ. ಸರ್ಕಾರಗಳಿಂದ ಹಾಸ್ಟೆಲ್‌ ನಿರ್ಮಿಸಿ ದರೂ ಬಳಕೆ ಮಾಡಿಕೊಂಡಿಲ್ಲ.

ವಿದ್ಯಾರ್ಥಿನಿಲಯದ ಒಳಗೆ-ಹೊರಗೆ ಕಳೆ, ಮುಳ್ಳಿನ ಗಿಡಗಳು ಬೆಳೆ ದಿವೆ. ಕಿಟಕಿ, ಬಾಗಿಲುಗಳು ಮುರಿದಿವೆ. ಕಟ್ಟಡಕ್ಕೆ ಬಳಕೆ ಮಾಡಿರುವ ನೀರಿನ ತೊಟ್ಟಿ, ವಿದ್ಯುತ್ ಮೀಟರ್ ಸೇರಿದಂತೆ ಕಟ್ಟಡಗಳು ಶಿಥಿಲಾವ್ಯವಸ್ಥೆ ತಲುಪಿದೆ. ಸರ್ಕಾರದ ಕೋಟ್ಯಂತರ ಹಣ ನಿರುಪಯುಕ್ತವಾಗಿದೆ.

‘ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಅರ್ಧ ಹಣ ಪಾವತಿ ಮಾಡಿದರೆ ಮಾತ್ರ ಪ್ರವೇಶ ಇರುತ್ತದೆ. ಉಚಿತ ಪ್ರವೇಶ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಇರುತ್ತಿಲ್ಲ. ಬಿಸಿಎಂ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಲ್ಲಿ ಎಲ್ಲವೂ ಉಚಿತ ಇರುವುದರಿಂದ ಬರುತ್ತಿಲ್ಲ. ಬಳಕೆಗೆ ಬಾರದ ಹಾಸ್ಟೆಲ್‌ ಅನ್ನು ರಗತಿ ಕೊಠಡಿಗಳಿಗೆ ಬಳಕೆಗೆ ಅವಕಾಶ ನೀಡಬೇಕು’ ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಸೋಮಶೇಖರ್ ಒತ್ತಾಯಿಸಿದರು.

‘ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ವಿದ್ಯಾರ್ಥಿನಿಯರ ದಾಖಲಾತಿ ಕಡಿಮೆ ಇದೆ. ಮುಂಗಡ ಹಣ ಪಾವತಿ ಮಾಡಿದರೆ ಮಾತ್ರ ಹಾಸ್ಟೆಲ್‌ನಲ್ಲಿ ಪ್ರವೇಶಕ್ಕೆ ಅವಕಾಶ ಇದೆ. ಹಣ ಕಟ್ಟಿ ವಿದ್ಯಾರ್ಥಿನಿಯರು ಇರಲ್ಲ. ಬೇರೆ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಉಚಿತವಾಗಿ ಸೌಲಭ್ಯ ಸಿಗಲಿದ್ದು ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ತರಗತಿ ಕೊಠಡಿಗಳು ಇವೆ. ತಾಂತ್ರಿಕ ಶಿಕ್ಷಣ ಇಲಾಖೆಯು ಅನುಮತಿ ನೀಡಿದರೆ ತರಗತಿಗಳನ್ನು ಆರಂಭಿಸುತ್ತೇವೆ’ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಜ್‌ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು