ಸೋಮವಾರ, ಜೂನ್ 14, 2021
24 °C
74ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಸುಧಾಕರ್‌ ಆಶಯ

ಪ್ರತಿಯೊಬ್ಬರ ಸ್ವಾವಲಂಬನೆಯೇ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಭಾರತ ಸ್ವಾತಂತ್ರ್ಯ ಹೋರಾಟವು ಜಗತ್ತಿನ ಇತರ ದೇಶಗಳ ಹೋರಾಟಕ್ಕಿಂತ ಭಿನ್ನವಾಗಿದೆ. ಕೇವಲ ದಾಸ್ಯದಿಂದ ಮುಕ್ತರಾಗುವುದಲ್ಲದೇ ದಾಸ್ಯದ ಮನಸ್ಸನ್ನು ಕಿತ್ತು ಹಾಕಿ ಪ್ರತಿಯೊಬ್ಬ ಪ್ರಜೆ ಸ್ವಾವಲಂಬಿಯಾಗಿ ಬಾಳುವುದನ್ನು ಕಲಿಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಸುಧಾಕರ್ ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಪ್ರತಿಯೊಬ್ಬ ವ್ಯಕ್ತಿಯು ಸ್ವಾವಲಂಬನೆ ಸಾಧಿಸುವುದು ಆತ್ಮ ನಿರ್ಭರ ಭಾರತ್ ಯೋಜನೆಯ ಆಶಯ. ಇದಕ್ಕಾಗಿ ₹ 2ಸಾವಿರ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲಾಗಿದೆ. ಕೋವಿಡ್ ಸಂದರ್ಭದ ಭೌತಿಕ ಮತ್ತು ಮಾನವ ಸಂಪನ್ಮೂಲದ ನಷ್ಟಕ್ಕೆ ಪರಿಹಾರವಾಗಿ ಆರ್ಥಿಕತೆ ಬಲಗೊಳಿಸುವ ಜೀವನ ವಿಧಾನಕ್ಕೆ ಪ್ರಧಾನಿ ಅಗತ್ಯ ಕ್ರಮ ಕೈಗೊಂಡಿದ್ದಾರೆ’
ಎಂದರು.

‘ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸರ್ಕಾರಿ ಆಸ್ಪತ್ರೆಯೊಂದಿಗೆ ಹೆಲ್ತ್ ಸಿಟಿ ನಿರ್ಮಾಣ, ಎಚ್.ಎನ್ ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆಗುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಕಾರಣ ಮಂಚೇನಹಳ್ಳಿಯನ್ನು ತಾಲ್ಲೂಕಾಗಿ ರೂಪಿಸಿರುವ ಮಹತ್ವದ ಕಾರ್ಯ ಸರ್ಕಾರದಿಂದ ಆಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಹೆಚ್ಚುವರಿ ಸೌಲಭ್ಯ ಮತ್ತು ವೈದ್ಯರ ನೇಮಕ, ಹೆಲ್ತ್ ಸಿಟಿಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆಯ ಜೊತೆಗೆ ಪ್ರತಿ ವ್ಯಕ್ತಿಯ ಆರೋಗ್ಯ ಸ್ಥಿತಿಗತಿಗಳನ್ನು ಕುರಿತಂತೆ ವಿಶ್ವಾಸನೀಯ ಅಂಶಗಳನ್ನು ದಾಖಲಿಸಿ, ಹೆಲ್ತ್ ಕಾರ್ಡ್ ವಿತರಿಸಲಾಗುತ್ತದೆ’ ಎಂದರು.

‘6-7 ವರ್ಷಗಳಲ್ಲಿ ಸರ್ಕಾರದ ದೊಡ್ಡ ಪ್ರಮಾಣದ ಅನುದಾನದಿಂದ ಎತ್ತಿನಹೊಳೆ ಯೋಜನೆ, ಜಿಲ್ಲಾಡಳಿತ ಭವನ, ಮೂಲಭೂತ ಸೌಲಭ್ಯಗಳ ವಿಸ್ತರಣೆ, ಸಾಮಾಜಿಕ ನ್ಯಾಯದ ಯೋಜನೆಗಳ ಜಾರಿ, ಪ್ರವಾಸಿ ಸ್ಥಳಗಳ ಅಭಿವೃದ್ಧಿ, ಜಿಲ್ಲಾ ಆಸ್ಪತ್ರೆ ನಿರ್ಮಾಣ, ಜಿಲ್ಲಾ ಗ್ರಂಥಾಲಯ, ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪ್ರವಾಸಿ ಮಂದಿರ, ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ’ ಎಂದರು.

‘ನಮ್ಮ ಸ್ವಾತಂತ್ರ್ಯ ಹೋರಾಟ ಸಾಮ್ರಾಜ್ಯಶಾಹಿ ಹಾಗೂ ದಾಸ್ಯದ ವಿರುದ್ಧ ಸರ್ವ ಸಮಾನತೆಗಾಗಿ ನಡೆದ ದೀರ್ಘಕಾಲದ ಸೈದ್ದಾಂತಿಕ ಹೋರಾಟ. ಸ್ವಾತಂತ್ರ್ಯ ಗಳಿಸುವುದರ ಜೊತೆಗೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಕಲ್ಪಿಸುವ ಮೂಲಕ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಒದಗಿಸುವ ಹೋರಾಟಗಾರರ ಕನಸುಗಳನ್ನು ನನಸುಗೊಳಿಸಬೇಕು’ ಎಂದು ಹೇಳಿದರು.

ಸಂಸದ ಬಿ.ಎನ್.ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್, ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ರಘುನಂದನ್
ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.