ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಮಕ್ಕಳಿಗೆ ಸ್ಫೂರ್ತಿಯ ಸೆಲೆ

Published 5 ಸೆಪ್ಟೆಂಬರ್ 2023, 12:56 IST
Last Updated 5 ಸೆಪ್ಟೆಂಬರ್ 2023, 12:56 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಘದ ವತಿಯಿಂದ ಶಿಕ್ಷಕರ ದಿನ ಆಚರಿಸಲಾಯಿತು. 

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿರೆಡ್ಡಿ ಮಾತನಾಡಿ, ‘ಸರ್ವೆಪಲ್ಲಿ ಎಸ್.ರಾಧಾಕೃಷ್ಣನ್ ಒಬ್ಬ ವ್ಯಕ್ತಿ ಆಗಿರದೆ,  ಜ್ಞಾನದ ಸಂಕೇತವಾಗಿದ್ದರು. ವಿಶ್ವಕ್ಕೆ ಮಹಾನ್ ತತ್ವಜ್ಞಾನಿ ಶಿಕ್ಷಕ ರಾಧಾಕೃಷ್ಣನ್’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣ ಸಮುದಾಯಕ್ಕೆ ರಾಧಾಕೃಷ್ಣನ್ ಆದರ್ಶಪ್ರಾಯರಾಗಿದ್ದರು. ಆದರ್ಶ, ಪ್ರಾಮಾಣಿಕ ಶಿಕ್ಷಕರನ್ನು ಸಮಾಜ ಗುರುತಿಸುತ್ತದೆ. ಅವರ ಮಾರ್ಗದರ್ಶನದಲ್ಲಿ ಶಿಕ್ಷಕ ಸಮುದಾಯ ಜ್ಞಾನ ಬೆಳೆಸಿಕೊಳ್ಳಬೇಕು. ಆಳವಾದ ಅಧ್ಯಯನ ಮಾಡಿ ಆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸಬೇಕು. ಉತ್ತಮ ಶಿಕ್ಷಕರಾಗಿದ್ದವರನ್ನು ಸಮಾಜ ಗುರುತಿಸಲಿದೆ ಎಂದರು.

ಶಿಕ್ಷಕರು ಕಲ್ಲಿನ ಹೃದಯದ ವಿದ್ಯಾರ್ಥಿಗಳನ್ನು ಕರಗಿಸಿ, ಪ್ರೀತಿ, ವಿಶ್ವಾಸ ಮೂಡಿಸಬೇಕು. ಶಿಕ್ಷಕರು ಕೇವಲ ಬಿಲ್ ಮತ್ತು ಬೆಲ್‌ಗಾಗಿ ಕೆಲಸ ಮಾಡಬಾರದು. ಸಮಾಜಕ್ಕಾಗಿ, ದೇಶ ಕಟ್ಟುವ ಶಿಲ್ಪಿಗಳನ್ನು ತಯಾರು ಮಾಡಿದರೆ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆ. ಶಿಕ್ಷಕರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದರು.

ಸಾಮಾನ್ಯ ಶಿಕ್ಷಕ ಕೇವಲ ಬೋಧನೆ ಮಾಡುತ್ತಾನೆ. ಅತ್ಯುತ್ತಮ ಶಿಕ್ಷಕ ಮಕ್ಕಳಿಗೆ ಸ್ಫೂರ್ತಿ ತುಂಬಿಸಬೇಕು. ವಿದ್ಯಾರ್ಥಿಗಳ ಹೃದಯ ಗೆಲ್ಲಬೇಕು. ಮಕ್ಕಳಿಗೆ ಸ್ಫೂರ್ತಿಯ ಸೆಲೆಯಾಗಬೇಕು. ರಾಧಾಕೃಷ್ಣನ್ ಅವರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ತಮ್ಮ ಜೀವನವನ್ನು ಮಾದರಿಯಾಗಿ ರೂಪಿಸಿಕೊಳ್ಳಬೇಕು ಎಂದರು. 

ಸಂಘದ ಮಾಜಿ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಮಾತನಾಡಿ, ಸರ್ವೆಪಲ್ಲಿ ರಾಧಾಕೃಷ್ಣನ್ ಶಿಕ್ಷರಿಗೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತಿಹಾಸಪುಟಗಳಲ್ಲಿ ಸೇರಿದಂತಹ ಅನೇಕ ಮಹನೀಯರಿದ್ದಾರೆ. ಅವರಿಗೆ ನಮಿಸುವ ದಿನವಾಗಿದೆ ಎಂದು ನುಡಿದರು.

ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಕೆಲಸದಲ್ಲಿ ಲಂಚ ಪಡೆಯುವುದಿಲ್ಲ ಎಂದು ನಾಮಫಲಕ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಉಪನೋಂದಣಾಧಿಕಾರಿ ನಾರಾಯಣಪ್ಪ ಮತ್ತು ಉಪಖಜಾನೆಯ ಸುಬ್ಬಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಅಶೋಕ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ರವಣಪ್ಪ, ಗಂಗುಲಪ್ಪ, ಪ್ರಕಾಶರೆಡ್ಡಿ, ಎಂ.ಸಂಪಂಗಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ನೌಕರರು, ಅಧಿಕಾರಿಗಳು ಭಾಗವಹಿಸಿದ್ದರು.

ಚಿಂತಾಮಣಿಯಲ್ಲಿ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಅಧ್ಯಕ್ಷ ಮುನಿರೆಡ್ಡಿ ಉದ್ಘಾಟಿಸಿದರು.
ಚಿಂತಾಮಣಿಯಲ್ಲಿ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಅಧ್ಯಕ್ಷ ಮುನಿರೆಡ್ಡಿ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT