ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 37 ಶುದ್ಧ ನೀರಿನ ಘಟಕಗಳಿಗೆ ಬೀಗ

ಬೇಸಿಗೆಯ ಈ ದಿನಗಳಲ್ಲಿ ಘಟಕಕ್ಕೆ ಕಚ್ಚಾ ನೀರಿನ ಕೊರತೆ; ದುರಸ್ತಿಗೆ ಬಂದಿವೆ ಹಲವು ಘಟಕಗಳು
Published 29 ಮಾರ್ಚ್ 2024, 6:30 IST
Last Updated 29 ಮಾರ್ಚ್ 2024, 6:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೇಸಿಗೆಯ ಈ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಇದೇ ರೀತಿಯಲ್ಲಿ ಬಿಸಿಲು ಮತ್ತು ಮಳೆ ಆಗದಿದ್ದರೆ ಪರಿಣಾಮವು ಮತ್ತಷ್ಟು ಭೀಕರವಾಗಲಿದೆ. ಬೇಸಿಗೆಯ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಒಟ್ಟು 37 ಶುದ್ದ ಕುಡಿಯುವ ನೀರಿನ ಘಟಕಗಳು ಬಾಗಿಲು ಮುಚ್ಚಿವೆ. ಈ ಪರಿಣಾಮ ಆ ಗ್ರಾಮಗಳು ಸೇರಿದಂತೆ ಆ ಘಟಕಗಳ ನೀರನ್ನು ಆಶ್ರಯಿಸಿದ್ದ ಜನರು ತತ್ತರಿಸಿದ್ದಾರೆ. 

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಖಾಸಗಿ ಸಂಸ್ಥೆಗಳ ಟೆಂಡರ್, ವಿವಿಧ ಸಂಘ ಸಂಸ್ಥೆಗಳು ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುತ್ತಿವೆ. ಎಲ್ಲವೂ ಸೇರಿ ಜಿಲ್ಲೆಯಲ್ಲಿ ಒಟ್ಟು 956 ಘಟಕಗಳು ನಿರ್ಮಾಣವಾಗಿವೆ. ಇವುಗಳಲ್ಲಿ ನಾಲ್ಕು ಪೂರ್ಣವಾಗಿಲ್ಲ. ಅವುಗಳನ್ನು ಹೊರತುಪಡಿಸಿ 952 ಶುದ್ಧ ನೀರಿನ ಘಟಕಗಳು ಕಾರ್ಯಾಚರಣೆ ನಡೆಸುತ್ತಿದ್ದವು. 

ಆದರೆ ಈ ಬಾರಿ ಮಳೆ ಕೊರತೆಯ ಪರಿಣಾಮ ಘಟಕಗಳು ಬಾಗಿಲು ಮುಚ್ಚಿವೆ. ಘಟಕಗಳಿಗೆ ನೀರು ಪೂರೈಕೆ ಆಗದಿರುವುದು, ದುರಸ್ತಿಗೆ ಬಂದಿರುವುದು, ಗುತ್ತಿಗೆದಾರ ಸಂಸ್ಥೆಗಳು ಸೂಕ್ತವಾಗಿ ನಿರ್ವಹಣೆ ಮಾಡದಿರುವುದು, ಸ್ಥಳಾಂತದ ಕಾರಣದಿಂದ ಬಾಗಿಲು ಮುಚ್ಚಿವೆ.

ನೀರು ದೊರೆಯದ ಕಾರಣದಿಂದ 14 ಘಟಕಗಳು ಬಂದ್ ಆಗಿವೆ. ಸಂಸ್ಥೆಗಳ ಅಸಮರ್ಪಕ ನಿರ್ವಹಣೆಯ ಕಾರಣದಿಂದ ಐದು ಘಟಕಗಳು, ನಿರ್ವಹಣೆ ಮತ್ತು ದುರಸ್ತಿಯ ಕಾರಣದಿಂದ 11 ಮತ್ತು ಇತರೆ ಕಾರಣಗಳಿಂದ 7 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಕಳೆದ ವರ್ಷ ಜಿಲ್ಲೆಯಲ್ಲಿ ಮಳೆ ಸುರಿಯಲಿಲ್ಲ. ಈ ಪರಿಣಾಮ ಕೊಳವೆಬಾವಿಗಳು ಬತ್ತಿವೆ. ಈ ಶುದ್ಧ ನೀರಿನ ಘಟಕಗಳಿಗೆ ನೀರು ಪೂರೈಸುತ್ತಿದ್ದ ಬಹುತೇಕ ಕೊಳವೆ ಬಾವಿಗಳು ಬತ್ತಿವೆ. ಆದ ಕಾರಣ ಘಟಕಗಳಿಗೆ ನೀರು ದೊರೆಯುತ್ತಿಲ್ಲ. ನೀರು ದೊರೆದಿಯದ ಕಾರಣದಿಂದಲೇ ಬಹುತೇಕ ಘಟಕಗಳು ಬಂದ್ ಆಗಿವೆ. 

ಎಲ್ಲೆಲ್ಲಿ ಬಂದ್: ಬಾಗೇಪಲ್ಲಿ ತಾಲ್ಲೂಕಿನ ಕುಂಟಲಪಲ್ಲಿ, ಕೊಟನೂರು ಪಲ್ಲಿಯಲ್ಲಿ ಶುದ್ಧ ನೀರಿನ ಘಟಕದ ಸ್ಥಳಾಂತರದ ಸಮಸ್ಯೆ ಎದುರಾಗಿದೆ. ಬೇಬಿನಾಯಕನಪಲ್ಲಿ, ಜೂಲಪಾಳ್ಯ, ನಲ್ಲಪ್ಪರೆಡ್ಡಿಪಲ್ಲಿ, ದಿಗುವಗೊಲ್ಲಪಲ್ಲಿ, ತೋಳಪಲ್ಲಿ ಎಕೆ ಕಾಲೊನಿಯಲ್ಲಿ ನೀರಿನ ಸಮಸ್ಯೆಯಿಂದ ಘಟಕಗಳು ಬಂದ್ ಆಗಿವೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಳ್ಳಿ, ಅಗಲಗುರ್ಕಿಯಲ್ಲಿ ನೀರಿನ ಸಮಸ್ಯೆ, ಮುಸ್ಟೂರು ಗುಡಿಸಹಳ್ಳಿಯಲ್ಲಿ ದುರಸ್ಥಿಗೆ ಘಟಕಗಳು ಬಂದಿವೆ. ಚಿಕ್ಕಕಿರುಗುಂಬಿ, ಗೂರ್ಗಲನಾಗೇನಹಳ್ಳಿ, ಪೋಶೆಟ್ಟಿಹಳ್ಳಿ, ಶೆಟ್ಟಿಗೆರೆ, ಸಬ್ಬೇನಹಳ್ಳಿ, ನಾಯಕನಹಳ್ಳಿ, ಘಟಕಗಳು ಬಂದ್ ಆಗಿವೆ.

ಚಿಂತಾಮಣಿ ತಾಲ್ಲೂಕಿನ ಯಗವಕೋಟೆ, ಕರಿಯಪಲ್ಲಿ, ಸಿದ್ದೇಪಲ್ಲಿಯಲ್ಲಿ ಇತರೆ ಮತ್ತು ದುರಸ್ತಿ ಕಾರಣಗಳಿಂದ ಮತ್ತು ಗೌರಿಬಿದನೂರು ತಾಲ್ಲೂಕಿನ ಬಿ.ಬೊಮ್ಮಸಂದ್ರ ಪಂಚಾಯಿತಿ ವ್ಯಾಪ್ತಿಯ ಮಿದ್ದಳು, ರಾಯನಕಲ್ಲು ಗ್ರಾಮದಲ್ಲಿ ಸ್ಥಳಾಂತರದ ಸಮಸ್ಯೆಯಿಂದ ಘಟಕವು ಬಂದ್ ಆಗಿದೆ.

ಗುಡಿಬಂಡೆ ತಾಲ್ಲೂಕಿನ ನಲ್ಲಗೊಂಡರಾಯಹಳ್ಳಿ, ಚೆಂಡೂರು, ಪಾವಜನಹಳ್ಳಿ, ರೆಡ್ಡಿಪಲ್ಲಿ, ಕರೆಗಟ್ಟಮ್ಮನಹಳ್ಳಿಯಲ್ಲಿ ನೀರಿನ ಘಟಕಗಳನ್ನು ನಿರ್ವಹಿಸುವ ಸಂಸ್ಥೆಗಳ ಸಮಸ್ಯೆಯಿಂದ ಬಂದ್ ಆಗಿವೆ. ಶಿಡ್ಲಘಟ್ಟ ತಾಲ್ಲೂಕಿನ ಬೂದಾಳು, ಇದ್ದಲುಡು, ಕಂಬದಹಳ್ಳಿ ಮತ್ತು ಜಂಗಮಕೋಟೆ ಮತ್ತು ದಿಬ್ಬೂರಹಳ್ಳಿಯಲ್ಲಿ ನೀರಿನ ಸಮಸ್ಯೆ ಮತ್ತು ಸ್ಥಳಾಂತರದ ಕಾರಣದಿಂದ ಶುದ್ಧ ನೀರಿನ ಘಟಕಗಳು ಬಾಗಿಲು ಮುಚ್ಚಿವೆ. 

ಅಪಾಯದ ಕರೆ

ಚಿಕ್ಕಬಳ್ಳಾಪುರ ಜಿಲ್ಲೆಯ ಕುಡಿಯುವ ನೀರಿನಲ್ಲಿ ಪ್ಲೊರೈಡ್ ಮತ್ತು ಯುರೇನಿಯಂ ಅಂಶಗಳು ಇವೆ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಯುರೇನಿಯಂ ಪ್ರಮಾಣ ನೀರಿನಲ್ಲಿ ಅಪಾಯದ ಮಟ್ಟದಲ್ಲಿ ಇದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ಸಹ ಹೆಚ್ಚುತ್ತಿದೆ. ವಿಶೇಷವಾಗಿ ಈ ಬೇಸಿಗೆಯ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT