ಗುರುವಾರ , ಡಿಸೆಂಬರ್ 8, 2022
18 °C
100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಾಮಗಾರಿಗೆ ಸಚಿವರ ಶಂಕುಸ್ಥಾಪನೆ

ಗೌರಿಬಿದನೂರು: ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಟಿ.ಬಿ.ನಾಗರಾಜ್ ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸುಧಾಕರ್‌, ತಾಲ್ಲೂಕಿನಲ್ಲಿ ಐತಿಹಾಸಿಕ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ ₹27 ಕೋಟಿ ಅನುದಾನ‌ ಬಿಡುಗಡೆಯಾಗಿದೆ. ಶೀಘ್ರವೇ ಕಾಮಗಾರಿ ಮುಗಿಸಿ ವೈದ್ಯಕೀಯ ಸೇವೆ ಒದಗಿಸಲಾಗುವುದು. ಶಂಕುಸ್ಥಾಪನೆ ಮಾಡಿರುವ ನೂತನ ಆಸ್ಪತ್ರೆಯ ಕಟ್ಟಡವನ್ನು 18 ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ವೈದ್ಯರ ಸಮಸ್ಯೆಯಿದ್ದ ವೇಳೆ ಕೇವಲ 6 ತಿಂಗಳಿನಲ್ಲಿ ಗುತ್ತಿಗೆ ಆಧಾರದಲ್ಲಿ 4 ಸಾವಿರ ವೈದ್ಯರ ನೇಮಕ ಮಾಡಿ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಮಾಡುವಂತೆ ತಿಳಿಸಲಾಗಿದೆ. ಜತೆಗೆ ಆಸ್ಪತ್ರೆಗಳಲ್ಲಿ ಅವಶ್ಯಕವಿರುವ ಸೌಲಭ್ಯ ಒದಗಿಸುವ ಮೂಲಕ ಆರೋಗ್ಯ ಇಲಾಖೆಯಲ್ಲಿ ಮಹತ್ತ ಬದಲಾವಣೆ ಮಾಡಲಾಗದೆ.  ಪ್ರತಿ ತಾಲ್ಲೂಕು ಕೇಂದ್ರದಲ್ಲಿನ ಪ್ರಾಥಮಿಕ ಆರೋಗ್ಯಗಳಲ್ಲಿ ಅವಶ್ಯಕವಿರುವ ಶೇ 50 ಕ್ಕೂ ಹೆಚ್ಚು ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಶೀಘ್ರದಲ್ಲೇ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಏಕಕಾಲದಲ್ಲಿ ಆಯುಷ್ ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುವುದು. ಇದರಿಂದ ಬಡವರು ವರ್ಷಕ್ಕೆ ₹5 ಲಕ್ಷ ವರೆಗೆ ಸೇವೆ ಪಡೆಯಬಹುದು ಎಂದರು.

ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಸಾರ್ವಜನಿಕ ಆಸ್ಪತ್ರೆ ಅತ್ಯವಶ್ಯಕವಿದೆ. ಇದರಿಂದ ಗ್ರಾಮೀಣ ‌ಭಾಗದ ಬಡವರಿಗೆ ಉತ್ತಮ‌ ವೈದ್ಯಕೀಯ ಸೇವೆ ದೊರೆಯುತ್ತದೆ. ಸಮಾಜದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಸೇವೆಯನ್ನು ವ್ಯಾಪಾರೀಕರಣ ಮಾಡಿಕೊಂಡಿವೆ. ಅದರ ನಡುವೆ ಇಂತಹ ಕೇಂದ್ರಗಳು ಜನತೆಗೆ ವರದಾನವಾಗಲಿದೆ ಎಂದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ‌ಮಾತನಾಡಿ, ಸ್ಥಳೀಯ ‌ಜನತೆಗೆ ಗುಣಮಟ್ಟದ ‌ವೈದ್ಯಕೀಯ ಸೇವೆ ಕಲ್ಪಿಸುವ ಉದ್ಧೇಶದಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಶಿಥಿಲಾವಸ್ಥೆಯಲ್ಲಿದ್ದ ಹಳೆ ಕಟ್ಟಡದ ಸ್ಥಳದಲ್ಲಿ ನೂತನ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಇದೀಗ ₹27 ಕೋಟಿ ಅನುದಾನದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತಸದ ವಿಚಾರ ಎಂದರು. ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡ ‌ಬಳಿಕ ರಕ್ತನಿಧಿ ಕೇಂದ್ರ ಆರಂಭಿಸಲಾಗುವುದು.

 ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ನಗರಸಭೆ ಅಧ್ಯಕ್ಷ ಎಸ್.ರೂಪ ಅನಂತರಾಜು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಜಿ.ವೇಣುಗೋಪಾಲರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ‌ಕುಮಾರ್, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾ.ಪಂ. ಇಒ ಆರ್.ಹರೀಶ್, ನಗರಸಭೆ ಆಯುಕ್ತೆ ಡಿ.ಎಂ.ಗೀತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಎಸ್. ಚಂದ್ರಮೋಹನ್ ರೆಡ್ಡಿ, ತಾಲ್ಲೂಕು ಆಸ್ಪತ್ರೆಯ ಆಡಳಿತ ‌ವೈದ್ಯಾಧಿಕಾರಿ ಡಾ.ಎಲ್.ಲಕ್ಷ್ಮಿಕಾಂತ್, ಡಾ.ಎಚ್.ಎಸ್.ಶಶಿಧರ್, ಎ.ಮೋಹನ್, ಪ್ರಕಾಶ್, ರಮೇಶ್, ಜಿ.ವಿ.ಹನುಮೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು