ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷೋದ್ಗಾರದ ನಡುವೆ ಸುಬ್ರಹ್ಮಣ್ಯೇಶ್ವರ ರಥೋತ್ಸವ

ಹುತ್ತಕ್ಕೆ ತನಿ ಎರೆದ ಹೆಂಗಳೆಯರು, ಮುಡಿಕೊಟ್ಟು ಪೂಜೆ ಸಲ್ಲಿಸಿದ ಭಕ್ತರು
Last Updated 31 ಜನವರಿ 2020, 11:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಶುಕ್ರವಾರ ಸಹಸ್ರಾರು ಸಂಖ್ಯೆಯ ಭಕ್ತಾದಿಗಳ ಹರ್ಷೋದ್ಗಾರಗಳ ಮಧ್ಯೆ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಷಷ್ಠಿ ಪ್ರಯುಕ್ತ ಸುಬ್ರಮಣ್ಯೇಶ್ವರ, ಈಶ್ವರ ದೇವಾಲಯ ಮತ್ತು ಆಂಜನೇಯ ದೇವಾಲಯಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಮಂಗಳಾರತಿ ಕೈಂಕರ್ಯಗಳು ನಡೆದವು. ಜಿಲ್ಲೆ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಉಪವಾಸ ವ್ರತ ಕೈಗೊಂಡ ಹೆಂಗಳೆಯರು ದೇಗುಲದ ಸಮೀಪದಲ್ಲಿರುವ ಹುತ್ತಕ್ಕೆ ಹಾಲು ಎರೆದು, ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿ ಕೊಟ್ಟು, ಪುಷ್ಕರಣಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಣ್ಣದ ಪತಾಕೆ, ಹೂವುಗಳಿಂದ ಶೃಂಗಾರಗೊಂಡ ರಥವನ್ನು ಭಕ್ತಗಣ ಹರ್ಷೋದ್ಗಾರದಿಂದ ಎಳೆಯುತ್ತ ದೇಗುಲದ ಸುತ್ತ ಸುತ್ತಿತು. ಈ ವೇಳೆ ಜಾತ್ರೆಯಲ್ಲಿದ್ದ ಭಕ್ತರು ರಥದ ಮೇಲೆ ಬಾಳೆ ಹಣ್ಣು ತೂರಿ ಧನ್ಯತಾ ಭಾವ ಮೆರೆದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮಜ್ಜಿಗೆ, ಉಪಾಹಾರ ವಿತರಣೆ: ಜಾತ್ರೆಗೆ ಬಂದವರ ಹಸಿವು, ದಣಿವು ದೂರ ಮಾಡಲು ಅನೇಕ ಕಡೆಗಳಲ್ಲಿ ಭಕ್ತರು ವಾಹನಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಉಪಾಹಾರ ವಿತರಣೆ ಮಾಡುತ್ತಿದ್ದ ದೃಶ್ಯಗಳು ಗೋಚರಿಸಿದವು. ಇನ್ನು, ಕುಟುಂಬ ಸಮೇತ ಊಟ ತಂದವರು ರಥೋತ್ಸವದ ಬಳಿ ಸಮೀಪದಲ್ಲಿಯೇ ಇದ್ದ ತೋಟಗಳತ್ತ ತೆರಳಿ ಮರಗಳ ನೆರಳಿನಲ್ಲಿ ಕುಳಿತು ವನಭೋಜನ ಸವಿದರು.

ಭರ್ಜರಿ ವ್ಯಾಪಾರ: ಜಾತ್ರೆಯಲ್ಲಿ ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್‌ಕ್ರಿಂ, ಜ್ಯೂಸ್‌, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು. ಹೀಗಾಗಿ ಅವುಗಳ ಮಾರಾಟಗಾರರಂತೂ ಪೈಪೋಟಿಯಲ್ಲಿ ವ್ಯಾಪಾರ ನಡೆಸಿದ್ದರು.

ಜಾತ್ರೆಗೆ ಬಂದ ಪುಟಾಣಿಗಳು, ಚಿಕ್ಕ ಮಕ್ಕಳಿಗೆ ಪೋಷಕರು ಬಗೆ ಬಗೆ ಆಟಿಕೆಗಳನ್ನು ಕೊಡಿಸುತ್ತಿದ್ದರು. ಹೆಣ್ಣುಮಕ್ಕಳು ಬಳೆ ಮಳಿಗೆಗಳ ಮುಂದೆ ಹೆಚ್ಚಾಗಿ ಕಂಡುಬಂದರು. ಕಿವಿಗಡಚಿಕ್ಕುವ ಸ್ವರದ ಪೀಪಿಯನ್ನು ಊದುತ್ತ ಜಾತ್ರೆಯ ತುಂಬಾ ಸುತ್ತುತ್ತಿದ್ದ ಪಡ್ಡೆ ಹುಡುಗರ ಹಿಂಡಿನ ಗದ್ದಲ ಆಗಾಗ ಜನರ ಗಮನ ಸೆಳೆಯುತ್ತಿತ್ತು.

ವಿಶೇಷ ಬಸ್ ವ್ಯವಸ್ಥೆ: ಜಾತ್ರೆಯ ಪ್ರಯುಕ್ತ ಚಿತ್ರಾವತಿಗೆ ನಗರದಿಂದ ಕೆಎಸ್‌ಆರ್‌ಟಿಸಿ ವತಿಯಿಂದ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುತೇಕ ಭಕ್ತರು ಸ್ವಂತ ಮತ್ತು ಖಾಸಗಿ ವಾಹನಗಳಲ್ಲಿ ಜಾತ್ರೆಗೆ ಬಂದರೆ, ಕೆಲವರು ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT